ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಕಾರಾಗೃಹದಲ್ಲಿ ಕಲಿಕಾ ಕೇಂದ್ರ: 39 ಕೈದಿಗಳಿಗೆ ಅಕ್ಷರ ಭಾಗ್ಯ!

ಕೊಡಗು ಜಿಲ್ಲಾ ಕಾರಾಗೃಹದಲ್ಲಿ ಕಲಿಕಾ ಕೇಂದ್ರ ಉದ್ಘಾಟನೆ
Last Updated 3 ಅಕ್ಟೋಬರ್ 2022, 12:16 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ 170 ಕೈದಿಗಳ ಪೈಕಿ 39 ಮಂದಿ ಅನಕ್ಷರಸ್ಥರು. ಇವರಿಗೆ ಅಕ್ಷರ ಕಲಿಸುವ ವಿನೂತನ ಕಾರ್ಯಕ್ರಮ ‘ಕಲಿಕೆಯಿಂದ ಬದಲಾವಣೆ’ ಭಾನುವಾರ ಆರಂಭವಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಕಾರಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ‘ಮಹಾತ್ಮ ಗಾಂಧಿ ಅವರ 153ನೇ ಜಯಂತಿ ಹಾಗೂ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿ ನಿವಾಸಿಗಳ ಕಲಿಕೆಯಿಂದ ಬದಲಾವಣೆ’ ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಭೃಂಗೇಶ್ ಅವರು ಚಾಲನೆ ನೀಡಿ ಶುಭ ಹಾರೈಸಿದರು.

‘ನಾನು ಈ ಸ್ಥಾನಕ್ಕೆ ಏರಲು, ಇಷ್ಟೊಂದು ಗೌರವ ಪಡೆಯಲು ಶಿಕ್ಷಣವೇ ಕಾರಣ. ಶಿಕ್ಷಣ ಪಡೆದವರು ಗೌರವಯುತವಾದ ಬದುಕನ್ನು ಪಡೆಯಬಹುದು. ಎಲ್ಲರೂ ಶಿಕ್ಷಣ ಪಡೆಯುವುದರತ್ತ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಅವರು ಕಾರಾಗೃಹದಲ್ಲಿ ಗಿಡ ನೆಟ್ಟರು. ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರಾಗೃಹದ ಅಧೀಕ್ಷಕ ಸಂಜಯ ಜತ್ತಿ ಮಾತನಾಡಿ, ‘ಜೈಲಿನಲ್ಲಿರುವ ಎಲ್ಲ ಕೈದಿಗಳೂ ಅಕ್ಷರ ಪಡೆದು, ಸುಧಾರಣೆ ಹೊಂದಿ ಬಿಡುಗಡೆಯಾಗಲಿ ಎಂಬುದು ನಮ್ಮ ಗುರಿ’ ಎಂದರು.

ಏನಿದು ಕಲಿಕೆಯಿಂದ ಬದಲಾವಣೆ?

ಜೈಲಿನಲ್ಲಿರುವ ಓದು ಬರಹ ಬಾರದ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸುವ ವಿನೂತನ ಕಾರ್ಯಕ್ರಮ ‘ಕಲಿಕೆಯಿಂದ ಬದಲಾವಣೆ’. ಲೋಕಶಿಕ್ಷಣ ಟ್ರಸ್ಟ್‌ ಸಹಯೋಗ ನೀಡಿರುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅಕ್ಷರ ಕಲಿಸುವ ಹಾಗೂ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಅದರಂತೆ ಜಿಲ್ಲಾ ಕಾರಾಗೃಹದಲ್ಲಿರುವ 170 ಕೈದಿಗಳ ಪೈಕಿ 39 ಮಂದಿ ಅನಕ್ಷರಸ್ಥರು. ಅವರಿಗೆ ನಿತ್ಯ ಅಲ್ಲಿಯೇ ಇರುವ ಪದವೀಧರ ಕೈದಿಗಳು ಶಿಕ್ಷಣ ನೀಡುವರು. ಜತೆಗೆ, ಕಾರಾಗೃಹದ ಸಿಬ್ಬಂದಿಯೂ ಅಕ್ಷರ ಕಲಿಸಲಿದ್ದಾರೆ. 15 ದಿನಗಳಿಗೆ ಒಮ್ಮೆ ಲೋಕಶಿಕ್ಷಣ ಟ್ರಸ್ಟ್‌ನ ಸಿಬ್ಬಂದಿ ಬಂದು ಅವರಿಗೆ ಕೌಶಲಗಳನ್ನು ಹೇಳಿಕೊಡುವರು. ಮಾರ್ಚ್ ಅಂತ್ಯಕ್ಕೆ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT