ಶುಕ್ರವಾರ, ನವೆಂಬರ್ 15, 2019
22 °C
ಬೆಂಗಳೂರು ಕೊಡಗು ಗೌಡ ಸಮಾಜದ ಸುವರ್ಣ ಮಹೋತ್ಸವ: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

ಭಾಷೆ, ಸಂಸ್ಕೃತಿ ಸದೃಢವಾಗಲಿ

Published:
Updated:
Prajavani

ಮಡಿಕೇರಿ: ಕೃಷಿಯನ್ನೇ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿರುವ ಗೌಡ ಸಮುದಾಯದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳನ್ನು ಸದೃಢಗೊಳಿಸಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಬೆಂಗಳೂರಿನ ಕೊಡಗು ಗೌಡ ಸಮಾಜದ ಸುವರ್ಣ ಮಹೋತ್ಸವ ಹಾಗೂ ಗೌಡ ಸಮಾಜದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ನೂರಾರು ಪಂಗಡಗಳು ಮಲೆನಾಡು, ಬಯಲು ಸೀಮೆ, ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಮುಖಂಡತ್ವವನ್ನು ವಹಿಸಿ ಗೌಡರೆಂದು ಖ್ಯಾತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು’ ಎಂದು ಕೋರಿದರು.

ಕೊಡಗಿನ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದವರು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದೊಂದಿಗೆ ಅನನ್ಯ ಭಾವನೆ ಹೊಂದಿದ್ದಾರೆ. ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ. ಕೊಡಗಿನ ಅರೆಭಾಷೆ ಗೌಡರು ಮಹಾ ಸಂಸ್ಥಾನವನ್ನು ಭಕ್ತಿ, ಪ್ರೀತಿಯಿಂದ ನೋಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ತಮ್ಮ ಮೂಲ ಬೇರುಗಳನ್ನು ನೆನೆಯುವ ಮೂಲಕ ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗು ಗೌಡ ಸಮಾಜ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ನಂತರ ಕೊಡಗಿನ ಗೌಡ ಜನಾಂಗ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ’ ಎಂದರು.

ಡಾಟಿ ಸದಾನಂದಗೌಡ ಮಾತನಾಡಿ, ‘ಅರೆಭಾಷೆ ಗೌಡ ಜನಾಂಗದ ಸಂಸ್ಕೃತಿ, ಸಂಪ್ರದಾಯ, ಭಾಷೆ, ಪರಂಪರೆಗಳನ್ನು ಉಳಿಸಿಕೊಳ್ಳುವುದಕ್ಕೆ ಯುವ ಜನಾಂಗ ಉತ್ಸುಕವಾಗಿರುವುದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜಗಡ್ಡಿ ಮಾತನಾಡಿ, ‘ಅರೆ ಭಾಷಿಕರ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸಲು ಅಕಾಡೆಮಿ ಬದ್ಧವಾಗಿದೆ. ಈಗಾಗಲೇ ಅರೆ ಭಾಷಿಕರ ಬಗ್ಗೆ ಪುಸ್ತಕಗಳು ಹೊರಬಂದಿವೆ. ಹಿರಿಯರ ಅನುಭವ ಮತ್ತು ಸಲಹೆಗಳನ್ನು ಪಡೆದು ಅರೆಭಾಷೆ ಅಕಾಡೆಮಿ ಉತ್ತಮ ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ’ ಎಂದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಗೌಡ ಜನಾಂಗದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)