ಶನಿವಾರ, ನವೆಂಬರ್ 28, 2020
25 °C
ಶಿವರಳ್ಳಿಯ ಪಲ್ಲವಿಗೆ ಒಲಿದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

ಸಂಕಷ್ಟದಲ್ಲಿ ಅರಳಿದ ಕ್ರೀಡಾ ಪ್ರತಿಭೆ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ರಾಜ್ಯ ಸರ್ಕಾರ ಗ್ರಾಮೀಣ ಕ್ರೀಡಾಪಟುಗಳಿಗೆ ನೀಡುವ ಪ್ರತಿಷ್ಠಿತ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಗೆ ಸಮೀಪದ ಶಿವರಳ್ಳಿ ಗ್ರಾಮದ ಗ್ರಾಮೀಣ ಕ್ರೀಡಾ ಪ್ರತಿಭೆ ಎಸ್.ಕೆ.ಪಲ್ಲವಿ ಭಾಜನರಾಗಿದ್ದಾರೆ. ಇದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರಿದ ಎಸ್.ಕೆ.ಪಲ್ಲವಿ ಅವರು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಿವರಳ್ಳಿಯ ಕೃಷಿಕರಾದ ಕುಮಾರಪ್ಪ- ಕುಸುಮಾವತಿ ದಂಪತಿ ಪುತ್ರಿ.

2016ರಲ್ಲಿ ತೆಲಂಗಾಣದಲ್ಲಿ ಹಾಗೂ 2017ರಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಜಯಿಸಿದ ಸಾಧನೆ ಅವರದ್ದು. ಈ ಸಾಧನೆ ಗುರುತಿಸಿದ ರಾಜ್ಯ ಸರ್ಕಾರ ಪಲ್ಲವಿ ಅವರನ್ನು ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಿ, ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ₹ 1 ಲಕ್ಷ ಮೌಲ್ಯದ ಚೆಕ್‌ ಸಹಿತ ಪ್ರಶಸ್ತಿಯನ್ನು ಪಲ್ಲವಿ ಅವರಿಗೆ ಪ್ರದಾನ ಮಾಡಿದ್ದಾರೆ.

ಪ್ರಸ್ತುತ ಪಲ್ಲವಿ ಅವರು ಮೂಡಬಿದಿರೆಯ ಆಳ್ವಾಸ್ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಬಿ.ಎ ಓದುತ್ತಿದ್ದಾರೆ. ಬಾಲ್ಯದಿಂದಲೇ ಕ್ರೀಡೆಯಲ್ಲಿ ಒಲವು ಮೂಡಿಸಿಕೊಂಡಿದ್ದ ಪಲ್ಲವಿ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಂಬಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಶಾಲನಗರದ ಬಳಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು.

ಆ ಸಮಯದಲ್ಲಿ ಅರಳುತ್ತಿದ್ದ ಈ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ವಸತಿ ಶಾಲೆಯ ಅಂದಿನ ಪ್ರಾಂಶುಪಾಲ ಕೆ.ವಿ.ಸುರೇಶ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಅವರು ಪ್ರೋತ್ಸಾಹಿಸಿದರು. ಹೆಚ್ಚಿನ ತರಬೇತಿ ನೀಡಿ ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಗ್ರಾಮೀಣ ಕ್ರೀಡಾ ಪ್ರತಿಭೆಯನ್ನು ಬೆಳಕಿಗೆ ತಂದರು.

ಜಿಲ್ಲಾ ತಂಡದಲ್ಲಿ ಸ್ಥಾನ ಪಡೆದ ಪಲ್ಲವಿ ಅವರು, ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆದು ರಾಜ್ಯ ತಂಡಕ್ಕೆ ಆಯ್ಕೆಯಾದರು. ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪಿಯು ಕಾಲೇಜಿನಲ್ಲಿ ದ್ದಾಗ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದರು.

ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಪ್ರಶಸ್ತಿಯನ್ನು ಪಡೆದರು. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ ಅವರು, ಮೂರು ಬಾರಿ ‘ಸ್ಟಾರ್ ಆಫ್ ಇಂಡಿಯಾ’ ಬಿರುದಿನೊಂದಿಗೆ ಪ್ರಶಸ್ತಿ ಪಡೆದಿದ್ದಾರೆ. ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರ ತಂಡವನ್ನು ಪ್ರತಿನಿಧಿಸುವ ಕ್ರೀಡಾ ಸಾಮರ್ಥ್ಯ ಹೊಂದಿರುವ ಈ ಗ್ರಾಮೀಣ ಪ್ರತಿಭೆಗೆ ರಾಷ್ಟ್ರಕ್ಕಾಗಿ ಆಡಬೇಕು, ಪ್ರತಿನಿಧಿಸಬೇಕು ಎಂಬ ಆಶಯವಿದೆ. ಕನಸುಗಳಿವೆ. ಆದರೆ, ಕನಸು ನನಸಾಗಲು ಆರ್ಥಿಕ ಸಮಸ್ಯೆಯೇ ಅಡ್ಡಿಯಾಗಿದೆ.

‘ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದ ಇಂದು ಉತ್ತಮ ಕ್ರೀಡಾಪಟು ಆಗಿದ್ದೇನೆ. ಬಾಲ್ಯದ ಕನಸು ನನಸಾಗಿದೆ. ಶಿಕ್ಷಣ ಮುಗಿಸಿದ ಬಳಿಕ ಸರ್ಕಾರಿ ಕೆಲಸವೇ ಲಭಿಸಿದರೂ ಮೊದಲ ಆದ್ಯತೆ ಕ್ರೀಡೆಗೆ. ಕ್ರೀಡಾಲೋಕದಲ್ಲಿ ಬಹಳ ಸಾಧಿಬೇಕಾಗಿದೆ’ ಎನ್ನುತ್ತಾರೆ ಪಲ್ಲವಿ.

ಸರ್ಕಾರ ಬಡ ರೈತ ಕುಟುಂಬದ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರಬೇಕು. ರಾಷ್ಟ್ರ ತಂಡವನ್ನು ಪ್ರತಿನಿಧಿ ಸುವ ಅವಕಾಶ ಕಲ್ಪಿಸಬೇಕು ಎಂಬ ಆಶಯ ಆಕೆಯ ಪೋಷಕರದ್ದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.