ಕೊಡಗು: ಬೆಲೆ ಏರಿಕೆ- ಕೇಂದ್ರದ ವಿರುದ್ಧ ಆಕ್ರೋಶ

7
ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ‍ಪ್ರತಿಭಟನೆ, ಮನವಿ ಸಲ್ಲಿಕೆ

ಕೊಡಗು: ಬೆಲೆ ಏರಿಕೆ- ಕೇಂದ್ರದ ವಿರುದ್ಧ ಆಕ್ರೋಶ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕಾರಣ ಸೋಮವಾರ ‘ಜಿಲ್ಲೆಯ ಬಂದ್‌’ಗೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಮತ್ತಿತರ ಸಂಘಟನೆಗಳು ಕರೆ ನೀಡಿರಲಿಲ್ಲ. ಕೇಂದ್ರ ಸರ್ಕಾರವು ತೈಲ ಬೆಲೆಗಳ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದು ಭಾರತ್‌ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಬಂದ್‌ ಯಾವುದೇ ಪರಿಣಾಮ ಬೀರಲಿಲ್ಲ.

ಶಾಲೆಗಳು ಎಂದಿನಂತೆ ನಡೆದವು. ಅಂಗಡಿ– ಮುಂಗಟ್ಟುಗಳು ತೆರೆದಿದ್ದವು. ಆಟೊ, ಬಸ್‌ ಹಾಗೂ ಖಾಸಗಿ ವಾಹನ ಸಂಚಾರವಿತ್ತು. ಆದರೆ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಎಸ್‌‍ಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿರುವ ಕಾರಣ ಬಂದ್ ಮಾಡದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬಸ್ ಮಾಲೀಕರ ಸಂಘ ಹಾಗೂ ಇತರ ವಾಹನ ಚಾಲಕರು ಬೆಂಬಲವನ್ನೂ ಸೂಚಿಸಿದ್ದಾರೆ. ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿಗೆ ಪ್ರಧಾನಿ ಮೋದಿ ಭೇಟಿ ನೀಡದೆ ಮಲತಾಯಿ ಧೋರಣೆ ಅನುಸರಿಸಿದರು. ಕಾಫಿ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪೆಟ್ರೋಲ್, ಡೀಸೆಲ್‌ ಬೆಲೆಯು ಹೆಚ್ಚಾಗುತ್ತಿದೆ. ಇದರಿಂದ ಸಾಮಾನ್ಯ ಜನರು ವಾಹನ ಓಡಿಸಲು ಆಗದ ಸ್ಥಿತಿ ನಿರ್ಮಾಣವಾಗುತ್ತಿವೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಬೆಲೆ ನಿಯಂತ್ರಿಸಲು ವಿಫಲವಾದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು 

ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮಸೋಮಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ, ಪ್ರಮುಖರಾದ ತೆನ್ನಿರಾ ಮೈನಾ, ಚುಮ್ಮಿ ದೇವಯ್ಯ, ಟಿ.ಪಿ. ರಮೇಶ್, ಪ್ರಭು ಹಾಜರಿದ್ದರು.

ಜೆಡಿಎಸ್‌, ಬಿಎಸ್‌ಪಿ ಆಕ್ರೋಶ:  ದರ ಏರಿಕೆ ಖಂಡಿಸಿ ಜೆಡಿಎಸ್ ಮತ್ತು ಬಹುಜನ ಸಮಾಜ ಪಾರ್ಟಿ ವತಿಯಿಂದಲೂ ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ಪ್ರತಿಭಟನಾನಿರತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜೆಡಿಎಸ್‌ ಮುಖಂಡ ಕೆ.ಎಂ.ಬಿ ಗಣೇಶ್‌ ಮಾತನಾಡಿ, ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಜನ ಸಾಮಾನ್ಯರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.

ಭಾರತ ಬಂದ್‌ಗೆ ಜೆಡಿಎಸ್‌ ಬೆಂಬಲವಿದೆ. ಆದರೆ, ಕೊಡಗಿನಲ್ಲಿ ಆಗಿರುವ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜನರಿಗೆ ತೊಂದರೆಯಾಗದಂತೆ ಬಂದ್ ಘೋಷಣೆ ಮಾಡದೇ ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ಬಿಜೆಪಿ ಹಿಂದೆ ನೋಟು ರದ್ದತಿ,  ಜಿಎಸ್‌ಟಿ ಅಳವಡಿಕೆ ಸೇರಿದಂತೆ ಇದೀಗ ಇಂಧನ ಬೆಲೆ ಏರಿಸುವುದರೊಂದಿಗೆ ಜನರ ನೆಮ್ಮದಿ ಕೆಡಿಸಿದೆ. ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರು ದೇಶದ ಕಾವಲು ಕಾಯುತ್ತೇನೆಂದು ಹೇಳಿದ್ದರು. ಆದರೆ, ಎಲ್ಲವೂ ಸುಳ್ಳಾಗಿದೆ. ನಾಲ್ಕೂವರೆ ವರ್ಷದಿಂದ ಅಭಿವೃದ್ಧಿಯೂ ನಡೆಯುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಜನರು ಕಿತ್ತೊಗೆಯಬೇಕು ಎಂದು ಕೋರಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೋಜಪ್ಪ, ಜಿಲ್ಲಾ ವಕ್ತಾರ ಆದಿಲ್ ಪಾಷಾ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್, ನಗರಸಭೆ ಸದಸ್ಯೆ ಲೀಲಾ ಶೇಷಮ್ಮ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಶ್ವ ಪ್ರತಿಭಟನೆಯಲ್ಲಿ ಹಾಜರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !