ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಬಿಯಿಂದ 13 ಅಂಗಡಿ ತೆರವು

ವರ್ಕ್ ಶಾಪ್ ಏರಿಯಾದಲ್ಲಿ ಪಟ್ಟಣ ಪಂಚಾಯಿತಿಯಿಂದ ಕಾರ್ಯಾಚರಣೆ
Last Updated 7 ನವೆಂಬರ್ 2022, 6:56 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಭಾನುವಾರ ಬೆಳ್ಳಂ ಬೆಳಿಗ್ಗೆ ಇಲ್ಲಿನ ವರ್ಕ್ ಶಾಪ್ ಏರಿಯಾಕ್ಕೆ ಬಂದು ಸರ್ವೆ ನಂ. 194/3ರಲ್ಲಿನ 13 ಅಂಗಡಿಗಳನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದರು.

ಒಂದು ದಿನ ಮುಂಚಿತವಾಗಿಯೇ ಪಂಚಾಯಿತಿ ಸದಸ್ಯರ ಸಭೆ ನಡೆಸಿ, ತೆರವು ಕಾರ್ಯದ ರೂಪುರೇಷೆ ಮಾಡಿಕೊಳ್ಳಲಾಗಿತ್ತು. ಭಾನುವಾರ ಬೆಳಿಗ್ಗೆ 4 ಗಂಟೆಗೆ ಎರಡು ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದರು.. ಈ ಹಿಂದೆಯೇ ಪಟ್ಟಣ ಪಂಚಾಯಿತಿ ಮಾರ್ಕೆಟ್ ಏರಿಯಾದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ವಾಹನ ನಿಲುಗಡೆ ಮತ್ತು ಗ್ಯಾರೇಜ್ ನಿರ್ಮಾಣ ಮಾಡಲು ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮಾಲೀಕರಿಲ್ಲದೆ, ಖಾಲಿ ಇರುವ ಮತ್ತು ನೆಲ ಬಾಡಿಗೆ ಪಾವತಿಸದೆ ಇರುವವರು ಹಾಗೂ ಪರಭಾರೆ ಮಾಡಿಕೊಂಡವರೂ ಇದ್ದರು.

ಈ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಿದ್ದರು. ಅಂಗಡಿ ನಿರ್ಮಿಸಿಕೊಂಡಿದ್ದವರುಇದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಾದ ವಿವಾದವನ್ನು ಆಲಿಸಿದ ನಂತರ ಹೈಕೋರ್ಟ್‌ ಪಟ್ಟಣ ಪಂಚಾಯಿತಿ ಪರವಾಗಿ ಆದೇಶ ನೀಡಿತ್ತು. ಅರ್ಜಿದಾರರಿಗೆ ನ್ಯಾಯಾಲಯದ ಆದೇಶ ಪಡೆದ 15 ದಿನಗಳೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. 21-10-2022ರಂದು ಪಟ್ಟಣ ಪಂಚಾಯಿತಿಯಿಂದ ಮುಖ್ಯಾಧಿಕಾರಿಯವರು ನೋಟಿಸ್ ನೀಡಿ ನ್ಯಾಯಾಲಯದ ಆದೇಶವನ್ನು ಪಾಲಿಸು ವಂತೆ 15 ದಿನಗಳ ಕಾಲಾವಕಾಶ ನೀಡಿದ್ದರು. ಈ ಉದ್ದೇಶಕ್ಕಾಗಿ ನ್ಯಾಯಾ ಲಯದ ಆದೇಶದ ಪ್ರತಿಯನ್ನು ದೃಢೀ ಕರಿಸಿ ನೋಟಿಸ್‌ನೊಂದಿಗೆ ಕಳುಹಿಸಲಾಗಿತ್ತು. ಆದರೆ, ಯಾರೂ ಸಹ ಆಕ್ಷೇಪಣೆ ಸಲ್ಲಿಸಲು ಮುಂದಾಗಲಿಲ್ಲ. ಶನಿವಾರ ಪ.ಪಂ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಅಂಗಡಿ ತೆರವುಗೊಳಿಸಲು ನಿರ್ಣಯ ಕೈಗೊಂಡಿದ್ದರು.

ತಹಶೀಲ್ದಾರ್ ನರಗುಂದ, ಇನ್‌ಸ್ಪೆಕ್ಟರ್‌ಗಳಾದ ರಾಮಚಂದ್ರ ನಾಯಕ್, ಮಹೇಶ್, ಪಿಎಸ್‌ಐಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಭದ್ರತೆಯಲ್ಲಿ ಅಂಗಡಿ ತೆರವುಗೊಳಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪಿ.ಕೆ. ಚಂದ್ರು, ವಾರ್ಡ್ ಸದಸ್ಯ ಮಹೇಶ್, ಮುಖ್ಯಾಧಿಕಾರಿ ನಾಚಪ್ಪ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT