ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಿ ನೋಡಿದರೆ ಅಬ್ಬಾ ಎನ್ನುವಂತಿದೆ...!

ಮರಿ ಜಲಪಾತದ ಉಗಮ, ನೋಡಿದಷ್ಟೂ ನೋಡಬೇಕೆನ್ನುವ ಜಲಧಾರೆ, ಭೋರ್ಗರೆಯುತ್ತಿದೆ ಅಬ್ಬಿ, ಬನ್ನಿ ಕಣ್ತುಂಬಿಕೊಳ್ಳಿ
Last Updated 26 ಜುಲೈ 2022, 5:57 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಅತಿ ರಮಣೀಯವಾದ ತಾಣಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ಅಬ್ಬಿ ಜಲಪಾತ. ಈಗ ಅದು ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮುಂಗಾರಿನ ‘ಅಬ್ಬಿ’ ನೋಡಿದ ಬಹುತೇಕ ಪ್ರವಾಸಿಗರು ‘ಅಬ್ಬಾ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಮಡಿಕೇರಿಯಿಂದ 10 ಕಿ.ಮೀ ದೂರದಲ್ಲಷ್ಟೇ ಇರುವ ಈ ತಾಣ ಪ್ರವಾಸಿಗರ ಪಾಲಿಗೆ ಸ್ವರ್ಗ. ಸುತ್ತಮುತ್ತಲೂ ದಟ್ಟವಾದ ಕಾಡಿನಂತಹ ಮರಗಳು ಹಾಗೂ ಕಾಫಿ ತೋಟದ ಮಧ್ಯೆ ಜೀರುಂಡೆಗಳ ಸಂಗೀತವನ್ನು ಕೇಳಿಸಿಕೊಳ್ಳುತ್ತ ಒಂದೊಂದೇ ಮೆಟ್ಟಿಲುಗಳನ್ನು ಇಳಿಯುತ್ತ ಸಾಗಿ, ಕೊನೆಯ ತಿರುವನ್ನು ದಾಟಿದರೆ ಒಮ್ಮಿಂದೊಮ್ಮೆಗೆ ಈ ಜಲಸೌಂದರ್ಯ ಎದುರಾಗುತ್ತದೆ.

ಬಹಳಷ್ಟು ಜಲಪಾತಗಳು ಮುಂಗಾರಿನಲ್ಲಿ ಮಾತ್ರ ಕಾಣಸಿಕ್ಕರೆ ಈ ಜಲಪಾತ ವರ್ಷದ ಎಲ್ಲ ದಿನಗಳಲ್ಲೂ ತುಂಬಿ ತುಳುಕುತ್ತದೆ. ಬೇಸಿಗೆಯಲ್ಲಿ ಕರಿಬಂಡೆಗಳ ನಡುವೆ ಕವಲೊಡೆದು ಬೆಳ್ನೊರೆಯಂತೆ ಜುಳುಜುಳನೇ ಬಳುಕುವ ಇದರ ಸೊಬಗು ಪುರಾಣದ ಮತ್ಸ್ಯಕನ್ಯೆಯ ಸೌಂದರ್ಯವನ್ನೂ ಮೀರಿಸುತ್ತದೆ.

ಅದೇ ಮುಂಗಾರು ಬಂತೆಂದರೆ ಸಾಕು ಜಲಪಾತದ ಚಿತ್ರಣವೇ ಬದಲಾಗುತ್ತದೆ. ಸಣ್ಣದಾಗಿ ಹರಿಯುತ್ತಿದ್ದ ಈ ಜಲಧಾರೆ ಒಮ್ಮಿಂದೊಮ್ಮೆಗೆ ಭೋರ್ಗರೆಯುತ್ತದೆ. ಸಣ್ಣಪುಟ್ಟ ಬಂಡೆಗಳ ಎಲ್ಲೆಗಳನ್ನೂ ಮೀರಿ ಅಬ್ಬರಿಸುತ್ತ ಸುಮಾರು 30ರಿಂದ 40 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಬೀಳುವ ರಭಸಕ್ಕೆ ನೀರು ತುಂತುರು ಹನಿಗಳಾಗಿ ಸಿಡಿಯುತ್ತ ಸೃಷ್ಟಿಸುವ ದೃಶ್ಯ ಕಾವ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಮುಂಗಾರು ಮಳೆಯಲ್ಲೇ ಇದನ್ನು ವೀಕ್ಷಿಸಬೇಕು.

ಎಚ್ಚರಿಕೆ ಅಗತ್ಯ

ಮಡಿಕೇರಿಯಿಂದ ಇಲ್ಲಿಗೆ ಯಾವುದೇ ಬಸ್‌ ಸೌಕರ್ಯ ಇಲ್ಲ. ಆಟೊದವರು ₹500 ಕೇಳುತ್ತಾರೆ. ವಾಹನ ಹೊಂದಿರದ ಪ್ರವಾಸಿಗರು ಇಷ್ಟು ಹಣವನ್ನು ಅನಿವಾರ್ಯವಾಗಿ ತೆರಬೇಕಿದೆ. ಖಾಸಗಿ ವಾಹನ ಹೊಂದಿದವರು ಅಬ್ಬಿ ಜಲಪಾತ ತಲುಪುವ ಕೊನೆಯ ತಿರುವಿನಲ್ಲಿ ಎಚ್ಚರಿಕೆಯಿಂದ ತಮ್ಮ ವಾಹನವನ್ನು ಚಾಲನೆ ಮಾಡಬೇಕಿದೆ. ಕಡಿದಾದ ಈ ತಿರುವಿನಲ್ಲಿ ಬಹಳಷ್ಟು ಬಾರಿ ಸಣ್ಣಪುಟ್ಟ ಅಪಘಾತಗಳೂ ಸಂಭವಿಸಿವೆ. ಪಕ್ಕದಲ್ಲೇ ಇರುವ ಆಳವಾದ ಪ್ರಪಾತಕ್ಕೆ ಯಾವುದೇ ತಡೆಗೋಡೆ ಇಲ್ಲ. ರಸ್ತೆಯ ಕೆಲವೆಡೆ ಕಿತ್ತು ಹೋಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಇನ್ನುಳಿದಂತೆ ರಸ್ತೆಯ ಬಹುಭಾಗ ಸುಸ್ಥಿತಿಯಲ್ಲಿದೆ.

ಕಾರು, ಜೀಪು ಮೊದಲಾದ ವಾಹನಗಳು ಜಲಪಾತದ ಬಾಗಿಲಿನವರೆಗೂ ಹೋಗಲು ಅವಕಾಶ ಕಲ್ಪಿಸಲಾಗಿದೆ. ಬಸ್‌ ಹಾಗೂ ಇತರೆ ಭಾರಿ ವಾಹನಗಳಿಗೆ ಸುಮಾರು ಅರ್ಧ ಕಿ.ಮೀ ದೂರದಲ್ಲೇ ನಿಲುಗಡೆ ಮಾಡಿ, ಕಾಲ್ನಡಿಗೆಯಲ್ಲಿ ಜಲಪಾತ ತಲುಪಬೇಕಿದೆ.

2018ರ ಮಹಾಮಳೆಯಲ್ಲಿ ಕೊಚ್ಚಿ ಹೋದ ತೂಗುಸೇತುವೆಯ ದುರಸ್ತಿ ಇನ್ನೂ ಆಗಿಲ್ಲ. ಈ ಸೇತುವೆಯ ದುರಸ್ತಿ ಯಾವಾಗ ಎಂದು ಪ್ರವಾಸಿಗರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT