ಮಂಗಳವಾರ, ಆಗಸ್ಟ್ 20, 2019
22 °C
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ

ಪ್ರಿಯಾಂಕಾಗೆ ತಡೆ: ಕಾಂಗ್ರೆಸ್‌ ಆಕ್ರೋಶ

Published:
Updated:
Prajavani

ಮಡಿಕೇರಿ: ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ತಡೆಯೊಡ್ಡಿದ ಪೊಲೀಸರ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬಿಜೆಪಿ, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ, ಉತ್ತರಪ್ರದೇಶದ ಸೋನ್ ಭದ್ರ ಎಂಬಲ್ಲಿ ತುಂಡು ಭೂಮಿ ವಿಚಾರಕ್ಕೆ ಗುಂಡಿನ ದಾಳಿ ನಡೆದಿತ್ತು. ಬುಡಕಟ್ಟು ಜನಾಂಗದ 10 ಮಂದಿ ಸಾವನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಮಾರ್ಗಮಧ್ಯೆಯೇ ತಡೆದ ಪೊಲೀಸರು ಅವರನ್ನು ಬಂಧಿಸಿದ್ದರು. ಉತ್ತರ ಪ್ರದೇಶ ಸರ್ಕಾರದ ಕ್ರಮ ಖಂಡನೀಯವಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ಸೂಚನೆಯಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದು, ಬಿಜೆಪಿ ಸರ್ಕಾರ ರೈತ ವಿರೋಧಿ, ಬಡಜನ ವಿರೋಧಿ, ಬುಡಕಟ್ಟು ಜನಾಂಗದ ವಿರೋಧಿ ಸರ್ಕಾರ ಎಂಬುದನ್ನು ಪದೇಪದೇ ಸಾಬೀತು ಪಡಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಕಾನೂನು ಪಾಲನೆ ಮಾಡುತ್ತಿಲ್ಲ. ಅಕ್ರಮ ಬಂಧನ ಕ್ರಮವನ್ನು ಬಿಜೆಪಿ ಹಿಂಪಡೆಯಬೇಕು. ಇಂತಹ ಗೂಂಡಾ ಪ್ರವೃತ್ತಿ ಹಾಗೂ ಪಾಳೆಗಾರಿಕೆ ಸಂಸ್ಕೃತಿಯನ್ನು ಅರೆಸೊತ್ತಿಗೆ ಕಾಲದಲ್ಲಿನ ರಾಜರು ಮಾಡುತ್ತಿದ್ದರು. ಇದೇ ಧೋರಣೆಯನ್ನು ಭಾರತೀಯ ಜನತಾ ಪಾರ್ಟಿ ಪಾಲಿಸುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕಾರ್ಯದರ್ಶಿ ಚಂದ್ರಕಲಾ, ಸದಸ್ಯ ಟಿ.ಪಿ.ರಮೇಶ್, ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ನಗರ‌ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರಮುಖರಾದ ಟಿ.ಇ.ಸುರೇಶ್, ಎಂ.ಎ. ಉಸ್ಮಾನ್, ಅಪ್ರು ರವೀಂದ್ರ ಹಾಜರಿದ್ದರು.

 

Post Comments (+)