ಒಕ್ಕಣೆ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಕಾಲು ತುಂಡು

7
ಭತ್ತದ ಹುಲ್ಲಿನ ಕಟ್ಟುಗಳನ್ನು ಯಂತ್ರಕ್ಕೆ ಹಾಕುತ್ತಿದ್ದ ವೇಳೆ ಅವಘಡ

ಒಕ್ಕಣೆ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಕಾಲು ತುಂಡು

Published:
Updated:
Prajavani

ಶನಿವಾರಸಂತೆ (ಕೊಡಗು): ಸಮೀಪದ ಮುಳ್ಳೂರು ಗ್ರಾಮದ ರಾಘವೇಂದ್ರಾಚಾರ್ ಎಂಬುವರ ಪುತ್ರ ಎಂ.ಆರ್.ಪ್ರಸಾದ್ (29) ಅವರ ಎಡಗಾಲು ಭತ್ತದ ಒಕ್ಕಣೆ ಯಂತ್ರಕ್ಕೆ ಸಿಲುಕಿ ತುಂಡಾಗಿದೆ.

ಕಿಟ್ಟಾಚಾರ್‌ ಅವರ ಗದ್ದೆಯ ಕೊಯ್ಲು ಕೆಲಸಕ್ಕೆ ಗುರುವಾರ ಹೋಗಿದ್ದ ಪ್ರಸಾದ್‌, ಭತ್ತದ ಹುಲ್ಲಿನ ಕಟ್ಟುಗಳನ್ನು ಶಶಿ ಎಂಬುವರ ಕಣಕ್ಕೆ ಸಾಗಿಸುತ್ತಿದ್ದರು. ಅಲ್ಲಿ ಚಂದ್ರಪ್ಪ ಮಾಸ್ಟರ್‌ ಎಂಬುವರು ಇಟ್ಟಿದ್ದ ಒಕ್ಕಣೆ ಯಂತ್ರಕ್ಕೆ ಭತ್ತದ ಹುಲ್ಲಿನ ಕಟ್ಟುಗಳನ್ನು ಹಾಕುತ್ತಿದ್ದರು. ಕರಿ ಭಾಸ್ಕರಾಚಾರ್‌ ಎಂಬುವರು ಯಂತ್ರದ ಮೇಲುಸ್ತುವಾರಿ ವಹಿಸಿದ್ದರು. ಪ್ರಸಾದ್‌ ಅವರು ಯಂತ್ರದ ಮೇಲೆ ನಿಂತು ಹುಲ್ಲಿನ ಕಟ್ಟುಗಳನ್ನು ಹಾಕುತ್ತಿದ್ದರು. ಈ ವೇಳೆ ಹುಲ್ಲಿನ ಕಟ್ಟನ್ನು ಎಡಗಾಲಿನಿಂದ ಬಲವಾಗಿ ತಳ್ಳಿದಾಗ ಕಾಲು ಯಂತ್ರಕ್ಕೆ ಸಿಲುಕಿ ತುಂಡಾಗಿದೆ. ಈ ವೇಳೆ, ಕಾರ್ಮಿಕರು ಪ್ರಸಾದ್‌ ಅವರನ್ನು ಹೊರಗೆಳೆದಿದ್ದರು.

ರಾಘವೇಂದ್ರಾಚಾರ್ ಮತ್ತು ಚಂದ್ರಪ್ಪ ಮಾಸ್ಟರ್ ಅವರು ಪ್ರಸಾದ್‌ ಅವರನ್ನು ಆಂಬುಲೆನ್ಸ್‌ನಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದರು.

‘ಚಂದ್ರಪ್ಪ ಮಾಸ್ಟರ್, ಕಿಟ್ಟಾಚಾರ್ ಹಾಗೂ ಕರಿ ಭಾಸ್ಕರಾಚಾರ್‌ ಅವರು ಯಂತ್ರದ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಇದರಿಂದ ಕಾಲು ಕಳೆದುಕೊಂಡಿದ್ದೇನೆ. ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರಸಾದ್ ಅವರು ಶನಿವಾರಸಂತೆ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಗೋವಿಂದರಾಜ್‌ ಅವರಿಗೆ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !