ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮನಿರ್ಭರ ಭಾರತ ಯೋಜನೆ ಅಡಿ 39 ಸ್ವದೇಶಿ ಸಮರ ನೌಕೆ ನಿರ್ಮಾಣ: ನೌಕಾಪಡೆ

Last Updated 13 ಡಿಸೆಂಬರ್ 2021, 22:29 IST
ಅಕ್ಷರ ಗಾತ್ರ

ಮಡಿಕೇರಿ: ‘ಆತ್ಮನಿರ್ಭರ ಭಾರತ ಯೋಜನೆ ಅಡಿ, 41 ಸಮರ ನೌಕೆಗಳ ಪೈಕಿ 39 ನೌಕೆಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗುವುದು’ ಎಂದು ಪೂರ್ವವಲಯದ ನೌಕಾಪಡೆಯ ಮುಖ್ಯಸ್ಥ ವೈಸ್‌ ಅಡ್ಮಿರಲ್‌ ಬಿಸ್ವಜಿತ್‌ದಾಸ್‌ ಗುಪ್ತ ಸೋಮವಾರ ಇಲ್ಲಿ ಹೇಳಿದರು.

ನಗರದ ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ನೌಕಾಪಡೆ ನೀಡಿರುವ ಶಿವಾಲಿಕ್‌ ಸಮರ ನೌಕೆ ಹಾಗೂ ಸಬ್‌ಮೆರಿನ್‌ ಮಾದರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಸೇನಾಪಡೆಯ ಆಧುನೀಕರಣ ವ್ಯವಸ್ಥೆಯಲ್ಲಿ ಸ್ವದೇಶಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ರಾಷ್ಟ್ರದ ಮುಂಬೈ, ಗೋವಾ, ವಿಶಾಖಪಟ್ಟಣ, ಕೋಲ್ಕತ್ತದಲ್ಲಿ ನೌಕೆ ತಯಾರಿಕಾ ಘಟಕಗಳಿವೆ. ಕೊಚ್ಚಿನ್‌ನಲ್ಲಿರುವ ಖಾಸಗಿ ವಲಯದ ತಯಾರಿಕಾ ಘಟಕವೂ ಸೇನೆಯ ಅಗತ್ಯಗಳನ್ನು ಪೂರೈಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ವ್ಯಾಪಾರೋದ್ಯಮ ಹಾಗೂ ಗಡಿಭದ್ರತೆಗೆ ನೌಕಾಪಡೆ ಶ್ರಮಿಸುತ್ತಿದೆ. ನೌಕಾಪಡೆಯ ಕೆಲಸವು ಸಮುದ್ರದ ತೀರದಲ್ಲಿರುವ ಕಾರಣಕ್ಕೆ ನಮ್ಮ ಕೆಲಸ ಯಾರ ಕಣ್ಣಿಗೂ ಕಾಣುವುದಿಲ್ಲ. ನೌಕಾಪಡೆಯ ಹೆಜ್ಜೆ ಗುರುತು ವಿಸ್ತಾರವಾದುದು’ ಎಂದು ಹೇಳಿದರು.

ಜನರಲ್‌ ತಿಮ್ಮಯ್ಯ ಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಫೋರಂ ಅಧ್ಯಕ್ಷರೂ ಆಗಿರುವ ನಿವೃತ್ತ ಕರ್ನಲ್‌ ಸುಬ್ಬಯ್ಯ, ರಿಯರ್‌ ಅಡ್ಮಿರಲ್‌ ಐಚ್ಚಿಟ್ಟಿರ ಬಿ. ಉತ್ತಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಿವೃತ್ತ ಮೇಜರ್‌ ಜನರಲ್‌ ಕೆ.ಪಿ.ನಂಜಪ್ಪ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಪಿ.ಸಿ.ತಿಮ್ಮಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು. ಯುದ್ಧ ವಿಮಾನ, ಯುದ್ಧ ಟ್ಯಾಂಕ್‌ ಜೊತೆಗೆ ಸಮರ ನೌಕೆಯು ಜನರಲ್‌ ತಿಮ್ಮಯ್ಯ ಮ್ಯೂಸಿಯಂಗೆ ಹೊಸ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT