ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಸಾಂಸ್ಕೃತಿಕವಾಗಿ ಸಿರಿವಂತ

ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನದಲ್ಲಿ ಪ್ರೊ. ಎಚ್‌. ಗೋವಿಂದಯ್ಯ ಅಭಿಮತ
Last Updated 12 ಜೂನ್ 2018, 10:47 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಪ್ರದೇಶವಿದ್ದರೆ ಅದು ಚಾಮರಾಜನಗರ’ ಎಂದು ಹಿರಿಯ ಕವಿ ಪ್ರೊ. ಎಚ್‌. ಗೋವಿಂದಯ್ಯ ಸೋಮವಾರ ಇಲ್ಲಿ ಬಣ್ಣಿಸಿದರು.

ನವದೆಹಲಿಯ ಸಾಹಿತ್ಯ ಅಕಾಡೆಮಿ, ಪಟ್ಟಣದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮತ್ತು ಸೇವಾ ಭಾರತಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ‘ಸಾಹಿತ್ಯ ಲೋಕ ಕಾರ್ಯಕ್ರಮ –ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೆಲ್ಲರೂ ಸುಖದ ಬೆನ್ನೇರಿದ ನಾಗರಿಕತೆಯಲ್ಲಿದ್ದೇವೆ. ಸುಖ ಹುಡುಕುತ್ತಾ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದೇವೆ. ಆದರೆ, ಸುಖ ಮಾತ್ರ ಮರೀಚಿಕೆಯಾಗಿದೆ. ನಮ್ಮ ಜನಪದೀಯ ಮಹಾಕಾವ್ಯಗಳು ನೂರಾರು ವರ್ಷಗಳ ಹಿಂದೆಯೇ ಜೀವನದ ನೆಮ್ಮದಿ ಮತ್ತು ಸುಖದ ಬಗ್ಗೆ ಹೇಳಿದ್ದರೂ ನಾವು ಅತ್ತ ಕಡೆ ತಲೆ ಹಾಕುತ್ತಿಲ್ಲ. ನಾವು ಶಾಶ್ವತವಾಗಿ ಬಡವರಾಗಿದ್ದೇವೆ’ ಎಂದರು.‌

‘ಮಂಟೇಸ್ವಾಮಿ ಕಾವ್ಯ, ಮಹದೇಶ್ವರ ಕಾವ್ಯ ಮತ್ತು ಬಿಳಿರಂಗನ ಕಾವ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಪರಿಚಯವಾಗುತ್ತದೆ’ ಎಂದು ಹೇಳಿದರು.

‘1970ರ ದಶಕದಲ್ಲಿ ಮೊದಲ ಬಾರಿಗೆ ಪಿ.ಕೆ. ರಾಜಶೇಖರ್‌ ಅವರು ಮಹದೇಶ್ವರ ಕಾವ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದರು. ಆಗ ಇದಕ್ಕೆ ತುಂಬಾ ವಿರೋಧ ವ್ಯಕ್ತವಾಯಿತು. ಪುಸ್ತಕಗಳನ್ನು ಸಿಗದಂತೆ ಮಾಡಲಾಯಿತು. ತದ ನಂತರ ಉಳಿದ ಎರಡು ಕಾವ್ಯಗಳೂ ಬೆಳಕಿಗೆ ಬಂದವು. ಈಗ ಎಲ್ಲರೂ ಇದನ್ನು ಅಧ್ಯಯನ ನಡೆಸುತ್ತಿದ್ದಾರೆ’ ಎಂದರು.

ಹಾದಿ ತಪ್ಪಿದ ದಲಿತ ಚಳವಳಿ: ‘ನಾವು ದಲಿತ ಚಳವಳಿ ಆರಂಭಿಸುವಾಗ ಸಂಕಷ್ಟದಲ್ಲಿರುವ ಎಲ್ಲರಿಗೂ ಬೆನ್ನೆಲುಬಾಗಿ ನಿಲ್ಲುವ ಸಂಘಟನೆಯೊಂದನ್ನು ಹುಟ್ಟು ಹಾಕುವ ಆಶಯ ಹೊಂದಿದ್ದೆವು. ಆದರೆ, ಅದು ಬೇರೆ ಬೇರೆ ಜಾತಿಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬದಲಾಯಿತು. ಹಾಗಾಗಿ, ಇದರಿಂದ ಭ್ರಮನಿರಸನ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್‌ ರಾವ್‌ ಮಾತನಾಡಿ, ‘ಈಗಿನ ವಿದ್ಯಾರ್ಥಿಗಳಿಗೆ ಮಹಾಕಾವ್ಯಗಳನ್ನು ಓದುವ ಅಭ್ಯಾಸ ಇಲ್ಲ. ನಮ್ಮ ಬುಡಕಟ್ಟು ಪರಂಪರೆಗಳನ್ನು ತಿಳಿಯುವ ವ್ಯವಧಾನವೂ ಇಲ್ಲ ಎಂದರು. ಜನಪದ ಕಲಾವಿದ ಸಿ.ಎಂ. ನರಸಿಂಹ ಮೂರ್ತಿ ಜನಪದ ಹಾಡುಗಳ ಗಾಯನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮೂರು ಕಾವ್ಯಗಳ ಬಗ್ಗೆ ಉಪನ್ಯಾಸ

ಕೊಳ್ಳೇಗಾಲದ ಕನ್ನಡ ಉ‍ಪನ್ಯಾಸಕ ಶ್ರೀನಿವಾಸ್‌ ‘ಮಹದೇಶ್ವರ ಕಾವ್ಯ ಪರಿಚಯ’ ಮಾಡಿಕೊಟ್ಟರು.ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಎಂ.ಎಸ್‌. ಬಸವಣ್ಣ ‘ಮಂಟೇಸ್ವಾಮಿ ಕಾವ್ಯಗಳಲ್ಲಿ ಸಾಂಸ್ಕೃತಿಕ ಅನನ್ಯತೆ’ ಬಗ್ಗೆ ಮಾತನಾಡಿದರು.

ವೆಂಕಟಯ್ಯನಛತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್‌ ಹರವೆ ‘ಬಿಳಿಗಿರಿರಂಗನ ಕಾವ್ಯದಲ್ಲಿ ಬುಡಕಟ್ಟು ಪ್ರಜ್ಞೆ’ ಕುರಿತು ಉಪನ್ಯಾಸ ನೀಡಿದರು. 

ಮೈಸೂರು ವಿಶ್ವ ವಿದ್ಯಾಲಯದ ಸಂಶೋಧಕಿ ಡಾ. ಪಿ.ಎನ್‌.ಹೇಮಲತಾ ಅವರು ‘ಚೌಡಿಕೆ ಕಾವ್ಯಗಳಲ್ಲಿ ಸ್ತ್ರೀ ದರ್ಶನ’ ಬಗ್ಗೆ ಮಾತನಾಡಿದರು.

‘ಹಾದಿ ತಪ್ಪಿದ ದಲಿತ ಚಳವಳಿ’

‘ನಾವು ದಲಿತ ಚಳವಳಿ ಆರಂಭಿಸುವಾಗ ಸಂಕಷ್ಟದಲ್ಲಿರುವ ಎಲ್ಲರಿಗೂ ಬೆನ್ನೆಲುಬಾಗಿ ನಿಲ್ಲುವ ಸಂಘಟನೆಯೊಂದನ್ನು ಹುಟ್ಟು ಹಾಕುವ ಆಶಯ ಹೊಂದಿದ್ದೆವು. ಆದರೆ, ಅದು ಬೇರೆ ಬೇರೆ ಜಾತಿಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿ ಬದಲಾಯಿತು. ಹಾಗಾಗಿ, ಇದರಿಂದ ಭ್ರಮನಿರಸನ ಉಂಟಾಗಿದೆ’ ಎಂದು ಗೋವಿಂದಯ್ಯ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT