ಜ್ಞಾನ ಸಂಸ್ಕೃತಿ ಬಿಂಬಿಸುವ ಕೆಲಸಕ್ಕೆ ಆದ್ಯತೆ ಬೇಕು: ಮಹಿಳಾ ಚಿಂತಕಿ ಇಂದಿರಾ

ಭದ್ರಾವತಿ: ‘ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವನ್ನು ತಿಳಿಸುವ ಜ್ಞಾನ ಸಂಸ್ಕೃತಿ ಬಿಂಬಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ಕೊಟ್ಟು ಕೆಲಸ ಮಾಡಬೇಕು’ ಎಂದು ಮಹಿಳಾ ಚಿಂತಕಿ ಇಂದಿರಾ ಕೃಷ್ಣಪ್ಪ ಹೇಳಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಭಾನುವಾರ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮಾನ ಶಿಕ್ಷಣ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನಕ್ಕೆ ಹಣದ ಕೊರತೆ ಎದುರಾಗಿದೆ ಎಂಬ ಮಾತಿದೆ. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಸರ್ಕಾರ ಮೊದಲ ಆದ್ಯತೆಯ ರೀತಿಯಲ್ಲಿ ಭವನ ನಿರ್ಮಾಣ ಮುಗಿಸಬೇಕು ಎಂದು ಆಗ್ರಹಿಸಿದರು.
ಯಾವುದೇ ಒಂದು ಸೌಲಭ್ಯದ ನಿರಾಕರಣೆ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ಅರಿತು ನಮ್ಮನ್ನಾಳುವ ಜನರು, ಸರ್ಕಾರ ಕೆಲಸ ಮಾಡಬೇಕು, ಇದಕ್ಕೆ ಹೊರತಾಗಿ ಚಿಂತನೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಚಂದ್ರಶೇಖರಯ್ಯ ಮಾತನಾಡಿ ‘ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗಿ ಸ್ಥಳೀಯ ಭಾಷೆಯನ್ನು ಕಡೆಗಣಿಸಿದ ಪರಿಣಾಮ ಸಮಾನ ಶಿಕ್ಷಣದ ಕಲ್ಪನೆ ನೆನೆಗುದಿಯ ಹಾದಿ ಹಿಡಿದಿದೆ’ ಎಂದರು.
ಶಿಕ್ಷಣ ಹಕ್ಕು ಕಾಯ್ದೆಯಡಿ ಎಲ್ಲರಿಗೂ ಎಲ್ಲಾ ಶಾಲೆಯಲ್ಲಿ ಪ್ರವೇಶಾತಿ ಸಿಗುತ್ತದೆ ಎಂದು ಸರ್ಕಾರ ಭಾವಿಸಿದೆ, ಆದರೆ ಅದರಲ್ಲಿನ ಹಲವು ಲೋಪಗಳು ತಳ, ಹಿಂದುಳಿದ ಸಮುದಾಯದ ಮಕ್ಕಳ ಹಕ್ಕಿನ ಮೇಲೆ ಹೊರ ಉಂಟು ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಜಯಮ್ಮ ಗಿರಿಯಪ್ಪ ವಹಿಸಿದ್ದರು. ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಡಿ.ಸಿ. ಮಾಯಣ್ಣ, ಶಿಕ್ಷಕ ಹರೋನಹಳ್ಳಿ ಸ್ವಾಮಿ, ನಗರಸಭೆ ಅಧ್ಯಕ್ಷೆ ಎಸ್. ಹಾಲಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಮಿತಿ ಸದಸ್ಯೆ ಭಾರತಿ, ಹನುಮಮ್ಮ, ಬಿ.ಎನ್. ರಾಜು, ಅಪೇಕ್ಷ ಮಂಜುನಾಥ, ಚಂದ್ರಶೇಖರ್, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರೇವಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.