ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಅಕಾಡೆಮಿಗೆ ‘ಬೆಳ್ಳಿ ಹಬ್ಬ’ದ ಸಂಭ್ರಮ

ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಂಪ್ಪ ಆಡಳಿತ ಮಂಡಳಿಗೆ ವರ್ಷ
Last Updated 9 ಜನವರಿ 2019, 13:41 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಸಮುದಾಯದ ಆಚಾರ, ವಿಚಾರ, ಸಂಸ್ಕೃತಿ ಉಳಿಸಿ ಸಾಹಿತ್ಯ ಪರಿಚಯಿಸಲು ರಾಜ್ಯ ಸರ್ಕಾರವು ಸ್ಥಾಪಿಸಿದ್ದ ‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ’ಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ.

25 ವರ್ಷ ತುಂಬಿರುವ ಕಾರಣ ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರ ನೇತೃತ್ವದ ಆಡಳಿತ ಮಂಡಳಿಯು ನಿರ್ಧರಿಸಿದೆ. ಮೇನಲ್ಲಿ ‘ಬೆಳ್ಳಿ ಹಬ್ಬ’ದ ಕಾರ್ಯಕ್ರಮಗಳು ನಡೆಯಲಿವೆ. ಪೊನ್ನಪ್ಪ ನೇತೃತ್ವದ ಆಡಳಿತ ಮಂಡಳಿಗೂ ಒಂದು ವರ್ಷ ತುಂಬಿದ್ದು ಅದರ ಅಂಗವಾಗಿ ಬುಧವಾರ ಸಂವಾದ ನಡೆಯಿತು.

‘ಒಂದು ವರ್ಷದಲ್ಲಿ 17 ವಿನೂತನ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಮುಂದಿನ ವರ್ಷವೂ ಬೆಳ್ಳಿ ಹಬ್ಬ, ಮಕ್ಕಳಿಗೆ ಆಟ್‌ಪಾಟ್‌ ಪಡಿಪು, ಸಾಹಿತ್ಯ ಪ್ರೋತ್ಸಾಹಿಸಲು ಪುಸ್ತಕ ಹೊರತರುವುದು, ಕೊಡವ ಹಾಡುಗಳ ಸಿ.ಡಿ ಲೋಕಾರ್ಪಣೆ ಮಾಡುವ ಉದ್ದೇಶವಿದೆ’ ಎಂದು ಪೆಮ್ಮಂಡ ಕೆ. ಪೊನ್ನಪ್ಪ ಮಾಹಿತಿ ನೀಡಿದರು.

ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬದುಕಿನ ಭರವಸೆ: ಆಗಸ್ಟ್‌ ನಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಸಂಕಷ್ಟಕ್ಕೆ ಒಳಗಾದ ಗ್ರಾಮಗಳಿಗೇ ತೆರಳಿ ಅವರ ಮನವಿ ಆಲಿಸಿ ಸರ್ಕಾರಕ್ಕೆ ಮುಟ್ಟಿಸಲಾಯಿತು ಎಂದು ಮಾಹಿತಿ ನೀಡಿದರು.

ಹೆಚ್ಚಿನ ಅನುದಾನ: ಪ್ರಸ್ತುತ ವಾರ್ಷಿಕವಾಗಿ ಕೊಡವ ಸಾಹಿತ್ಯ ಅಕಾಡೆಮಿಗೆ ₹ 60 ಲಕ್ಷ ಅನುದಾನ ಲಭ್ಯವಾಗುತ್ತಿದೆ. ಅದನ್ನು ₹ 70 ಲಕ್ಷಕ್ಕೆ ಏರಿಕೆ ಮಾಡಬೇಕೆಂಬ ಬೇಡಿಕೆಯಿದೆ. ಸರ್ಕಾರ ನೀಡುವ ಅನುದಾನವು ಮೂರು ಕಂತುಗಳಲ್ಲಿ ಪಾವತಿ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ಮಾತನಾಡಿ, ಐದು ಅಕಾಡೆಮಿಗಳು ಸೇರಿ ಸಾಹಿತ್ಯ ಸಂಗಮ ಕಾರ್ಯಕ್ರಮ ಸಂಘಟಿಸುತ್ತವೆ. ಸಂಗಮ ನಡೆಯುವ ಸ್ಥಳವಿನ್ನೂ ನಿಗದಿಯಾಗಿಲ್ಲ. ಮಡಿಕೇರಿ ಅಥವಾ ಮಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.

‘ಕೊಡವ, ಅರೆಭಾಷೆ, ಬ್ಯಾರಿ, ತುಳು, ಕೊಂಕಣಿ ಭಾಷೆಗಳು ನಶಿಸಿ ಹೋಗದಿರಲಿ ಎಂಬ ಕಾರಣಕ್ಕೆ ಅಕಾಡೆಮಿ ಸ್ಥಾಪಿಸಿ ಅನುದಾನ ನೀಡಲಾಗುತ್ತಿದೆ. ಅನುದಾನ ಬಳಕೆಯು ಅಕಾಡೆಮಿ ಆಡಳಿತ ಮಂಡಳಿ ವಿವೇಚನೆಗೆ ಬಿಟ್ಟ ವಿಚಾರ’ ಎಂದು ಮಾಹಿತಿ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿದರು.

ಸಂವಾದದಲ್ಲಿ ಅಕಾಡೆಮಿಯ ಬೊಳ್ಳಜಿರ ಬಿ. ಅಯ್ಯಪ್ಪ, ಅಪಟ್ಟಿರ ಟಾಟು ಮೊಣ್ಣಪ್ಪ, ಬೀಕಚಂಡ ಬೆಳ್ಯಪ್ಪ, ಚಂಗುಲಂಡ ಸೂರಜ್‌, ತೋರೇರ ಎಂ. ಮುದ್ದಯ್ಯ, ಸುಳ್ಳಿಮಾಡ ಭವಾನಿ ಕಾವೇರಿಯಮ್ಮ, ಅಜ್ಜಮಾಡ ಪಿ. ಕುಶಾಲಪ್ಪ, ಕುಡಿಯರ ಶಾರದಾ, ಮುನ್ನಕ್ಕಮನೆ ಬಾಲಕೃಷ್ಣ, ಹಂಚೆಟ್ಟಿರ ಮನು, ಮುದ್ದಪ್ಪ, ಎಚ್‌.ಎ. ಗಣಪತಿ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಬೊಳ್ಳಜಿರ ಬಿ ಅಯ್ಯಪ್ಪ, ಆಂಗೀರ ಕುಸುಂ, ನಾಳಿಯಮ್ಮಂಡ ಕೆ. ಉಮೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT