ಮಡಿಕೇರಿ: ಪತಿಯ ಕೃಷಿ ಹಾಗೂ ಮೀನುಗಾರಿಕೆಯೊಂದಿಗೆ ಕೈಜೋಡಿಸಿ ಮೀನುಗಾರಿಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಯಶಸ್ಸು ಕಂಡವರು ಸಿದ್ದಾಪುರ ಸಮೀಪದ ಗುಹ್ಯದ ಪಟ್ಟಡ ನಮಿತಾ ಅಯ್ಯಪ‍್ಪ.
ಇವರ ಪತಿ ಪಟ್ಟಡ ಶ್ಯಾಂ ಅಯ್ಯಪ್ಪ ಅವರು ಕೃಷಿ, ತೋಟಗಾರಿಕೆಯೊಂದಿಗೆ ಮೀನುಗಾರಿಕೆಯನ್ನೂ ಮಾಡುತ್ತಿದ್ದಾರೆ. ವರ್ಷಕ್ಕೆ ಸುಮಾರು 5 ಟನ್‌ನಷ್ಟು ಮೀನುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ.
ಕೆಲವೊಮ್ಮೆ ಈ ಮೀನುಗಳು ಮಾರಾಟವಾಗದೇ ಉಳಿದು ಹಾಳಾಗುತ್ತಿರುವುದನ್ನು ಕಂಡು ಬೇಸರಿಸಿಕೊಂಡು ಸುಮ್ಮನಾಗದ ಇವರ ಪತ್ನಿ ಪಟ್ಟಡ ನಮಿತಾ ಅಯ್ಯಪ‍್ಪ ಮೀನುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಚಿಂತನೆ ನಡೆಸಿದರು. ಈಗ ಬರೋಬರೀ 6 ಬಗೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಸ್ವತಃ ತಯಾರಿಸಿ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವನ್ನೂ ಮಾಡುತ್ತಿದ್ದಾರೆ.
ಇವರು ಮೀನಿನಿಂದ ಫಿಶ್ ಟಿಕ್ಕಾ, ಫಿಶ್ ಫಿಂಗರ್, ಫಿಶ್ ಕ್ರುಕೇಟ್ಸ್, ಫಿಶ್ ಫಿಲ್ಲೆಗಳನ್ನು ತಯಾರಿಸುತ್ತಿರುವುದು ಮಾತ್ರವಲ್ಲ, ಮೀನಿನ ಉಪ್ಪಿನಕಾಯಿ, ಸೀಗಡಿಯ ಉಪ್ಪಿನಕಾಯಿಯನ್ನೂ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಇವರು ತಮ್ಮದೇಯಾದ ‘ಜಸ್ಟ್ ಮೀನ್’ ಅಂಗಡಿಯನ್ನು ಸಿದ್ದಾಪುರದಲ್ಲಿ ತೆರೆದಿದ್ದಾರೆ. ಇಲ್ಲಿ ಇವರ ಮೀನಿನ ಎಲ್ಲ ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯವಿದೆ.
ಇವರ ಪತಿ ಇತರ ಮೂವರ ಜಂಟಿ ಸಹಿಭಾಗಿತ್ವದಲ್ಲಿ ಗುಹ್ಯದಲ್ಲಿ ‘ಆಕ್ವಾ ವೆಂಚಸ್’ ಎಂಬ ಮೀನು ಸಾಕಾಣಿಕಾ ಘಟಕ ತೆರೆದಿದ್ದಾರೆ. ಇಲ್ಲಿ ಮೀನು ಸಾಕಾಣಿಕೆಯಲ್ಲದೇ ಇತರರೂ ಮೀನುಗಾರಿಕೆ ಮಾಡಲು ಸಹಾಯಹಸ್ತ ಚಾಚಿರುವುದು ವಿಶೇಷ. ಮೀನು ಮರಿಗಳನ್ನು ರೈತರಿಗೆ ಮಾರಾಟ ಮಾಡಿ, ಮೀನು ಬೆಳೆದ ನಂತರ ವಾಪಸ್ ಅವರಿಂದ ಖರೀದಿ ಮಾಡುವ ಮೂಲಕ ಜಿಲ್ಲೆಯಲ್ಲಿ ಮೀನುಗಾರಿಕಾ ಕ್ಷೇತ್ರ ವಿಸ್ತರಣೆಗೂ ದುಡಿಯುತ್ತಿದ್ದಾರೆ.
ಇಲ್ಲಿಂದ ನಮಿತಾ ಅವರು ಮೀನುಗಳನ್ನು ಖರೀದಿ ಮಾಡಿ ತಮ್ಮದೇಯಾದ ‘ಜಸ್ಟ್ ಮೀನ್’ ಎಂಬ ಸಂಸ್ಕರಣಾ ಘಟಕದಲ್ಲಿ ಮೀನುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ, ತಮ್ಮ ಘಟಕದಲ್ಲಿ ನಾಲ್ವರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಇದಕ್ಕಾಗಿ ನಮಿತಾ ಅವರು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ಔಪಚಾರಿಕತೆ – ಪಿಎಂಎಫ್‌ಎಂಇ ಯೋಜನೆಯಿಂದ ನೆರವು ಪಡೆದಿದ್ದಾರೆ.
ಪಿಎಂಎಫ್‌ಎಂಇ’ ಯೋಜನೆಯ ಲಾಭ ಪಡೆಯಿರಿ’
ಪಟ್ಟಡ ನಮಿತಾ ಅಯ್ಯಪ್ಪ ಅವರು ತೆರೆದಿರುವ ‘ಜಸ್ಟ್ ಮೀನ್’ ಎಂಬ ಮೀನು ಸಂಸ್ಕರಣಾ ಘಟಕ ಕುರಿತು ‘ಪ್ರಜಾವಾಣಿ’ ಕೃಷಿ ಇಲಾಖೆಯ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಮೈತ್ರಿ ಅವರನ್ನು ಸಂಪರ್ಕಿಸಿದಾಗ ಅವರು ‘ಮೀನು ಸಂಸ್ಕರಣಾ ಘಟಕ’ ಜಿಲ್ಲೆಯಲ್ಲೆ ಅಪರೂಪ ಎನ್ನಬಹುದಾದ ಹಾಗೂ ಹೊಸ ಬಗೆಯ ಪರಿಕಲ್ಪನೆಯಡಿ ಸ್ಥಾಪನೆಯಾಗಿರುವ ಆಹಾರ ಸಂಸ್ಕರಣಾ ಕೇಂದ್ರ ಎನಿಸಿದೆ. ಇದರ ಸ್ಥಾಪನೆಗೆ ಪಿಎಂಎಫ್‌ಎಂಇ ಯೋಜನೆಯಿಂದ ನೆರವು ನೀಡಲಾಗಿದೆ ಎಂದು ಹೇಳಿದರು. ಈ ಬಗೆಯ ಅನೇಕ ಅವಕಾಶಗಳು ಪಿಎಂಎಫ್‌ಎಂಇ ಯೋಜನೆಯಲ್ಲಿದೆ. ಆಸಕ್ತರು ಇದರ ಲಾಭ ಪಡೆಯಬಹುದು. ಶೇ 50ರವರೆಗೂ ಸಹಾಯಧನ ಈ ಯೋಜನೆಯಡಿ ಫಲಾನುಭವಿಗಳಿಗೆ ಸಿಗುತ್ತದೆ. ಮಾಹಿತಿಗೆ ಮೊ: 9482371016 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.