ಮಡಿಕೇರಿ: ರಾಜ್ಯ ಸರ್ಕಾರ ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹೊರಡಿಸಿದ್ದು, ಜಿಲ್ಲೆಯ ಮಡಿಕೇರಿ ನಗರಸಭೆ, ಕುಶಾಲನಗರ ಪುರಸಭೆ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. 2 ಸಂಸ್ಥೆಗಳ ಉಪಾಧ್ಯಕ್ಷ ಸ್ಥಾನವೂ ಮಹಿಳೆಗೆ ಮೀಸಲಾಗಿದೆ. ಮಡಿಕೇರಿ ನಗರಸಭೆ ಮತ್ತು ಕುಶಾಲನಗರ ಪುರಸಭೆಯ ಉಪಾಧ್ಯಕ್ಷ ಸ್ಥಾನಗಳಲ್ಲಿ ಮಾತ್ರವೇ ಪುರುಷರು ಸ್ಪರ್ಧಿಸಬೇಕಿದೆ.
ಮಡಿಕೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಈ ಬಾರಿಯೂ ಮಹಿಳೆಗೆ ಒಲಿದು ಬಂದಿದೆ. ಪ್ರಸಕ್ತ ಅವಧಿಯ ಮೊದಲ ಅವಧಿಗೂ ಮಹಿಳೆಗೆ ಮೀಸಲು ಇತ್ತು. 2ನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.
2021ರಲ್ಲಿ ನಗರಸಭೆಯಲ್ಲಿ ಚುನಾವಣೆ ನಡೆದು ಮೊದಲ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿತ್ತು. ಬಹುಮತ ಪಡೆದಿದ್ದ ಬಿಜೆಪಿಯಲ್ಲಿ ಅನಿತಾ ಪೂವಯ್ಯ ಎಲ್ಲ ಆಕಾಂಕ್ಷಿಗಳನ್ನೂ ಹಿಂದಿಕ್ಕಿ ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದ ನಿರಾಶರಾಗಿದ್ದ ಪುರುಷರು 2ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದರು. ಆದರೆ, 2ನೇ ಅವಧಿಗೂ ಮಹಿಳೆಗೆ ಮೀಸಲಾತಿ ನೀಡಿರುವುದು ಪುರುಷ ಸದಸ್ಯರ ನಿರಾಸೆಗೆ ಕಾರಣವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸದಸ್ಯರೊಬ್ಬರು ತಿಳಿಸಿದರು.
ಅನಿತಾ ಪೂವಯ್ಯ ನೇತೃತ್ವದ ಮೊದಲ ಅವಧಿ ಏಪ್ರಿಲ್ ತಿಂಗಳಿಗೆ ಕೊನೆಗೊಂಡಿತ್ತು. ನಂತರ ಬರೋಬರಿ 3 ತಿಂಗಳ ಕಾಲ ಮೀಸಲಾತಿ ಪ್ರಕಟಿಸದೇ ಇದ್ದುದ್ದರಿಂದ ನಾವಿಕನಿಲ್ಲದ ನಗರಸಭೆಯಂತಾಗಿತ್ತು. ಸದ್ಯ, ಮೀಸಲಾತಿ ಪ್ರಕಟಗೊಂಡಿರುವುದರಿಂದ ಚುನಾವಣೆಗೆ ದಿನಗಣನೆ ಆರಂಭವಾದಂತಿದೆ.
2021ರ ಏಪ್ರಿಲ್‌ನಲ್ಲೆ ಮಡಿಕೇರಿ ನಗರಸಭೆಗೆ ಚುನಾವಣೆ ನಡೆದಿತ್ತಾದರೂ ಆಡಳಿತ ಮಂಡಳಿ ರಚನೆಯಾಗಿದ್ದು ಅಕ್ಟೋಬರ್‌ನಲ್ಲಿ. ಬರೋಬರಿ 6 ತಿಂಗಳ ಕಾಲ ಅಧ್ಯಕ್ಷರಿಲ್ಲದೇ ನಗರಸಭೆ ಕಾರ್ಯನಿರ್ವಹಿಸಿತ್ತು. 2ನೇ ಅವಧಿಯಲ್ಲೂ 3 ತಿಂಗಳು ತಡವಾಗಿ ಮೀಸಲಾತಿ ಪ್ರಕಟಗೊಂಡಿದೆ.
ಮಡಿಕೇರಿ ನಗರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಅವುಗಳಲ್ಲಿ ಬಿಜೆಪಿ 16 ಸ್ಥಾನ ಗಳಿಸಿ ಬಹುಮತ ಗಳಿಸಿದೆ. ಎಸ್‌ಡಿಪಿಐ 5 ಸ್ಥಾನ ಗಳಿಸಿ 2ನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನ ಗಳಿಸಿವೆ.
ಕುಶಾಲನಗರ ಪುರಸಭೆಯ ಅಧ್ಯಕ್ಷ ಸ್ಥಾನ ಈ ಬಾರಿ ಸಾಮಾನ್ಯ ಮಹಿಳೆಗೆ ಒಲಿದಿದೆ. ಕಳೆದ ಬಾರಿ ಪರಿಶಿಷ್ಟ ಜಾತಿ ಸಾಮಾನ್ಯಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನವೂ ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದೆ. ಈ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳೂ ಮಹಿಳೆಯರ ಪಾಲಾಗಿದೆ. ಕಳೆದ ಬಾರಿ ಪರಿಶಿಷ್ಟ ಜಾತಿ ಮೀಸಲಾಗಿತ್ತು.
ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವೂ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನವೂ ಸಾಮಾನ್ಯಮಹಿಳೆಗೆ ಮೀಸಲಾಗುವ ಮೂಲಕ ಇಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.