ನಾಪೋಕ್ಲು: ತುಳುನಾಡು ಸಂಸ್ಕೃತಿಯ ನಾಡಾಗಿದ್ದು, ಬಿಲ್ಲವ ಜನಾಂಗ ತುಳುನಾಡಿನ ಸಂಸ್ಕೃತಿಯ ಸಾರವನ್ನು ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕಿದೆ ಎಂದು ಬಂಟ್ವಾಳದ ವಾಗ್ಮಿ ಶ್ರೀನಿಧಿ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಆಟಿಡೊಂಜಿ ದಿನ -2024 ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳು ಸಂಸ್ಕೃತಿಗೆ ಅಳಿವಿಲ್ಲ. ವರ್ಷದ ವಿವಿಧ ಕಾಲಮಾನಗಳಿಗೆ ಜನಾಂಗದ ಮಂದಿ ಮಹತ್ವ ನೀಡಿದ್ದಾರೆ. ಅದರಲ್ಲೂ ಆಟಿ ತಿಂಗಳಿಗೆ ವಿಶೇಷ ಮಹತ್ವ ಇದೆ. ಬಿರುಸಿನಿಂದ ಸುರಿಯುವ ಮಳೆಗಾಲದ ಈ ದಿನಗಳಲ್ಲಿ ಸಸ್ಯಗಳಲ್ಲಿ ಆಯುರ್ವೇದ ಅಂಶಗಳು ಜಾಸ್ತಿ ಇರುವುದರಿಂದ ವೈವಿಧ್ಯಮಯ ತಿನಿಸುಗಳನ್ನು ಮಾಡಿ ಸೇವಿಸುವುದು ರೂಢಿಯಲ್ಲಿದೆ. ನಂತರದ ಸೋನೆ ತಿಂಗಳಿನಲ್ಲಿ ಸಮಾರಂಭಗಳಿಗೆ ಮಹತ್ವ ಇದೆ. ವರ್ಷದ ವಿವಿಧ ತಿಂಗಳುಗಳನ್ನು ವೈವಿಧ್ಯಮಯವಾಗಿ ಆಚರಿಸುವ ಬಿಲ್ಲವ ಜನಾಂಗ, ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಂದರು.
ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಮೊಬೈಲ್ ಫೋನ್, ಟಿ.ವಿಯಂತಹ ಸಮೂಹ ಮಾಧ್ಯಮಗಳಿಂದಾಗಿ ಮಕ್ಕಳು, ಯುವ ಜನಾಂಗದವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ವಿದ್ಯೆಯಿಂದಷ್ಟೇ ಮುಂದೆ ಬರಲು ಸಾಧ್ಯ. ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕಾದರೆ ವಿದ್ಯೆ ಮುಖ್ಯ. ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಬೇಕು. ಮೊಬೈಲ್ ಫೋನ್‌ನಿಂದ ಸಾಧ್ಯವಾದಷ್ಟು ದೂರವಿರಬೇಕು. ಬಡ ಜನರಿಗೆ ಸಹಾಯ ಮಾಡಿ ಹೆಚ್ಚಿನ ವಿದ್ಯೆಯನ್ನುಗಳಿಸಲು ಪ್ರೋತ್ಸಾಹಿಸಬೇಕು ಎಂದರು.
ಮಡಿಕೇರಿ ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲಿಯಣ್ಣ ಪೂಜಾರಿ ಮಾತನಾಡಿ, ಸಂಘಟನೆಯಿಂದ ಯಶಸ್ಸು ಸಾಧ್ಯ ಎಂದರು. ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಬೆಳೆಯುತ್ತಾ ಸಮಾಜ, ಸಂಸ್ಕೃತಿ, ಪದ್ಧತಿಗಳ ಬಗ್ಗೆ ಅರಿವು ಹೊಂದುತ್ತಾನೆ. ತಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಂಘದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ಪು ರವೀಂದ್ರ, ನೋಟರಿ ವಕೀಲ ದಯಾ ಹೊನ್ನಪ್ಪ ಮಾತನಾಡಿದರು.
ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಪ್ರತಿಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬಿಲ್ಲವ ಜನಾಂಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಸಂಘದಲ್ಲಿ 217 ಸದಸ್ಯರಿದ್ದಾರೆ. ರಕ್ತದಾನದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಇತರರಿಗೆ ಮಾದರಿಯಾಗಿದೆ ಎಂದರು. ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 70ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಲೋಗೋ ಅನಾವರಣಗೊಳಿಸಲಾಯಿತು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, 50ಕ್ಕೂ ಅಧಿಕ ಭಾರಿ ರಕ್ತದಾನ ಮಾಡಿದ ರಾಮಪ್ಪ ಪೊಲೀಸ್, ಸಿವಿಲ್ ಕಂಟ್ರಾಕ್ಟರ್ ಗೋಪಾಲ, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಹಿಳೆಯರಿಂದ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬಳಿಕ ನಡೆದ ಮನರಂಜನಾ ಕಾರ್ಯಕ್ರಮ ವೀಕ್ಷಕರ ಮನೆಗೆಲ್ಲುವಲ್ಲಿ ಯಶಸ್ವಿಯಾಯಿತು.
ಪುಟಾಣಿ ಪ್ರತಿಭೆ ಮದೆನಾಡು ಗ್ರಾಮದ ಕೀರ್ತಿಕುಮಾರ್ ಮತ್ತು ರೇಣುಕಾ ದಂಪತಿಯ ಪುತ್ರಿ ಸಿಂಚನ ಯೋಗ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಟ್ಸ್‌ನಲ್ಲಿ ಸಾಧನೆ ಮಾಡಿರುವ ಸಿಂಚನ ಅಪರೂಪದ ಯೋಗ ಸಾಧಕಿ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಶ್ಲಾಘಿಸಿದರು. ಕುಮಾರಿ ಸಿಂಚನ ಅವರ ಪ್ರತಿಭೆಯನ್ನು ಬಿಲ್ಲವ ಸಂಘದ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು. ಸಿಂಚನ ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.