ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ತಬಲಾ ಕ್ಷೇತ್ರದ ಪ್ರಮುಖ ಸಾಧಕ ಚಂದ್ರು

Published : 21 ಆಗಸ್ಟ್ 2024, 6:47 IST
Last Updated : 21 ಆಗಸ್ಟ್ 2024, 6:47 IST
ಫಾಲೋ ಮಾಡಿ
Comments

ಮಡಿಕೇರಿ: ತಬಲಾ ಕಲಿಯಲೇ ಬೇಕು ಎನ್ನುವ ಅದಮ್ಯ ಬಯಕೆಯಿಂದ ಕೇರಳಕ್ಕೆ ಹೊರಟವರು ಇಲ್ಲಿನ ಮೂರ್ನಾಡು ನಿವಾಸಿ ಕೆ.ವಿ.ಚಂದ್ರು.

ಕೇರಳದಲ್ಲೇ ಜನಿಸಿ ಇಲ್ಲಿಯೇ ನೆಲೆ ನಿಂತರೂ ತಬಲಾ ಮೇಲಿನ ಅತಿಯಾದ ವ್ಯಾಮೋಹದಿಂದ ಅದನ್ನು ಕಲಿಯಲೆಂದು ಪ್ರತಿ ತಿಂಗಳೂ ಕೇರಳದ ಪಾಲಕ್ಕಾಡ್‌ಗೆ ತೆರಳಿ, ಅಲ್ಲಿನ ಗುರು ಧರ್ಮಚಂದ್ರ ಅವರ ಬಳಿ ಅಭ್ಯಾಸ ಮಾಡಿದರು. ಕೇರಳದ ತಮ್ಮ ಸಂಬಂಧಿಕರ ಮನೆಗಳಲ್ಲಿ ವಾರಗಟ್ಟಲೆ ಉಳಿದುಕೊಂಡು ಸತತ ಅಭ್ಯಾಸ ಮಾಡಿ, ತಬಲಾದಲ್ಲಿ ಇಂದು ನಿಷ್ಣಾತರಾಗಿದ್ದಾರೆ.

ವೇಲಾಯುಧನ್ ಮತ್ತು ಅಮ್ಮಣ್ಣಿಯಮ್ಮ ಅವರ ಪುತ್ರರಾದ ಇವರು ಓದಿರುವುದು 7ನೇ ತರಗತಿ ಮಾತ್ರ. ಜೀವನೋಪಾಯಕ್ಕೆ ಅವಲಂಬಿಸಿರುವುದು ಮರಗೆಲಸ. ಆದರೆ, ಹವ್ಯಾಸವಾಗಿ ತೆಗೆದುಕೊಂಡ ತಬಲಾ ವಾದನ ಇವರಿಗೆ ಎಲ್ಲಿಲ್ಲದ ಕೀರ್ತಿ ತಂದು ಕೊಟ್ಟಿತು.

ಕಳೆದ 40 ವರ್ಷಗಳಿಂದ ತಬಲಾ ವಾದನ ಮತ್ತು ಹಾಡುಗಾರಿಕೆ ಎರಡೂ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಂದ್ರು ಕೇವಲ ಕೊಡಗು ಮಾತ್ರವಲ್ಲ, ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇಷ್ಟೇ ಅಲ್ಲ, ತಮಿಳುನಾಡು ಮತ್ತು ಕೇರಳದಲ್ಲೂ ಕಾರ್ಯಕ್ರಮಗಳನ್ನು ನೀಡಿರುವುದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಂದ್ರು ಸಮಾನ ಮನಸ್ಕರ ಜೊತೆ ಸೇರಿ ದೀನ್‌ ಬಾಯ್ಸ್, ಶಿವರಂಜಿನಿ, ಕಾವೇರಿ ಗಾನವಾಹಿನಿ ಸೇರಿದಂತೆ ಅನೇಕ ಕಲಾತಂಡಗಳನ್ನು ಕಟ್ಟಿದ್ದರು. ಸದ್ಯ, ವಿರಾಜಪೇಟೆಯಲ್ಲಿರುವ ಸಂಗೀತ ಕಲಾ ಸಂಘದಲ್ಲಿ ಇವರು ಸಕ್ರಿಯರಾಗಿದ್ದಾರೆ.

‘ಜೀವನೋಪಾಯಕ್ಕೆ ಮರಗೆಲಸವನ್ನೇ ಆಶ್ರಯಿಸಿದ್ದರೂ ಹವ್ಯಾಸವಾಗಿ ತೆಗೆದುಕೊಂಡ ತಬಲಾ ಮತ್ತು ಹಾಡುಗಾರಿಕೆ ನನಗೆ ತೃಪ್ತಿ ಕೊಟ್ಟಿದೆ. ಸೆ. 10ರಂದು ಸುಂಟಿಕೊಪ್ಪದಲ್ಲಿ, 15ರಂದು ವಿರಾಜಪೇಟೆಯಲ್ಲಿ ಕಾರ್ಯಕ್ರಮಗಳು ನಿಗದಿಯಾಗಿವೆ’ ಎಂದು ಹೇಳುತ್ತಾರೆ.

ಇಂದಿನ ಯುವಸಮೂಹ ತಬಲಾ ಸೇರಿದಂತೆ ಸಾಂಪ್ರದಾಯಿಕ ಸಂಗೀತದಿಂದ ಪಾಶ್ಚಾತ್ಯ, ಡಿ.ಜೆ, ರ‍್ಯಾಂಪ್‌ ಮೊದಲಾದ ಸಂಗೀತ ಕಾರ್ಯಕ್ರಮಗಳತ್ತ ವಾಲುತ್ತಿರುವ ಕುರಿತೂ ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಬಲಾ ವಾದ್ಯಕ್ಕೆ ಏನಿಲ್ಲ ಎಂದರೂ ₹ 12 ಸಾವಿರದವರೆಗೂ ವೆಚ್ಚವಾಗುತ್ತದೆ. ಜೊತೆಗೆ, ತಬಲಾ ವಾದ್ಯ ಹೆಚ್ಚು ಮಳೆ ಹಾಗೂ ಸದಾ ಶೀತದಿಂದ ಕೂಡಿರುವ ಕೊಡಗಿನಂತಹ ಪ್ರದೇಶದಲ್ಲಿ ನಿರ್ವಹಿಸುವುದೂ ಕಷ್ಟಕರ. ಇಂತಹ ಸವಾಲುಗಳ ಮಧ್ಯೆಯೂ ಚಂದ್ರು ಅವರು ಇಂದಿಗೂ ತಬಲಾ ವಾದನದಲ್ಲಿ ತೊಡಗಿಸಿಕೊಂಡಿರುವುದು ಕಲೆಯ ಮೇಲಿನ ಅವರ ಒಲವಿಗೆ ಸಾಕ್ಷಿ ಎನಿಸಿದೆ. ಹೀಗಾಗಿಯೇ ಅವರು, ಕೊಡಗು ಜಿಲ್ಲೆಯ ತಬಲಾ ವಾದಕರಲ್ಲಿ ಪ್ರಮುಖರು ಎನಿಸಿದ್ದಾರೆ.

ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಇತರ ಸಂಘ, ಸಂಸ್ಥೆಗಳಿಂದ ಗೌರವಗಳು ಸಿಕ್ಕಿದ್ದು, ಸರ್ಕಾರ ಇವರನ್ನು ಗುರುತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT