ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಖಾಸಗೀತನ: ಇರಲಿ ಎಚ್ಚರ

Last Updated 16 ಜೂನ್ 2018, 11:25 IST
ಅಕ್ಷರ ಗಾತ್ರ

ಮೊಬೈಲ್‌ನಲ್ಲಿ ನೀವು ಮುಖ್ಯವಾದ ಯಾವುದೋ ವಿಷಯವನ್ನು ತುರ್ತಾಗಿ ಹುಡುಕುತ್ತಿರುತ್ತೀರಿ. ಅದೇ ವೇಳೆಗೆ ಯಾವುದೋ ಇ–ಮೇಲ್‌, ಅಲರ್ಟ್‌ಗಳ ಪಾಪ್ಅಪ್ ಬರುತ್ತವೆ. ಅದನ್ನು ಹಾಗೇ ಬದಿಗೆ ಸರಿಸಿ ನಿಮ್ಮ ಕೆಲಸ ಮುಂದುವರೆಸುತ್ತೀರಿ. ಮತ್ತೆ ಆ ಕಡೆಗೆ ಗಮನ ಹರಿಸುವುದೇ ಇಲ್ಲ.

ಕಂಪನಿಗಳು ತಮ್ಮ ‘ಪ್ರೈವಸಿ ಪಾಲಿಸಿ’ಗಳಲ್ಲಾಗಿರುವ (ಖಾಸಗೀತನದ ನಿಯಮ) ಬದಲಾವಣೆಗಳ ಕುರಿತು ಸಾಕಷ್ಟು ಇ–ಮೇಲ್‌ ಹಾಗೂ ಅಲರ್ಟ್‌ಗಳನ್ನು ಕಳುಹಿಸುತ್ತಿರುತ್ತವೆ. ಆನ್‌ಲೈನ್‌ ಮಾಹಿತಿ ಸೋರಿಕೆ ಹೆಚ್ಚುತ್ತಿರುವ ಈ ಕಾಲದಲ್ಲಿ, ಡಿಜಿಟಲ್ ಪ್ರೈವಸಿ ಕಾಪಾಡಿಕೊಳ್ಳುವ ಕುರಿತು ಇಂತಹ ಇ–ಮೇಲ್‌ ಹಾಗೂ ಅಲರ್ಟ್‌ಗಳಲ್ಲಿ ಉಪಯುಕ್ತ ಮಾಹಿತಿ ಅಡಕವಾಗಿರಬಹುದು. ಹಾಗಾಗಿ ಅವುಗಳನ್ನು ನಿರ್ಲಕ್ಷಿಸುವ ಅಥವಾ ತಕ್ಷಣವೇ ಡಿಲೀಟ್ ಮಾಡುವ ಬದಲಿಗೆ ಒಮ್ಮೆ ಕಣ್ಣು ಹಾಯಿಸುವುದು ಉತ್ತಮ.

ಐರೋಪ್ಯ ಒಕ್ಕೂಟದಲ್ಲಿ ‘ದತ್ತಾಂಶ ಸುರಕ್ಷತಾ ನಿಯಂತ್ರಕ’ ಕಾಯ್ದೆ ಜಾರಿಯಲ್ಲಿದೆ. ವಿಶ್ವದಲ್ಲಿಯೇ ಡಿಜಿಟಲ್ ಪ್ರೈವಸಿ ಹಕ್ಕುಗಳ ಪ್ರಬಲ ಸಂರಕ್ಷಕ ಎಂದು ಈ ಕಾನೂನನ್ನು ಪರಿಗಣಿಸಲಾಗುತ್ತಿದೆ. ಈ ಕಾಯ್ದೆ ಅಡಿಯಲ್ಲಿ ಇಂತಹ ಇ–ಮೇಲ್‌, ಅಲರ್ಟ್‌ಗಳು ಬರುತ್ತವೆ. ದತ್ತಾಂಶ ಸಂಗ್ರಹಿಸಲು ಬಳಕೆದಾರರು ಅನುಮತಿ ನೀಡುವುದು ಹಾಗೂ ಈ ಸೇವೆ ಒದಗಿಸಲು ಅಗತ್ಯ ಇರುವಷ್ಟೆ ದತ್ತಾಂಶವನ್ನು ಹಂಚಿಕೊಳ್ಳುವುದು - ಈ ಎರಡೂ ಅಂಶಗಳ ಆಧಾರದ ಮೇಲೆ ಈ ಕಾಯ್ದೆ ಕಾರ್ಯನಿರ್ವಹಿಸುತ್ತದೆ.

‘ಬರ್ತ್ ಡೇ ಕೇಕ್ ಕಂಪನಿಯೊಂದು ಕೇಕ್ ಮೇಲೆ ಬರೆಯುವ ಸಲುವಾಗಿ ನಿಮ್ಮ ಹೆಸರು ಕೇಳುತ್ತದೆ. ಅದು ಕಡ್ಡಾಯವೇನಲ್ಲ. ಹೆಸರು ನೀಡದೇ ಇದ್ದರೂ ಕೇಕ್‌ ಪಡೆಯಬಹುದು. ಆನ್‌ಲೈನ್‌ ಸೇವೆಗಳನ್ನು ಒದಗಿಸುವ ವಿಷಯದಲ್ಲಿಯೂ ಹೀಗೆಯೇ. ಕಂಪನಿಗಳು ಕೇಳುವುದಕ್ಕೆಲ್ಲಾ ಒಪ್ಪಿಗೆ ನೀಡದೇ ಇದ್ದರೂ ಅದರ ಸೇವೆ ಬಳಸಲು ಯಾವುದೇ ಅಡಚಣೆ ಆಗುವುದಿಲ್ಲ’ ಎಂದು ಕಾಯ್ದೆಯನ್ನು ವಿವರಿಸುತ್ತಾರೆ ಎಲೆಕ್ಟ್ರಾನಿಕ್ ಫ್ರಂಟಿಯರ್ ಫೌಂಡೇಷನ್ ನಿರ್ದೇಶಕ ಡ್ಯಾನಿ ಒ’ಬ್ರಿಯಾನ್.

ಕಂಪನಿಗಳು ನೂತನ ನಿಯಮಗಳನ್ನು ಅನುಸರಿಸದೆ ಹೋದಲ್ಲಿ ಆಯಾ ಕಂಪನಿಗಳ ಜಾಗತಿಕ ಆದಾಯದ ಶೇ 4ರಷ್ಟು ದಂಡ ವಿಧಿಸಬಹುದಾಗಿದೆ.

ಬಳಕೆದಾರರು ನೂತನ ಕಾಯ್ದೆಯಿಂದ ಲಾಭ ಪಡೆದುಕೊಳ್ಳಲು ನೆರವಾಗಲಿ ಎನ್ನುವ ಉದ್ದೇಶದಿಂದ, ನವೀಕರಿಸಿದ ಖಾಸಗಿ ನಿಯಮಗಳ ಮಾಹಿತಿ ಒಳಗೊಂಡ ಇ–ಮೇಲ್‌ಗಳನ್ನು ಕಂಪನಿಗಳು ಕಳುಹಿಸುತ್ತಿರುತ್ತವೆ. ಕೆಲವು ಕಂಪನಿಗಳು ಬಳಕೆದಾರರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಅನುಮತಿ ನೀಡದೇ ಇರಲು ಸಾಧ್ಯವಾಗದಂತಹ ಸ್ಥಿತಿ ತಂದೊಡ್ಡುವ ಸಂದರ್ಭಗಳೂ ಎದುರಾಗಬಹುದು. ಹೀಗಾಗಿ ಹೊಸ ಕಾಯ್ದೆಯಲ್ಲಿ ಬಳಕೆದಾರರಿಗೆ ಆಗುವ ಪ್ರಯೋಜನಗಳು ಮತ್ತು ಖಾಸಗೀತನದ ನಿಯಮಗಳ ಬಗ್ಗೆ ವಿಸ್ತೃತ ವಿವರಣೆ ನೀಡಲಾಗಿದೆ.

ಕೇಂಬ್ರಿಜ್ ಅನಲಿಟಿಕಾಗೆ ಬಳಕೆದಾರರ ಮಾಹಿತಿ ಸೋರಿಕೆ ಮಾಡಿದ ವಿವಾದಕ್ಕೆ ಗುರಿಯಾಗಿದ್ದ ಫೇಸ್‌ಬುಕ್ ಸಹ, ತನ್ನ ಖಾಸಗಿತನದ ನಿಯಮಗಳನ್ನು ನವೀಕರಿಸಿದೆ.

ಬಳಕೆದಾರರ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವ ಆನ್‌ಲೈನ್‌ ಜಾಲತಾಣ ಕೋರಾ (Quora) ತನ್ನ ಖಾಸಗಿ ನೀತಿಯಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಇ–ಮೇಲ್‌ ಕಳುಹಿಸುತ್ತದೆ. ಆ ಮೇಲ್‌ನ ಕೊನೆಯಲ್ಲಿ ತನ್ನ ಬದಲಾವಣೆಗಳಿಗೆ ನೀವು ಒಪ್ಪಿಗೆ ನೀಡದೇ, ಸೇವೆಯ ಬಳಕೆ ಮುಂದುವರಿಸಿದರೂ ಅದಕ್ಕೆ ಒಪ್ಪಿಗೆ ನೀಡಿದಂತೆಯೇ ಎಂದೂ ಹೇಳಿರುತ್ತದೆ. ಇದರರ್ಥ ಕೆಲವು ಕಂಪನಿಗಳ ಖಾಸಗೀತನದ ನಿಯಮಗಳಿಗೆ ನೀವು ಅಧಿಕೃತವಾಗಿಯೇ ಒಪ್ಪಿಗೆ ನೀಡಬೇಕು ಎಂದೇನಿಲ್ಲ. ಒಪ್ಪಿಗೆ ನೀಡದೆಯೇ ಸೇವೆಯ ಬಳಕೆ ಮುಂದುವರಿಸಿದರೂ ಅದನ್ನೇ ನಿಮ್ಮ ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವೇ ಕೆಲವು ಪ್ರಮುಖ ಕಂಪನಿಗಳ ಸೇವೆಗಳನ್ನು ಬಳಸಲು ಅವುಗಳು ನೀಡುವ ಮಾಹಿತಿ ಮೇಲ್ದರ್ಜೆಗೆ ಅನುಮತಿ ನೀಡಲೇಬೇಕಾಗುತ್ತದೆ.

ಆದರೆ, ಇಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಬಳಕೆದಾರರು ಖಾಸಗಿತನದ ನಿಯಮಗಳನ್ನು ಓದುವುದು ವಿರಳ ಎನ್ನುವುದು ಕಂಪನಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಹಾಗೆಂದು ಪಾಪ್ಅಪ್, ಇ–ಮೇಲ್‌ಗಳನ್ನು ನಿರ್ಲಕ್ಷಿಸಿದಲ್ಲಿ, ಅವಶ್ಯಕ್ಕಿಂತ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಲು ಬಳಕೆದಾರರು ಪರೋಕ್ಷವಾಗಿ ಅನುಮತಿ ನೀಡಿದಂತಾಗುವ ಅಪಾಯವೂ ಇದೆ.

ಹೀಗಾಗಿ ಇ–ಮೇಲ್, ಪಾಪ್ಅಪ್‌ಗಳನ್ನು ಒಮ್ಮೆ ಸ್ಥೂಲವಾಗಿಯಾದರೂ ಪರಿಶೀಲಿಸಿ ಮುಂದುವರಿಯುವುದು ಜಾಣತನ.

ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT