ಸ್ವಾಭಿಮಾನದ ಜೀವನಕ್ಕೆ ಕೂಲಿ ಅಡ್ಡಿಯಿಲ್ಲ: ಕೆ. ರಾಜೇಂದ್ರ

7
ಕಟ್ಟಡ ಕಾರ್ಮಿಕರಿಗೆ ತರಬೇತಿ; ಕಿಟ್ ವಿತರಣೆ ಕಾರ್ಯಕ್ರಮ

ಸ್ವಾಭಿಮಾನದ ಜೀವನಕ್ಕೆ ಕೂಲಿ ಅಡ್ಡಿಯಿಲ್ಲ: ಕೆ. ರಾಜೇಂದ್ರ

Published:
Updated:
Deccan Herald

 ಬಿಡದಿ: ‘ಸ್ವಾಭಿಮಾನದಿಂದ ಜೀವನ ನಡೆಸಲು ಕೂಲಿ ಸೇರಿದಂತೆ ಯಾವುದೇ ಕೆಲಸಗಳಲ್ಲಿ ಬೇಧ ಎಣಿಸಬಾರದು. ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಆರ್ಥಿಕವಾಗಿ ಏಳಿಗೆ ಸಾಧಿಸಬಹುದು’ ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಹೇಳಿದರು.

ಇಲ್ಲಿನ ಜೋಗರದೊಡ್ಡಿಯಲ್ಲಿನ ನಿರ್ಮಿತಿ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಶ್ರಮ ಸಾಮರ್ಥ್ಯ ಯೋಜನೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತರಬೇತಿ ಪ್ರಾರಂಭೋತ್ಸವ ಹಾಗೂ ಬ್ಯಾಚ್-1 ಮತ್ತು ಬ್ಯಾಚ್-2ನಲ್ಲಿ ತರಬೇತಿ ಪಡೆದ ಕಾರ್ಮಿಕರುಗಳಿಗೆ ಪ್ರಮಾಣ ಪತ್ರ ಮತ್ತು ಉಪಕರಣ ಪೆಟ್ಟಿಗೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ನಿರ್ಮಾಣದ ಕೂಲಿಕಾರರ ಕೆಲಸವೂ ತನ್ನದೇ ಆದ ಮಹತ್ವ ಪಡೆದಿದೆ. ಅದರಲ್ಲಿ ಪರಿಣತಿ ಗಳಿಸಬೇಕು. ಕಾಲ ಕಾಲಕ್ಕೆ ಕಾರ್ಮಿಕ ಇಲಾಖೆಯವರು ನೀಡುವ ತರಬೇತಿಗಳಿಗೆ ಹಾಜರಾಗಿ ಕೌಶಲವನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಒಂದು ಚದರ ಕಟ್ಟಡ ನಿರ್ಮಾಣಕ್ಕೆ ₨32 ಸಾವಿರ ಇದ್ದರೆ, ಇತರೆಡೆ ₨22 ಸಾವಿರ ಇದೆ. 10 ಚದರ ಅಡಿಯ ಕಟ್ಟಡವನ್ನು ನಿರ್ಮಿಸಿದರೆ ಅಂದಾಜು ₨3 ಲಕ್ಷದವರೆಗೆ ಕೂಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

‘ಕೂಲಿಕಾರರು ಮದ್ಯವರ್ತಿಗಳೊಂದಿಗೆ ವ್ಯವಹರಿಸಬಾರದು. ನೇರವಾಗಿ ಕಾರ್ಮಿಕ ಅಧಿಕಾರಿಗಳನ್ನೇ ಸಂಪರ್ಕಿಸಬೇಕು, ಅಲ್ಲೂ ಆಗದಿದ್ದ ಪಕ್ಷದಲ್ಲಿ ನನ್ನನ್ನು ಭೇಟಿ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಮಾತನಾಡಿ, ದೇಶದ ಅತ್ಯಂತ ಸುಂದರ ನಿರ್ಮಾಣವಾದ ತಾಜ್ ಮಹಲ್ ಅನ್ನು ಶಾಷಜಹಾನ್ ಕಟ್ಟಿಸಿದರೂ, ಅದನ್ನು ನಿರ್ಮಾಣ ಮಾಡಿದ ಕೀರ್ತಿ ಕಟ್ಟಡ ಕಾರ್ಮಿಕರಿಗೆ ಸಲ್ಲುತ್ತದೆ ಎಂದರು.

ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಖ್ಯ ಕಾರ್ಮಿಕರಿಗೆ ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಅವರಿಗೆ ಶಕ್ತಿ ತುಂಬಲು, ಅವರಲ್ಲಿ ಕೌಶಲವನ್ನು ವೃದ್ಧಿಸಲು ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಒಂದು ಮತ್ತು ಎರಡು ಹಂತದ ತರಬೇತಿದಾರರಿಗೆ ಕಿಟ್ ಹಾಗೂ ಪ್ರಶಸ್ತಿ ಪತ್ರವನ್ನು ಹಾಗೂ ಗೌರವಧನದ ಚೆಕ್ ವಿತರಿಸಲಾಯಿತು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಎಚ್.ವಿ. ಗೋವಿಂದರಾಜು, ಕಾರ್ಮಿಕ ನಿರೀಕ್ಷಕ ಯತೀಶ್ ಕುಮಾರ್, ಮಂಜುನಾಥ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್ ಇದ್ದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜೀವ್‍ ಗಾಂಧಿ, ಗ್ರಾಮೀಣ ವಸತಿ ನಿಗಮ, ರಾಜ್ಯ ನಿರ್ಮಾಣ ಕೇಂದ್ರ ಹಾಗೂ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !