ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವರ್ಷ ನಂತರ ಪೋಷಕರ ಮಡಿಲು ಸೇರಿದ ಬಾಲಕಿ

Last Updated 17 ಮೇ 2018, 9:33 IST
ಅಕ್ಷರ ಗಾತ್ರ

ಹಾಸನ: ಬಾಲಕಿಯೊಬ್ಬಳು ಏಳು ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ಹೃದಯಸ್ಪರ್ಶಿ ಘಟನೆ ಬೇಲೂರಿನಲ್ಲಿ ನಡೆದಿದೆ.

ಬೇಲೂರು ತಾಲ್ಲೂಕಿನ ದೇವಿಹಳ್ಳಿಯಲ್ಲಿ 8 ವರ್ಷದವಳಿದ್ದಾಗ ರೇಣುಕಾ (ಈಗ 15 ವರ್ಷ) ಕಾಣೆಯಾಗಿದ್ದಳು. ಪೋಷಕರು ಬಾಲಕಿಯನ್ನು ಬೇಲೂರು, ಹಳೇಬೀಡು, ಹಾಸನ ಹಾಗೂ ಸುತ್ತಮುತ್ತ ಹುಡುಕಿ ಪತ್ತೆಯಾಗದಿದ್ದಾಗ ಹಳೇಬೀಡು ಪೊಲೀಸ್ ಠಾಣೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ಮಕ್ಕಳ ಕಲ್ಯಾಣ ಸಮಿತಿ ತನ್ನ ಸಭೆಯಲ್ಲಿ ಪ್ರಕರಣ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಸ್ಥಾಪಿಸಲಾಗಿರುವ ಕಾಣೆಯಾದ ಮಕ್ಕಳ ಬ್ಯೂರೊಗೆ ಮಗುವಿನ ವ್ಯಕ್ತಿಚಿತ್ರ ಹಾಗೂ ಮಾಹಿತಿ ನೀಡಿತ್ತು.

ಜಿಲ್ಲೆಯಿಂದ ಕಾಣೆಯಾದ ಮಕ್ಕಳನ್ನು ಬೇರೆ ಜಿಲ್ಲೆಗಳಲ್ಲಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿನ ಮಕ್ಕಳ ವ್ಯಕ್ತಿ ಚಿತ್ರಕ್ಕೆ ಹೊಂದಾಣಿಕೆ ಮಾಡಿ ನೋಡುತ್ತಿದ್ದಾಗ ದೇವಿಹಳ್ಳಿಯಿಂದ ಕಾಣೆಯಾಗಿದ್ದ ರೇಣುಕಾ ಚಿತ್ರವು ಮಂಡ್ಯ ಜಿಲ್ಲೆಯ ಬಾಲಕಿಯರ ಬಾಲಮಂದಿರದ ರೇಖಾ ಎಂಬ ಬಾಲಕಿಯ ವ್ಯಕ್ತಿಚಿತ್ರಕ್ಕೆ ಹೊಂದಾಣಿಕೆಯಾಯಿತು. ಈ ವಿಷಯ ಕುರಿತು ಮಂಡ್ಯ ಜಿಲ್ಲೆಯ ಬಾಲಕಿಯರ ಬಾಲ ಮಂದಿರಕ್ಕೆ ಕರೆ ಮಾಡಿ ಹೊಂದಾಣಿಕೆ ಆಗಿರುವ ಬಾಲಕಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡ ವೇಳೆ, ಅಲ್ಲಿನ ಬಾಲಮಂದಿರದ ಅಧೀಕ್ಷಕರು ಬಾಲಕಿಗೆ 14 ವರ್ಷವಾಗಿದ್ದ ಕಾರಣ ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ವರ್ಗಾ ವಣೆ ಮಾಡಿದ್ದೇವೆ ಎಂದು ತಿಳಿಸಿದರು.

ಮೈಸೂರಿನ ಬಾಲಮಂದಿರಕ್ಕೆ ಕರೆ ಮಾಡಿ ಈ ವಿಷಯ ಚರ್ಚಿಸಿದಾಗ ಬಾಲಕಿ ಮತ್ತು ಪೋಷಕರ ಮಾಹಿತಿ ಪರಿಶೀಲಿಸಿ, ಆಕೆ ಹಾಸನಕ್ಕೆ ಸೇರಿದ ವಳೆಂಬುದನ್ನು ಒಪ್ಪಿದರು. ಆದರೆ, ಬಾಲಕಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಇರುವ ಕಾರಣ ಪರೀಕ್ಷೆ ಮುಗಿದ ನಂತರ ಹಾಸನಕ್ಕೆ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದರು.

ಹಲವು ಪ್ರಕ್ರಿಯೆಗಳ ಬಳಿಕ ಮೇ 15 ರಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಾಲಕಿ ಮತ್ತು ಪೋಷಕರನ್ನು ಹಾಜರುಪಡಿಸಿ ಸಮಿತಿ ಆದೇಶದಂತೆ ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಯಿತು. ಪೋಷಕರು ಮತ್ತು ಬಾಲಕಿಯ ಪುನರ್‌ಮಿಲನಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೋಮಲಾ, ಸದಸ್ಯೆ ಗೀತಾ, ಯೋಗನಾಥ್, ಅನುಪಮಾ, ಕಾಂತರಾಜು ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT