ಅವಿಭಕ್ತ ಕುಟುಂಬದ ಕೈಹಿಡಿದ ಕೃಷಿ, ಇಳುವರಿ ಹೆಚ್ಚಳಕ್ಕೆ ವಿಭಿನ್ನ ಪ್ರಯೋಗ

6
ಅನ್ನದ ಬಟ್ಟಲು

ಅವಿಭಕ್ತ ಕುಟುಂಬದ ಕೈಹಿಡಿದ ಕೃಷಿ, ಇಳುವರಿ ಹೆಚ್ಚಳಕ್ಕೆ ವಿಭಿನ್ನ ಪ್ರಯೋಗ

Published:
Updated:
Deccan Herald

ಶನಿವಾರಸಂತೆ: ‘ಕೃಷಿಯಿಂದ ಬರುವ ಆದಾಯದಲ್ಲಿ ನಮ್ಮ ಅವಿಭಕ್ತ ಕುಟುಂಬದ ಜೀವನ ಸಾಗುತ್ತಿದೆ; ವ್ಯವಸ್ಥಿತ ರೀತಿಯಲ್ಲಿ ಕ್ರಮ ಬದ್ಧವಾಗಿ ದುಡಿದರೆ ಕೃಷಿಯಿಂದ ಉತ್ತಮ ಆದಾಯವನ್ನೂ ಗಳಿಸಬಹುದು. ಪದ್ಧತಿ ಬದಲಾದರೂ ಎಂದಿಗೂ ಕೃಷಿ ಬಿಡುವುದಿಲ್ಲ.’

– ಇದು ಪಟ್ಟಣದಿಂದ 5 ಕಿ.ಮೀ. ದೂರದ ಗಡಿಭಾಗ ಕಳಲೆ ಗ್ರಾಮದ ಅವಿಭಕ್ತ ಕುಟುಂಬವೊಂದರ ಹಿರಿಯ ಪುತ್ರ, ಪ್ರಗತಿ ಪರ ಕೃಷಿಕ ರಾಘವೇಂದ್ರ ಅವರ ಆತ್ಮವಿಶ್ವಾಸದ ಮಾತು. 

ಹವಾಮಾನ ವೈಪರೀತ್ಯ, ಬೆಲೆ ಕುಸಿತ, ರೋಗಬಾಧೆ, ಕೀಟನಾಶಕ ಹಾಗೂ ರಸಗೊಬ್ಬರದ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಅದೆಷ್ಟೋ ಕುಟುಂಬಗಳು ಕೃಷಿಯಿಂದ ವಿಮುಖರಾಗುತ್ತಿವೆ. ಆದರೆ, ಈ ಅವಿಭಕ್ತ ಕುಟುಂಬ ಮಾತ್ರ ಕೃಷಿಯಲ್ಲೇ ನೆಮ್ಮದಿಯ ಜೀವನ ಕಟ್ಟಿಕೊಂಡಿದೆ.

94 ವರ್ಷ ವಯಸ್ಸಿನ ತಾಯಿ ಕಾವೇರಮ್ಮ ದೊಡ್ಡೇಗೌಡ ಅವರ ಮಾರ್ಗದರ್ಶನದಲ್ಲಿ ಅವಿಭಕ್ತ ಕುಟುಂಬದ 18 ಮಂದಿಯ ಬದುಕು ಕೃಷಿಯಿಂದಲೇ ರೂಪಿತವಾಗಿದೆ. 10 ಕೂಲಿ ಕಾರ್ಮಿಕರೊಂದಿಗೆ ಕುಟುಂಬಸ್ಥರಾದ ರಾಘವೇಂದ್ರ, ಜಯಮ್ಮ, ಆನಂದ್, ಪಾರ್ವತಮ್ಮ, ಜಗದೀಶ್, ಬೋಜಮ್ಮ, ಗುರುರಾಜ್, ಚಂದ್ರಕಲಾ ಅವರು ಕೈಜೋಡಿಸುತ್ತಾರೆ. 8  ಮಂದಿ ಮೊಮ್ಮಕ್ಕಳಲ್ಲೂ ಕೃಷಿ ಬಗ್ಗೆ ಆಸಕ್ತಿ ಇದೆ. 

ಪಿತ್ರಾರ್ಜಿತವಾಗಿ ಬಂದ 18 ಎಕರೆ ಜಮೀನಿನೊಂದಿಗೆ 10 ಎಕರೆ ಸ್ವಯಾರ್ಜಿತ ಜಮೀನಿನಲ್ಲಿ ಮನೆ ಮಂದಿಯೆಲ್ಲ ಕೂಲಿ ಕಾರ್ಮಿಕರೊಂದಿಗೆ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಾಫಿ, ಏಲಕ್ಕಿ ತೋಟವಾಗಲೀ ಗದ್ದೆಯಾಗಲಿ ಪುರುಷರೊಂದಿಗೆ ಮಹಿಳೆಯರೂ ದುಡಿಮೆಯಲ್ಲಿ ಪಾಲ್ಗೊಳ್ಳುತ್ತಾರೆ. 

ತೋಟದಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ಹೆರಳೆಕಾಯಿ, ಲಿಂಬೆ, ಬಾಳೆ ಬೆಳೆದರೆ; ಗದ್ದೆಯಲ್ಲಿ ಇಂಟಾನ್, ರಾಜಮುಡಿ, ಚಿಪ್ಪುಗ ಭತ್ತವನ್ನು ಬೆಳೆಯುತ್ತಾರೆ. ಪ್ರತಿವರ್ಷ ಇಳುವರಿ ಹೆಚ್ಚಳಕ್ಕೆ ವಿಭಿನ್ನ ಪ್ರಯೋಗ ಮಾಡುತ್ತಾರೆ. ಕೃಷಿ ಇಲಾಖೆ ನೀಡುವ ಸಲಹೆ, ಸಹಕಾರ ಪಡೆದು ಆಯಾ ಅವಧಿಗೆ ಕೃಷಿಯ ಆರಂಭ, ಕಟಾವು ನಡೆಯುತ್ತಿದೆ.

ಪಶುಪಾಲನೆ ಜತೆಯಲ್ಲೇ ಕುರಿ, ಕೋಳಿ, ಹಂದಿ ಸಾಕಾಣಿಕೆಯೂ ನಡೆಯುತ್ತಿದ್ದು, ಉತ್ತಮ ಆದಾಯ ತರುತ್ತಿದೆ. 2016ರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಿತ್ತಳೆ ಬೆಳೆದ ಹೆಗ್ಗಳಿಕೆ ಈ ಕುಟುಂಬದ್ದು. ಕುಟುಂಬಕ್ಕೆ ಕೃಷಿಯಿಂದಲೇ ಬರುವ ವಾರ್ಷಿಕ ಆದಾಯ ₹ 25 ಲಕ್ಷ. ಖರ್ಚು, ವೆಚ್ಚ ಕಳೆದು ₹ 5 ಲಕ್ಷ ಉಳಿತಾಯವಾಗುತ್ತದೆ ಎಂದು ಹೇಳುತ್ತಾರೆ ಕುಟುಂದ ಹಿರಿಯರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !