ಭಾನುವಾರ, ಮೇ 22, 2022
22 °C
ಪ್ರವಾಸಿಗರ ದಾಂದಲೆಯಿಂದ ಗಿರಿ ಸೌಂದರ್ಯಕ್ಕೆ ಕುತ್ತು *ತ್ಯಾಜ್ಯ ವಿಲೇವಾರಿಯೇ ಬಲು ದೊಡ್ಡ ಸಮಸ್ಯೆ

ಕೊಡಚಾದ್ರಿ ಗಿರಿ ತುಂಬೆಲ್ಲ ರಾಶಿ ರಾಶಿ ತ್ಯಾಜ್ಯ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮಲೆನಾಡ ಸೊಬಗಿನ ಹೊನ್ನ ಶಿಖರ, ಪ್ರವಾಸಿಗರ ಆರಾಧ್ಯ ತಾಣವಾಗಿರುವ ತಾಲ್ಲೂಕಿನ ಕೊಡಚಾದ್ರಿ ಬೆಟ್ಟ ದಿನದಿಂದ ದಿನಕ್ಕೆ ನರಕಕೂಪವಾಗಿ ಪರಿಣಮಿಸಿದೆ. ಬೆಟ್ಟಕ್ಕೆ ತನ್ನ ಸೊಬಗಿನ ಸೌಂದರ್ಯವೇ ಶಾಪವಾಗಿದೆ.

ಮೋಜು ಮಸ್ತಿ ಮಾಡುವ ಪ್ರವಾಸಿಗರ ಸ್ವೇಚ್ಛಾಚಾರದ ನಡೆಯಿಂದಾಗಿ ರಮಣೀಯ ಪ್ರಕೃತಿ ಸಿರಿಯ ದೃಶ್ಯ ಕಾವ್ಯದಂತಿರುವ ಕೊಡಚಾದ್ರಿ ಸೌಂದರ್ಯಕ್ಕೆ ಕುತ್ತು ತಂದಿದೆ. ತನ್ನ ಸೆರಗಿನುದ್ದಕ್ಕೂ ಬರೀ ಕಸ, ತ್ಯಾಜ್ಯವನ್ನೇ ತುಂಬಿಕೊಂಡ ಸಸ್ಯ ಶ್ಯಾಮಲೆ ನೈಜ ಪರಿಸರ ಪ್ರೇಮಿಗಳನ್ನು ಅಣಕಿಸುತ್ತಿದೆ.

ಈಗಂತೂ ರಜೆ ದಿನಗಳಲ್ಲಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಹೆಚ್ಚು. ಗೆಳೆಯರೊಂದಿಗೆ ದಾಂಗುಡಿ ಇಡುವ ಪ್ರವಾಸಿಗರು ಒಂದೆರಡು ದಿನವಿದ್ದು, ಮೋಜು ಮಸ್ತಿ ನಡೆಸಿ ಹೋಗುವುದು ಇಲ್ಲಿ ಸಾಮಾನ್ಯ. ಇಲ್ಲಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಡುವ ಬಾಟಲಿ, ಪ್ಲಾಸ್ಟಿಕ್, ಕಸಕಡ್ಡಿ, ತ್ಯಾಜ್ಯಗಳು ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿವೆ. ಚಾರಣಿಗರು, ಪ್ರವಾಸಿಗರು ಬಿಸಾಡುವ ರಾಶಿ ರಾಶಿ ನೀರಿನ ಬಾಟಲು, ಮದ್ಯದ ಬಾಟಲು, ತ್ಯಾಜ್ಯ ವಸ್ತುಗಳು ಕೊಡಚಾದ್ರಿ ಅಂದಕ್ಕೆ ಕಪ್ಪು ಚುಕ್ಕೆಯಂತಾಗಿದೆ.

ಬಲು ಕಷ್ಟದ ಕೆಲಸ:

ಕುದುರೆಮುಖ ವನ್ಯಜೀವಿ ವಿಭಾಗದ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿರುವ ಕೊಡಚಾದ್ರಿ ಬೆಟ್ಟವನ್ನು ತ್ಯಾಜ್ಯವಸ್ತುಗಳನ್ನು ಕಾಪಿಡುವುದೆ ಬಲು ಕಷ್ಟದ ಕೆಲಸವಾಗಿದೆ. ಮೋಜು ಮಸ್ತಿಯಲ್ಲಿರುವ ಪ್ರವಾಸಿಗರು ಬೆಟ್ಟದ ಸೌಂದರ್ಯದತ್ತ ಹೆಚ್ಚು ಗಮನಹರಿಸದ ಕಾರಣ ನಿರ್ಮಲ ಕೊಡಚಾದ್ರಿ ಎಂಬುದು ಕನಸಿನ ಮಾತು ಆಗಿದೆ.

ಸಂಬಂಧಪಟ್ಟವರು ವಾರ ವಾರ ಸ್ವಚ್ಛ ಮಾಡಿದರೂ ಕಸ ದುಪ್ಪಟ್ಟಾಗಿ ಬೆಳೆಯುತ್ತಲೇ ಇದೆ. ಕೊಡಚಾದ್ರಿ ತಪ್ಪಲ್ಲನ್ನು ಸ್ವಚ್ಛವಾಗಿಡಲು ಇಲ್ಲಿನ ಸ್ಥಳೀಯ ಸಂಘ ಸಂಸ್ಥೆಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರೂ ವರ್ಷ ವರ್ಷಕ್ಕೂ ಪ್ರವಾಸಿಗರು ಕಸದ ತೊಟ್ಟಿಯಾಗಿರುವುದು ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿ ಆಗಿದೆ.

ಬೆಟ್ಟದ ಸೌಂದರ್ಯಕ್ಕೆ ಕುತ್ತು:

ಬೆಟ್ಟದದಾರಿ, ಹುಲ್ಲುಗಾವಲು, ಕಾಲು ಹಾದಿಯ ಇಕ್ಕೆಲಗಳಲ್ಲಿ, ಬೆಟ್ಟದ ತುದಿಯಲ್ಲಿರುವ ಸರ್ವಜ್ಞ ಪೀಠದ ಆಸುಪಾಸಿನಲ್ಲಿಯೇ ಪ್ರವಾಸಿಗರು ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಾರೆ. ಇಂತಹ ಹಾನಿಕಾರಕ ವಸ್ತುಗಳಿಂದ ನಿತ್ಯಹರಿದ್ವರ್ಣದ ಕಾಡು, ಹುಲ್ಲುಗಾವಲು ಹೊಂದಿರುವ ವಿಶಿಷ್ಟ ಜೀವವೈವಿಧ್ಯ ತಾಣ ತನ್ನ ತನವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದು ಪ್ರಕೃತಿ ಸೌಂದರ್ಯಕ್ಕೆ ಮಹಾಮಾರಿ ರೂಪದಲ್ಲಿ ಕಾಡುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಇಲ್ಲಿನ ಅಪರೂಪದ ಪ್ರಾಣಿಪಕ್ಷಿ ಸಂಪತ್ತು. ಔಷಧೀಯ ಸಸ್ಯ ಸಂಕುಲಕ್ಕೆ ಹಾನಿಯಾಗುವ ಅಪಾಯವಿದೆ.

ಕೊಡಚಾದ್ರಿ ಬೆಟ್ಟವನ್ನು ಕಸ ತ್ಯಾಜ್ಯ ಸಮಸ್ಯೆಯಿಂದ ಮುಕ್ತಗೊಳಿಸಲು ಸರ್ಕಾರ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿರುವುದು ಅವಶ್ಯಕ. ಪ್ರವಾಸೋದ್ಯಮ ಇಲಾಖೆ ಬೆಟ್ಟದ ಅಭಿವೃದ್ಧಿಯ ಜೊತೆಗೆ ಬೆಟ್ಟದ ಸೌಂದರ್ಯ ರಕ್ಷಣೆಯಲ್ಲಿ ಜರೂರು ಕ್ರಮ ಕೈಗೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ಇಲಾಖೆ ಎಡವಿದರೆ ಮುಂದೊಂದು ದಿನ ಬಾರೀ ಬೆಲೆ ತೆರಬೇಕಾಗುವ ಅನಿವಾರ್ಯತೆ ಸೃಷ್ಟಿ ಆಗಲಿದೆ ಎಂಬುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಭದ್ರತಾ ಠೇವಣಿ:

ಅರಣ್ಯ ಇಲಾಖೆ ಮತ್ತು ಕಟ್ಟಿನಹೊಳೆಯ ಕೊಡಚಾದ್ರಿ ಪರಿಸರ ಅಭಿವೃಧ್ಧಿ ಸಮಿತಿ ಜಂಟಿಯಾಗಿ ಕೊಡಚಾದ್ರಿ ತಪ್ಪಲಿನಲ್ಲಿ ಮಾಲಿನ್ಯ ಕಾಪಿಡುವಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿವೆ. ಜೂನ್ 5ರಿಂದ ಬೆಟ್ಟದ ತಪ್ಪಲಿನ ಕಟ್ಟಿನಹೊಳೆ ಗೇಟ್‌ನಲ್ಲಿ ನೀರು, ಜ್ಯೂಸ್ ಇತ್ಯಾದಿ ಬಾಟಲಿಗೆ ಒಂದಕ್ಕೆ ₹10, ಪ್ಲಾಸ್ಟಿಕ್ ಕವರ್‌ಗೆ ₹5 ಇತರೆ ವಸ್ತುಗಳಿಗೆ ₹2 ರಂತೆ ಆರಂಭದಲ್ಲಿ ಭದ್ರತಾ ಶುಲ್ಕ ನಿಗದಿಪಡಿಸಲಾಗಿದೆ. ಪ್ರವಾಸಿಗರು ತಮ್ಮ ವಸ್ತುಗಳಿಗೆ ಈ ಠೇವಣಿ ಕಟ್ಟಬೇಕಿದೆ. ಬೆಟ್ಟದಿಂದ ವಾಪಸ್‌ ಬರುವಾಗ ಆ ವಸ್ತುಗಳನ್ನು ಮರಳಿಸಿದರೆ ತಾವು ಕಟ್ಟಿರುವ ಭದ್ರತಾ ಠೇವಣಿ ಹಿಂಪಡೆಯಬಹುದಾದ ವ್ಯವಸ್ಥೆ ಇಲ್ಲಿದೆ.

ನಿಷೇಧದ ನಡುವೆಯೂ ಪ್ರವಾಸಿಗರ ಚಾರಣ:

ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಂಡು ಬಂದ ಮಂಗನ ಕಾಯಿಲೆಯಿಂದ ಎಚ್ಚೆತ್ತ ವನ್ಯಜೀವಿ ವಿಭಾಗ ಈ ಹಿಂದೆ ಕೊಡಚಾದ್ರಿ ಬೆಟ್ಟದಲ್ಲಿ ಚಾರಣಕ್ಕೆ ನಿಷೇಧ ಹೇರಿದೆ. ಆದರೂ ರಾಜ್ಯದ ವಿವಿಧೆಡೆಗಳಿಂದ ಬರುವ ಪ್ರವಾಸಿಗರು ಬೆಟ್ಟದಲ್ಲಿ ಚಾರಣ ಮಾಡುತ್ತಲೇ ಇದ್ದಾರೆ. ಅದರಲ್ಲೂ ಕೇರಳದಿಂದ ಬೆಟ್ಟಕ್ಕೆ ಬರುವವರು ಚಾರಣ ಮಾಡುವವರೇ ಹೆಚ್ಚು.

ಬೆಟ್ಟದ ತಪ್ಪಲಿನಲ್ಲಿ ಸೂಕ್ತ ತಪಾಸಣಾ ಗೇಟುಗಳಿಲ್ಲ. ಇರುವ ಗೇಟ್‌ನಲ್ಲಿ ಸಿಬ್ಬಂದಿ ಕೊರತೆ ಇದ್ದು, ಚಾರಣ ತಡೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ವಳೂರು ಗೇಟ್ ಮಾರ್ಗವಾಗಿ ಪ್ರವಾಸಿಗರು ಒಳನುಗ್ಗುತ್ತಿದ್ದಾರೆ. ಸಿಬ್ಬಂದಿ ಪ್ರಶ್ನಿಸಿದರೆ 'ಇಲ್ಲಿ ಮಂಗನ ಕಾಯಿಲೆ ಇಲ್ಲ. ನಾವು ನಡೆದೇ ಹೋಗುತ್ತೇವೆ. ಸುಮ್ಮನೆ ಇಲ್ಲದ ಕಾರಣ ನೀಡಿ ಪ್ರವಾಸಿಗರ ಆಸೆಗಳಿಗೆ ನೀರು ಹಾಕಬೇಡಿ' ಎಂದು ಸವಾಲು ಹಾಕುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು