ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ಕುಸಿದ ಉಷ್ಣಾಂಶ, ಮಂಜಿನ ನಗರಿ ಕೊಡಗಿನಲ್ಲಿ ಚಳಿಯ ದರ್ಬಾರ್‌

ಮಡಿಕೇರಿಯಲ್ಲಿ ಕೂಲ್‌ ಕೂಲ್‌ ವಾತಾವರಣ
Last Updated 20 ಡಿಸೆಂಬರ್ 2018, 19:38 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿ ಈಗ ಚಳಿಯ ನಗರಿಯಾಗಿ ಬದಲಾಗಿದೆ. 3–4 ದಿನಗಳಿಂದ ವಾತಾವರಣ ದಿಢೀರ್‌ ಬದಲಾಗಿದ್ದು, ಚಳಿಯೇ ದರ್ಬಾರ್‌ ನಡೆಸುತ್ತಿದೆ. ಎಲ್ಲೆಲ್ಲೂ ಥಂಡಿಯದ್ದೇ ಹವಾ...

ಮಡಿಕೇರಿ ಮಾತ್ರವಲ್ಲದೇ ಕೊಡಗು ಜಿಲ್ಲೆಯಾದ್ಯಂತ ಮುಂಜಾನೆ ಹಾಗೂ ಸಂಜೆ ಮೈಕೊರೆಯುವ ಚಳಿ. ಮಳೆಗಾಲ ಮುಗಿದ ಮೇಲೆ ಮೂಲೆ ಸೇರಿದ್ದ ಸ್ವೆಟರ್‌ ಹಾಗೂ ಟೋಪಿಗಳು ಹೊರಬಂದಿವೆ. ಚಳಿ ತಾಳಲಾರದೇ ಜನರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಬೆಂಕಿ ಹಾಕಿಕೊಳ್ಳುವ ವ್ಯವಸ್ಥೆ ಇಲ್ಲದವರು ಚಳಿಗೆ ಹೆದರುವ ಸ್ಥಿತಿಯಿದೆ.ಬೆಚ್ಚಗಿರಲು ಜನರು ವಿವಿಧ ತಂತ್ರಗಳ ಮೊರೆ ಹೋಗುತ್ತಿದ್ದಾರೆ.

ನವೆಂಬರ್‌ನಲ್ಲಿ ಒಂದೆರಡು ದಿನ ಚಳಿ ಕಂಡುಬಂದಿತ್ತು. ಬಳಿಕ, ಚಳಿ ಮಾಯವಾಗಿತ್ತು. ಏನಪ್ಪಾ ಕೊಡಗಿಗೂ ಇಂಥ ಕಾಲ ಬಂತಲ್ಲ. ಚಳಿಗಾಲದಲ್ಲೂ ಚಳಿ ಇಲ್ಲ ಎಂದು ಜನರು ಹಾಗೂ ಪ್ರವಾಸಿಗರು ಹೇಳುತ್ತಿದ್ದರು. ಈಗ ದಿಢೀರ್‌ ಪ್ರವೇಶಿಸಿರುವ ಚಳಿ ಮೈ, ಮನಕ್ಕೆ ಕಚಗುಳಿಯಿಡಲು ಆರಂಭಿಸಿದೆ.ಗುರುವಾರ 10 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಪಾಮಾನ ದಾಖಲಾಗಿತ್ತು. ಜತೆಗೆ, ಆಕಾಶದಲ್ಲಿ ಮೋಡಗಳ ಹೊಯ್ದಾಟ ಚಳಿಯನ್ನು ವಿಪರೀತಗೊಳಿಸಿತ್ತು.

ವಾಕಿಂಗ್‌ ಸ್ಟೈಲ್‌: ದಿಢೀರ್‌ ತಾಪಮಾನ ಕುಸಿದಿದ್ದು, ವಯಸ್ಕರು ಸೇರಿದಂತೆ ಬಹುತೇಕರ ವಾಕಿಂಗ್ ಸ್ಟೈಲ್‌ ಬದಲಾಗಿದೆ. ಕೆಲವರು ಎರಡು ದಿನಗಳಿಂದ ವಾಕಿಂಗ್‌ಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ರಾಜಾಸೀಟ್‌ನಲ್ಲಿ ಬೆಳಗಿನ ಜಾವ ವಾಕಿಂಗ್‌ ಮಾಡುತ್ತಿದ್ದರು. ಚಳಿಯಿಂದ ಬೆಳಿಗ್ಗೆ ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೆಲವರು.

ಪ್ರವಾಸಿಗರ ಸಂಖ್ಯೆ ಕಡಿಮೆ: ‘ಪ್ರವಾಸಿಗರ ಸ್ವರ್ಗ’ ಮಡಿಕೇರಿಗೆ ಚಳಿಗಾಲದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಮಾಗಿಯ ಚಳಿಯ ಮಜಾ ಸವಿಯಲು ಪ್ರೇಮಿಗಳು ಹಾಗೂ ನವ ವಧು–ವರರು ಕವಿವರ್ಣನೆಯ ಭೂರಮೆಗೆ ಕಾಲಿಡುತ್ತಿದ್ದರು. ಆದರೆ, ಭೂಕುಸಿತದ ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಈಗ ಚಳಿ ಕಾಲಿರಿಸಿದೆ. ಇನ್ನಾದರೂ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ರೆಸಾರ್ಟ್‌ ಹಾಗೂ ಹೋಂಸ್ಟೇ ಮಾಲೀಕರಿದ್ದಾರೆ.

ಗಿರಕಂದರಗಳ ಮೇಲೆ ಬೀಸುತ್ತಿರುವ ಮಾಗಿಯ ಗಾಳಿ ಮೈನಡುಗುವಂತೆ ಮಾಡುತ್ತಿದೆ. ಮಾಂದಲ್‌ಪಟ್ಟಿ, ತಡಿಯಂಡಮೋಳ್‌, ತಲಕಾವೇರಿ, ಮೇರನಕೋಟೆ ಬೆಟ್ಟ, ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಚಳಿ ತೀವ್ರತೆ ಹೆಚ್ಚಾಗಿದೆ. ಜಲಪಾತ, ನದಿ, ತೊರೆಗಳಲ್ಲಿ ನೀರು ಬತ್ತಿದ್ದರೂ ಸುತ್ತಲ ವಾತಾವರಣ ಮೈನಡುಗುವಂತೆ ಮಾಡಿದೆ. ಹೀಗಾಗಿ, ಸಂಜೆಯಾದ ಮೇಲೆ ಯಾರೂ ಅತ್ತ ತೆರಳುವ ಮನಸ್ಸು ಮಾಡುತ್ತಿಲ್ಲ. ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಸೂರ್ಯಾಸ್ತದ ಸೊಬಗು: ಚಳಿಗಾಲದಲ್ಲಿ ರಾಜಾಸೀಟ್‌ ವೀಕ್ಷಣಾ ಸ್ಥಳದಲ್ಲಿ ನಿಂತು ಸೂರ್ಯಾಸ್ತದ ದೃಶ್ಯ ಕಣ್ತುಂಬಿಕೊಳ್ಳುವುದೇ ಆನಂದ. ಈ ದೃಶ್ಯ ನೋಡಲು ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆಯಿಡುತ್ತಿದ್ದರು. ಒಂದೆಡೆ ಉದ್ಯಾನದಲ್ಲಿ ಹುಲ್ಲು ಹಾಸಿನ ತಣ್ಣನೆಯ ವಾತಾವರಣ, ಗಿರಿಶ್ರೇಣಿಯ ಗಾಳಿಗೆ ಮೈಯೊಡ್ಡಿ ಸೂರ್ಯಾಸ್ತ ನೋಡುವುದೇ ಆನಂದ. ಆದರೆ, ಪ್ರವಾಸಿಗರ ಸಂಖ್ಯೆ ಈ ಬಾರಿ ಇಳಿಮುಖವಾಗಿದೆ.

10 ವರ್ಷಗಳ ಹಿಂದೆ ಇದಕ್ಕಿಂತಲೂ ವಿಪರೀತ ಚಳಿ ಇರುತ್ತಿತ್ತು. 50ರಿಂದ 60 ದಿವಸ ಚಳಿ, ಮಂಜಿನದ್ದೇ ಆರ್ಭಟ. ಇತ್ತೀಚೆಗೆ ಚಳಿಯ ದಿನಗಳು ಕಡಿಮೆಯಾಗಿವೆ ಎಂದು ಹಿರಿಯ ನಾಗರಿಕ ಇಂದ್ರೇಶ್‌ ಆತಂಕದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT