ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಆ.14ರಂದು ಮಡಿಕೇರಿಗೆ ಆಗಮಿಸುತ್ತಿರುವುದರಿಂದ ಗಾಂಧಿ ಸ್ಮಾರಕ ಉದ್ಯಾನ ಕಾಮಗಾರಿ ವೀಕ್ಷಣೆ ಮಾಡಿ, ಹೆಚ್ಚಿನ ಅನುದಾನ ಬಿಡುಗಡೆ ಸಂಬಂಧ ಮನವಿ ಮಾಡಲು ಇಲ್ಲಿ ಮಂಗಳವಾರ ನಡೆದ ಗಾಂಧಿ ಸ್ಮಾರಕ ಉದ್ಯಾನ ಅಭಿವೃದ್ಧಿ ಸಮಿತಿ ಸಭೆ ತೀರ್ಮಾನಿಸಿತು.
ಇದಕ್ಕೂ ಮುನ್ನ ಮಾತನಾಡಿದ ಸರ್ವೋದಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ನಗರದಲ್ಲಿ ನಡೆಯುತ್ತಿರುವ ಗಾಂಧಿ ಸ್ಮಾರಕ ಉದ್ಯಾನ ಕಾಮಗಾರಿ ಪರಿಪೂರ್ಣವಾಗಲು ಇನ್ನೂ ₹ 1 ಕೋಟಿಯ ಅಗತ್ಯವಿದ್ದು, ಇದಕ್ಕಾಗಿ ಪ್ರಸ್ತಾವ ತಯಾರಿಸಿ’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಲ್ಲಿ ಮನವಿ ಮಾಡಿದರು.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ₹ 5 ಲಕ್ಷ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಲಾ ₹ 5 ಲಕ್ಷ ನೀಡಲು ಒಪ್ಪಿಗೆ ನೀಡಿದ್ದಾರೆ. ಇನ್ನೂ ₹ 1 ಕೋಟಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮೂಲಕ ಮನವಿ ಮಾಡಲಾಗುವುದು. ಇದಕ್ಕಾಗಿ ಅಗತ್ಯ ಪ್ರಸ್ತಾವ ಸಲ್ಲಿಸಲು ಅವರು ಕೋರಿದರು.
ಮಾಹಿತಿ ನೀಡಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ‘ಗಾಂಧಿ ಸ್ಮಾರಕ ಉದ್ಯಾನ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದ್ಯ ₹ 60 ಲಕ್ಷ ವೆಚ್ಚಕ್ಕೆ ಕೇವಲ ತಾತ್ಕಾಲಿಕವಾಗಿ ಕಟ್ಟಡ ಕಾಮಗಾರಿಯನ್ನು ಮಾತ್ರವೇ ಪೂರ್ಣಗೊಳಿಸಬಹುದು’ ಎಂದು ತಿಳಿಸಿದರು.
ಗಾಂಧಿ ಸ್ಮಾರಕ ಉದ್ಯಾನ ಪೂರ್ಣ ಕಾಮಗಾರಿ, ಗ್ರಂಥಾಲಯ, ಉದ್ಯಾನ, ಬೆಳಕು ವ್ಯವಸ್ಥೆ, ಮತ್ತಿತರ ಕಾಮಗಾರಿಗೆ ಸುಮಾರು ₹ 1.98 ಕೋಟಿ ಅಂದಾಜು ಮಾಡಲಾಗಿದೆ ಎಂದರು.
ಪ್ರತಿಕ್ರಿಯಿಸಿದ ಟಿ.ಪಿ.ರಮೇಶ್, ‘ಸರ್ಕಾರ ರಾಜ್‍ಘಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ಉದ್ಯಾನ ನಿರ್ಮಾಣ ಮಾಡಬೇಕಿದೆ. ಕೇವಲ ಇಷ್ಟು ಮೊತ್ತದಲ್ಲಿ ಕಾಮಗಾರಿ ಅರ್ಧ ಮಾಡಿದರೆ ಅರ್ಥಪೂರ್ಣವಾಗುವುದಿಲ್ಲ. ಆದ್ದರಿಂದ ಪರಿಪೂರ್ಣ ಕಾಮಗಾರಿ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕು’ ಎಂದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನ ಆಕರ್ಷಣೀಯವಾಗಿ ನಿರ್ಮಾಣ ಮಾಡಬೇಕಿದೆ. ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಜೊತೆಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಲ್ಲಿಯೂ ಸಹ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು. 2ನೇ ಹಂತದಲ್ಲಿ ಹೆಚ್ಚುವರಿಯಾಗಿ ₹ 1 ಕೋಟಿ ಬಿಡುಗಡೆಗೆ ಪ್ರಯತ್ನಿಸಬೇಕು. ಸರ್ಕಾರದ ಹಂತದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆಯಬೇಕಿದೆ’ ಎಂದು ಅವರು ಹೇಳಿದರು.
ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸದಸ್ಯರಾದ ಮುನೀರ್ ಅಹ್ಮದ್, ಕೆ.ಟಿ.ಬೇಬಿ ಮ್ಯಾಥ್ಯೂ, ಕಾನೆಹಿತ್ಲು ಮೊಣ್ಣಪ್ಪ, ರೇವತಿ ರಮೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.