ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಖಾಸಗಿ ಶಾಲೆ ಮೀರಿಸುವ ನ್ಯಾಯದಹಳ್ಳ ಶಾಲೆ

ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಮುಖ್ಯಶಿಕ್ಷಕಿ ಮಂಜುಳಾಮಣಿ; ಶಾಲೆಯಲ್ಲಿ ಅಗತ್ಯ ಸೌಕರ್ಯ
Last Updated 17 ಸೆಪ್ಟೆಂಬರ್ 2022, 5:03 IST
ಅಕ್ಷರ ಗಾತ್ರ

ಶನಿವಾರಸಂತೆ: ಇಲ್ಲಿಗೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಯದಹಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನೂ ಮೀರಿಸುವಂತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವಿಶಾಲವಾದ ಆಟದ ಮೈದಾನ, ಅದಕ್ಕೆ ಸುಸಜ್ಜಿತವಾದ ತಡೆಗೋಡೆ, ಅತ್ಯುತ್ತಮ ಶೌಚಾಲಯಗಳು, ಶಾಲಾ ಕೊಠಡಿಗಳಿಗೆ ಟೈಲ್ಸ್, ಸುಂದರವಾದ ಕೈತೋಟ... ಹೀಗೆ ಹಲವು ಬಗೆಯ ಮೂಲಸೌಕರ್ಯಗಳನ್ನು ಪಡೆದು ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ.

ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಮುಖ್ಯಶಿಕ್ಷಕಿ ಜಿ.ಈ.ಮಂಜುಳಾಮಣಿ. ಅವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅವರು ಇಲ್ಲಿಗೆ 2016ರಲ್ಲಿ ಮುಖ್ಯಶಿಕ್ಷಕಿಯಾಗಿ ಬಂದಾಗ ಮೊದಲಿಗೆ ಮಾಡಿದ್ದು ಶಾಲೆಯ ಕುಂದುಕೊರತೆಗಳ ಪಟ್ಟಿ.

‘ದುರಸ್ತಿ, ಸುಣ್ಣಬಣ್ಣ ಕಾಣದ ಶಾಲೆಯಲ್ಲಿ ನೀರು ಹಾಗೂ ಶೌಚಾಲಯ ಸಮಸ್ಯೆ ಮುಖ್ಯವಾಗಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು ಒಂದು ಯೋಜನೆ ತಯಾರಿಸಿಕೊಂಡು ಕಾರ್ಯೋನ್ಮುಖಳಾದೆ’ ಎಂದು ಮಂಜುಳಾಮಣಿ ಹೇಳುತ್ತಾರೆ.

ಧನಸಹಾಯ ಮಾಡಿದ ಹಿರಿಯ ವಿದ್ಯಾರ್ಥಿನಿ!: ಸರ್ಕಾರದ ನೆರವಿನ ಜತೆಗೆ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳ ನೆರವು ಪಡೆಯಲು ಅವರು ನಿರ್ಧರಿಸಿದರು. ಅವರ ಪ್ರಯತ್ನದ ಫಲವಾಗಿ ಶಾಲೆಯ ಹಿರಿಯ ವಿದ್ಯಾರ್ಥಿನಿ ವಿದ್ಯಾ ಗಣೇಶ್ ₹50 ಸಾವಿರ ಧನಸಹಾಯ ಮಾಡಿದರು. ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ₹60 ಸಾವಿರ ಮೌಲ್ಯದ ಬಣ್ಣ ನೀಡಿದರು. ಗ್ರಾಮ ಪಂಚಾಯಿತಿ ಪೈಪ್‌ಲೈನ್ ಅಳವಡಿಸಿ ಅಕ್ಷರ ದಾಸೋಹಕ್ಕಾಗಿ 2 ಟ್ಯಾಂಕ್ ಹಾಕಿಸಿದರು. ಶಾಲೆಯ ಅನುದಾನವೂ ಸೇರಿ ಹಿರಿಯ ವಿದ್ಯಾರ್ಥಿಗಳೇ ಸುಣ್ಣಬಣ್ಣ ಮಾಡಿದರು.

‘ಶಾಲೆಯ ಹಿರಿಯ ವಿದ್ಯಾರ್ಥಿ ಲೋಕೇಶ್ ಅವರ ಸಹಕಾರದಿಂದ ಶಾಲೆಯ ಚಾವಣಿ ದುರಸ್ತಿಗೆ ರಾಜ್ಯ ವಲಯ ಯೋಜನೆಯಡಿ ₹5 ಲಕ್ಷ ದೊರೆಯಿತು. 2019ರಲ್ಲಿ ₹10 ಲಕ್ಷ ದೊರೆತು ಶಾಲಾ ಒಳಾಂಗಣ– ಹೊರಾಂಗಣ ಅಭಿವೃದ್ಧಿ ನಡೆಯಿತು. 8 ಕೊಠಡಿಗಳಿಗೆ ಟೈಲ್ಸ್ ಹಾಕಿ ಶಿಕ್ಷಕರ ಮೇಲ್ವಿಚಾರಣೆಯಿಂದ ಗುಣಮಟ್ಟದ ಕಾಮಗಾರಿ ನಡೆದು ಸುಸಜ್ಜಿತ ಸುಂದರ ಕಟ್ಟಡ ತಲೆಯೆತ್ತಿ ನಿಂತಿತು. ಗ್ರಾಮ ಪಂಚಾಯಿತಿ ಸಹಕಾರದಿಂದ 75 ಮೀಟರ್ ತಡೆಗೋಡೆಯೂ ನಿರ್ಮಾಣವಾಗಿದೆ. ಶೌಚಾಲಯ ಸಮಸ್ಯೆಯೂ ಬಗೆಹರಿದು, ಸುಂದರ ಕೈತೋಟದ ನಿರ್ಮಾಣಕ್ಕೂ ₹2.5 ಲಕ್ಷ ಮಂಜೂರಾಯಿತು’ ಎಂದು ಅವರು ಹೇಳುತ್ತಾರೆ

ಪಠ್ಯ– ಪಠ್ಯೇತರ ಚಟುವಟಿಕೆಗಳಿಗೆ, ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ನಡೆಯುತ್ತಿದ್ದು, ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

‘ಶಾಲಾಭಿವೃದ್ಧಿಯ ಕಾರ್ಯಕ್ಕೆ ದೈಹಿಕ ಶಿಕ್ಷಣ ಶಿಕ್ಷಕಿ ಜಿ.ಪಿ.ಕವಿತಾ, ಸಹಶಿಕ್ಷಕ ಕೆ.ಆರ್.ಮಂಜುನಾಥ್, ಅತಿಥಿ ಶಿಕ್ಷಕಿ ರಶ್ಮಿತಾ ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಶಾಲೆಯ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತಿದೆ’ ಎಂದು ಮುಖ್ಯಶಿಕ್ಷಕಿ ಮಂಜುಳಾಮಣಿ ಸಂತಸ ವ್ಯಕ್ತಪಡಿಸುತ್ತಾರೆ.

ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿದ್ದು, ಸಮ್ಮಿಲನ– ಗುರುವಂದನೆ ಕಾರ್ಯಕ್ರಮಗಳ ಮೂಲಕ ಹಿರಿಯ ವಿದ್ಯಾರ್ಥಿಗಳು ಶಾಲೆಗಾಗಿ ಅಗತ್ಯ ವಸ್ತುಗಳ ಕೊಡುಗೆ ನೀಡಿ ಅಭಿವೃದ್ಧಿಗೆ ಸಹಕರಿಸಿರುತ್ತಾರೆ.

***

ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ. ಸರ್ಕಾರ, ದಾನಿಗಳು ಹಾಗೂ ಮೇಲಧಿಕಾರಿಗಳ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸುವೆ.

–ಜಿ.ಈ.ಮಂಜುಳಾಮಣಿ, ಮುಖ್ಯಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನ್ಯಾಯದಹಳ್ಳ

***

ಸಮನ್ವಯ ಸಾಧಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯ ವಿದ್ಯಾರ್ಥಿಗಳು, ಸಹಶಿಕ್ಷಕರ ವಿಶ್ವಾಸ, ಸಹಕಾರ ಪಡೆದುಕೊಳ್ಳುತ್ತಾ ಮುಖ್ಯಶಿಕ್ಷಕಿ ಮಂಜುಳಾಮಣಿ ಶಾಲೆಯ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದ್ದಾರೆ

–ಕೆ.ವಿ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT