ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಬಹುಮುಖ ಪ್ರತಿಭೆಯ ಕೃಷಿವಿಜ್ಞಾನಿ

ಸಮಾಜಮುಖಿ ಕಾಯಕದ ಕೃಷಿಕ ಮೋಹನ್ ಕುಮಾರ್ ವಿಶಿಷ್ಟ ಸಾಧನೆ
Last Updated 14 ಫೆಬ್ರುವರಿ 2021, 3:48 IST
ಅಕ್ಷರ ಗಾತ್ರ

ಶನಿವಾರಸಂತೆ: ಪ್ರಗತಿಪರ ಕೃಷಿಕ, ಕೃಷಿ ಯಂತ್ರೋಪಕರಣಗಳನ್ನು ಆವಿಷ್ಕಾರ ಮಾಡುವ ಕೃಷಿವಿಜ್ಞಾನಿ, ಯೋಗಗುರು, ಸಮಾಜಸೇವಕ ಎಂದೆಲ್ಲಾ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡು ಸಾಧನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ.

ಇವರೇ ಎ.ಡಿ.ಮೋಹನ್ ಕುಮಾರ್. ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ದೊಡ್ಡೇಗೌಡ- ಜಾನಕಿ ದಂಪತಿಯ ಪುತ್ರರಾದ ಮೋಹನ್ ಕುಮಾರ್, ಬಿ.ಕಾಂ. ಪದವಿ ಪಡೆದರು. ನಂತರ ತಂದೆ- ತಾಯಿ ಜತೆ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡರು. ಜತೆಗೆ ಶನಿವಾರಸಂತೆಯಲ್ಲಿ ಶ್ರೀ ಮಂಜುನಾಥೇಶ್ವರ ಎಂಜಿನಿಯರಿಂಗ್ ವರ್ಕ್ ಶಾಪ್ ಆರಂಭಿಸಿ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ.

ಇವರು ತಮ್ಮ ಪಾಲಿಗೆ ಬಂದ 5.5 ಎಕರೆ ಜಮೀನಿನಲ್ಲಿ 1.5 ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಉಳಿದ ಜಮೀನಿನಲ್ಲಿ ತೋಟ ಮಾಡಿದ್ದು ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ‘ಒಂದು ಬೆಳೆ ನಷ್ಟವಾ ದರೂ ಮತ್ತೊಂದು ಬೆಳೆ ಕೈಹಿಡಿಯು ತ್ತದೆ’ ಎಂಬ ನಂಬಿಕೆ ಇವರದ್ದು.

ತೋಟದಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ, ಬಾಳೆ, ತೆಂಗು, ಬೆಣ್ಣೆಹಣ್ಣು, ಲಿಚಿ ಹಣ್ಣು ಹಾಗೂ ನೆರೆ ರಾಜ್ಯದ ರಾಂಬುತನ್ ಬೆಳೆಯನ್ನೂ ಬೆಳೆಯುತ್ತಿದ್ದಾರೆ. ಒಂದು ಎಕರೆ ಜಾಗದಲ್ಲಿ ಕೆಲ ವರ್ಷಗಳಿಂದ ಅಡಿಕೆ ಬೆಳೆಯುತ್ತಿದ್ದು ಪ್ರಸ್ತುತ ಮರವೊಂದರಲ್ಲಿ ತಲಾ 50 ರಿಂದ 60 ಕೆ.ಜಿ. ಅಡಿಕೆ ದೊರೆಯುತ್ತಿದ್ದು ವಾರ್ಷಿಕ ₹ 50 ಸಾವಿರಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.

ಗದ್ದೆಗೆ ಕೊಟ್ಟಿಗೆ ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ತೋಟದ ಮಿಶ್ರಬೆಳೆ ಹಾಗೂ ವಾಣಿಜ್ಯ ಬೆಳೆಗೆ ಕೊಟ್ಟಿಗೆ ಗೊಬ್ಬರದ ಜತೆ ರಸಗೊಬ್ಬರವನ್ನೂ ಬಳಸುತ್ತಾರೆ.

ಕಾಫಿ, ಕರಿಮೆಣಸು, ಅಡಿಕೆ ಹಾಗೂ ಮಿಶ್ರಬೆಳೆಗಳಿಂದ ವಾರ್ಷಿಕ ₹ 2.5 ಲಕ್ಷಕ್ಕೂ ಅಧಿಕ ಆದಾಯವಿದೆ. ಸ್ವಂತ ಕೆರೆ ಮತ್ತು ಮಳೆ ನೀರಿನ ಆಶ್ರಯದಿಂದ ಕೃಷಿ ಮಾಡುತ್ತಿದ್ದಾರೆ. ಸೀಮಿತ ಕಾರ್ಮಿರ ಜತೆಯಲ್ಲಿ ಮೋಹನ್ ಕುಮಾರ್ ಹಾಗೂ ಪತ್ನಿ ಪುಷ್ಪಾ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಎಂಜಿನಿಯರಿಂಗ್ ಹಾಗೂ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಪುತ್ರಿಯರೂ ಸಹಕಾರ ನೀಡುತ್ತಾರೆ. ಕೃಷಿ ಇಲಾಖೆ ಅಧಿಕಾರಿಗಳ ಸಲಹೆ, ಮಾರ್ಗದರ್ಶನವನ್ನು ಪಡೆಯುತ್ತಾರೆ, ಸೌಲಭ್ಯವನ್ನಲ್ಲ.

ಸಾಂಪ್ರದಾಯಿಕ ಕೃಷಿ ಪದ್ಧತಿ ಯಲ್ಲಿ ತೊಡಗಿಸಿಕೊಂಡಿರುವ ಮೋಹನ್‌ ಕುಮಾರ್ ಪೂರಕವಾಗಿ ತಾವೇ ಆಧುನಿಕ ಯಂತ್ರಗಳನ್ನು ಆವಿಷ್ಕಾರ ಮಾಡಿ ತಮ್ಮ ವರ್ಕ್ ಶಾಪ್‌ನಲ್ಲೇ ಕಡಿಮೆ ಖರ್ಚಿನಲ್ಲಿ ಕೃಷಿಗೆ ಅನುಕೂಲವಾಗುವ ಯಂತ್ರೋಪಕರಣ ತಯಾರಿಸಿದ್ದಾರೆ.

ಯಂತ್ರಗಳನು ಬೇಕೆನ್ನುವ ಕೃಷಿಕರಿಗೂ ಮಾಡಿ ಕೊಡುತ್ತಾರೆ. ‘ಕೃಷಿ ವಿಜ್ಞಾನಿ’ ಎಂದೇ ಖ್ಯಾತಿ ಪಡೆದಿದ್ದಾರೆ. ಯಶಸ್ಸು ಸಾಧಿಸಿದ್ದಾರೆ.

ಕಾಳು ಮೆಣಸು ಬೇರ್ಪಡಿಸುವ ಯಂತ್ರ, ಮೊಪೆಡ್ ಎಂಜಿನ್ ಬಳಸಿ ಉಳುಮೆ ಮಾಡುವ ಯಂತ್ರ, ಏಲಕ್ಕಿ ಒಣಗಿಸುವ ಯಂತ್ರ, ಕಳೆ ತೆಗೆಯುವ ಯಂತ್ರ, ಹಳೇ ಬೈಕ್ ಎಂಜಿನ್ ಬಳಸಿ ಸ್ಪ್ರೆ ಮಾಡುವ ಯಂತ್ರ, ಸೌದೆ ಒಡೆಯುವ ಯಂತ್ರ ಇತ್ಯಾದಿ ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ಆವಿಷ್ಕರಿಸಿ, ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಪರಿಚಯಿಸಿ ಸಲಹೆ ನೀಡುತ್ತಾರೆ. ಮಾಡಿ ಕೊಡುತ್ತಾರೆ. ರೋಟರಿ ಸಂಘದ ಕಾರ್ಯದರ್ಶಿಯೂ ಆಗಿದ್ದು ಸಮಾಜಮುಖಿ ಕೆಲಸದಲ್ಲೂ ಜನಮನ್ನಣೆ ಗಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT