ಭಾನುವಾರ, ಆಗಸ್ಟ್ 1, 2021
26 °C
ಸೀಲ್‌ಡೌನ್‌ ಪ್ರದೇಶದ ಜನರಿಗೆ ದಿನಸಿ ಕಿಟ್‌ ವಿತರಿಸಲು ಜೆಡಿಎಸ್‌ ಆಗ್ರಹ

15 ದಿನ ಲಾಕ್‌ಡೌನ್‌ ಮಾಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಆದರೆ, ಕಂಟೈನ್‌ಮೆಂಟ್‌ ವಲಯದ ಜನರಿಗೆ ಯಾವುದೇ ಸೌಲಭ್ಯ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶದ ಜನರಿಗೆ ಕೂಡಲೇ ಆಹಾರ ಕಿಟ್‌ ವಿತರಣೆ ಮಾಡಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರವು ಜನರ ಆರೋಗ್ಯದ ಜತೆಗೆ ಚೆಲ್ಲಾಟ ಆಡುತ್ತಿದೆ. ಸರ್ಕಾರವು ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಧಿಕ್ಕಾರ ಕೂಗಿದರು. ಆಕ್ರೋಶ ಹೊರಹಾಕಿದರು.

ಕೊರೊನಾ ವೈರಸ್‌ ಹೆಚ್ಚಳವಾಗುತ್ತಿದೆ. ಇದರಿಂದ ಸುಮಾರು 24 ಪ್ರದೇಶಗಳು ಸೀಲ್‌ಡೌನ್‌ ಆಗಿವೆ. ಸೀಲ್‌ಡೌನ್ ಆಗಿರುವ ಪ್ರದೇಶಗಳಿಗೆ ದಿನನಿತ್ಯದ ದಿನಸಿ ಸಾಮಗ್ರಿಗಳು ಸಿಗುತ್ತಿಲ್ಲ. ಸೀಲ್‌ಡೌನ್ ಆಗಿರುವುದರಿಂದ ಜನರ ಬಳಿ ಹಣವಿಲ್ಲದೇ ಉಪವಾಸದಿಂದ ಮಲಗುವ ಪರಿಸ್ಥಿತಿಯಿದೆ. ಆ ಪ್ರದೇಶದಲ್ಲಿ ವ್ಯಾಪಾರವೂ ಇಲ್ಲ. ಹೊರಗೂ ಬರಲು ಸಾಧ್ಯವಾಗುತ್ತಿಲ್ಲ. ಇದನ್ನು ಹೀಗೆ ಮುಂದುವರಿಸಿದರೆ ಕೊರೊನಾ ವೈರಸ್‌ಗಿಂತ ಹೊಟ್ಟೆ ಹಸಿವಿನಿಂದ ಜನರು ಸಾಯುವ ಪರಿಸ್ಥಿತಿ ಬರಬಹುದು ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.

ಹೊರ ಜಿಲ್ಲೆಯಿಂದ ಕಾಫಿ ಕಣಿವೆಗೆ ಬರುವಂತಹ ಜನರನ್ನು ಕೊಡಗು ಜಿಲ್ಲಾ ಚೆಕ್‌ಪೋಸ್ಟ್ ಬಳಿ ಪರೀಕ್ಷಿಸಿಯೇ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಸೆಪ್ಟೆಂಬರ್‌ ತನಕ ತಪಾಸಣೆ ಮಾಡಬೇಕು. ಜಿಲ್ಲೆಯಲ್ಲಿ ಚಳಿ ಹೆಚ್ಚಾಗಿದೆ. ಮಳೆಯು ಹೆಚ್ಚಾಗುವ ಮುನ್ಸೂಚನೆಯಿದೆ. ಜಿಲ್ಲಾಡಳಿತ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಮತ್ತೆ ಲಾಕ್‌ಡೌನ್‌ ಮಾಡಿ’

ಕೆ.ಎಂ.ಬಿ.ಗಣೇಶ್‌ ಮಾತನಾಡಿ, ‘ಕೋವಿಡ್‌ ಸೋಂಕಿತರ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ಶೂನ್ಯದಲ್ಲಿದ್ದಾಗ ಲಾಕ್‌ಡೌನ್‌ ಮಾಡಲಾಗಿತ್ತು. ಆದರೆ, ಈಗ 70ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೊಡಗು ಜಿಲ್ಲೆಯನ್ನು ಕಾಪಾಡಬೇಕಿದೆ. ಮನೆಯಲ್ಲಿದ್ದರೆ ಮಳೆಯಿಂದ ಮನೆ ಕುಸಿಯುವ ಭೀತಿಯಿದೆ. ಮನೆಯಿಂದ ಹೊರಬಂದರೆ ಕೊರೊನಾ ಭೀತಿಯಿದೆ. ವಿಧಿಯಿಲ್ಲದೇ ಜನರ ನರಳಾಡುತ್ತಿದ್ದಾರೆ. 15 ದಿನ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯನ್ನು ಲಾಕ್‌ಡೌನ್‌ ಆಗಬೇಕು’ ಎಂದು ಆಗ್ರಹಿಸಿದರು.

‘ನೋಟ್‌ ಬ್ಯಾನ್‌ನಿಂದ ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದರು. ಅಷ್ಟೊತ್ತಿಗೆ 2018ರಲ್ಲಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಜನರು ತೊಂದರೆಗೆ ಒಳಗಾದರು. 2019ರಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದರು. ಈ ವರ್ಷ ಕೊರೊನಾ ಮಹಾಮಾರಿ ಬದುಕು ಕಸಿದುಕೊಳ್ಳುತ್ತಿದೆ. ಪ್ರತಿವರ್ಷ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗುತ್ತಿದೆ’ ಎಂದು ಗಣೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.