ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಶಿಥಿಲಗೊಂಡ ಚೋರನ ಹೊಳೆ ಸೇತುವೆ

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ‘ಕಬ್ಬಿಣ ಸೇತುವೆ’; ದುರಸ್ತಿಗೆ ಸ್ಥಳೀಯರ ಆಗ್ರಹ
Last Updated 7 ಜುಲೈ 2022, 4:29 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಕಬ್ಬಿಣ ಸೇತುವೆ’ ಎಂದೇ ಪ್ರಸಿದ್ಧಿ ಪಡೆದಿರುವ, ಬ್ರಿಟಿಷರ ಕಾಲದಲ್ಲಿ ಚೋರನ ಹೊಳೆಗೆ ನಿರ್ಮಿಸಿರುವ ಸೇತುವೆ ದುಸ್ಥಿತಿ ತಲುಪಿದ್ದು, ಬೀಳುವ ಸ್ಥಿತಿಯಲ್ಲಿದೆ.

ಮಡಿಕೇರಿ– ಹಾಸನ ಹೆದ್ದಾರಿಯ ಐಗೂರು ಗ್ರಾಮದ ಕಬ್ಬಿಣ ಸೇತುವೆಯನ್ನು 1837ರಲ್ಲಿ ಲಾರ್ಡ್ ಲೂಯಿಸ್ ಅವಧಿಯಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸೇತುವೆ ಈಗ ತೀರಾ ದುರ್ಬಲ ಸ್ಥಿತಿಗೆ ತಲುಪಿದೆ. ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಚರಿಸುತ್ತಾರೆ. ಇದರ ಬಗ್ಗೆ ಹಲವಾರು ಬಾರಿ ಮಾಧ್ಯಮಗಳು ಗಮನ ಸೆಳೆದಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಸೇತುವೆಯನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿಜಯ ಕುಮಾರ್ ಸೇತುವೆಯ ಗುಣಮಟ್ಟ ಖಾತರಿ ಬಗ್ಗೆ ಪರಿಶೀಲನೆ ನಡೆಸಿ, ಸೇತುವೆ ದುರ್ಬಲವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೂ, ಸೇತುವೆಯ ಪುನರ್‌ ನಿರ್ಮಾಣ ಇದುವರೆಗೂ ಆಗಿಲ್ಲ. ಸೇತುವೆ ಕಿರಿದಾಗಿದ್ದು, ಒಂದು ವಾಹನ ಚಲಿಸಿದರೆ ಮತ್ತೊಂದು ವಾಹನಕ್ಕೆ ದಾರಿ ಇರುವುದಿಲ್ಲ.

‘ಸೇತುವೆ ಕಿರಿದಾಗಿದ್ದು, ಬಸ್ ಅಥವಾ ಲಾರಿ ಚಲಿಸುವ ಸಂದರ್ಭ ಪಾದಚಾರಿಗಳು ಕೂಡ ನಡೆಯಲು ಜಾಗ ಇರುವುದಿಲ್ಲ. ತಿರುವು ರಸ್ತೆಯಲ್ಲಿ ಸೇತುವೆ ಇರುವುದರಿಂದ ಹಲವಾರು ವಾಹನಗಳನ್ನು ತಿರುಗಿಸುವ ಸಂದರ್ಭ ಸೇತುವೆಯ ಕಟ್ಟೆಗೆ ಡಿಕ್ಕಿ ಹೊಡೆದು ಆಳದ ಕಂದಕಕ್ಕೆ ಬಿದ್ದ ಉದಾಹರಣೆಗಳಿವೆ’ ಎಂದು ಸ್ಥಳೀಯ ನಿವಾಸಿ ರಮೇಶ್ ಹೇಳಿದರು.

‘ಈ ರಸ್ತೆಯಲ್ಲಿ ಶಾಲಾ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಆದರೂ ಹೊಸ ಸೇತುವೆ ನಿರ್ಮಿಸುತ್ತಿಲ್ಲ’ ಎಂದು ವಾಹನ ಚಾಲಕ ಮಧು ಬೇಸರ ವ್ಯಕ್ತಪಡಿಸಿದರು.

ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹ

‘ಸೇತುವೆಯ ಕೆಳಭಾಗ ತೀರಾ ಶಿಥಿಲಾವಸ್ಥೆಗೆ ತಲುಪಿದೆ. ಮರಗಳನ್ನು ತುಂಬಿದ ಭಾರಿ ಗಾತ್ರದ ಲಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಈ ಸಂದರ್ಭದಲ್ಲಿ ಸೇತುವೆ ಅಲುಗಾಡುತ್ತದೆ. ಕಳೆದ ಮೂರು ವರ್ಷಗಳಿಂದ ಪ್ರವಾಹ ಕೂಡ ಹೆಚ್ಚಾಗಿದ್ದು ನೀರಿನ ಒಳಹರಿವು ಸೇತುವೆಯ ಮೇಲ್ಮಟ್ಟಕ್ಕೆ ಬಡಿಯುತ್ತಿದ್ದು, ಸೇತುವೆಯ ಅಡಿಭಾಗ ಶಿಥಿಲಗೊಂಡಿದೆ. ಕೂಡಲೇ ಸೇತುವೆ ನಿರ್ಮಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ್ ಒತ್ತಾಯಿಸಿದರು.

***

ಸೇತುವೆ ನಿರ್ಮಾಣಕ್ಕೆ ₹3 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಕೆಆರ್‌ಡಿಸಿಎಲ್‌ಗೆ ಸಲ್ಲಿಸಲಾಗಿದೆ. ಅನುಮೋದನೆ ಇನ್ನೂ ಸಿಕ್ಕಿಲ್ಲ.

–ಮೋಹನ್ ಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT