ಮಂಗಳವಾರ, ಏಪ್ರಿಲ್ 7, 2020
19 °C
34 ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಚಿನ್ನಾಭರಣ ಖರೀದಿಸುತ್ತಿದ್ದ ಇಬ್ಬರ ಸೆರೆ

ಅಂತರ ಜಿಲ್ಲಾ ಕಳವು ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಹಲವು ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಂಡವೊಂದನ್ನು ಜಿಲ್ಲಾ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಹೋಬಳಿಯ ಕಣಗಲ್ ನಾಕಲಗೂಡು ಗ್ರಾಮದ ಕೆ.ಎನ್‌.ಸಣ್ಣಪ್ಪ, ಅವರೆದಾಳು ಗ್ರಾಮದ ಕುಶಾಲ್‌ ಹಾಗೂ ಸೋಮವಾರಪೇಟೆ ಕಾರ್ಪೊರೇಷನ್ ಬ್ಯಾಂಕ್‌ನ ಗುಮಾಸ್ತ ಎಂ.ಎಸ್‌.ಗಣೇಶ್‌ ಪ್ರಸಾದ್‌ ಬಂಧಿತ ಆರೋಪಿಗಳು.

ಬಂಧಿತರಿಂದ 61 ಗ್ರಾಂ ಚಿನ್ನಾಭರಣ (ಮೌಲ್ಯ ₹ 1.80 ಲಕ್ಷ), ₹ 27 ಸಾವಿರ ನಗದು, 135 ಗ್ರಾಂ ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ಮತ್ತು ಸ್ಕ್ರೂ ಡ್ರೈವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ಸಣ್ಣಪ್ಪ ಬೆಂಗಳೂರು, ಯಸಳೂರು, ಸಕಲೇಶಪುರ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಗಳಲ್ಲಿ 34 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸುಮನ್‌ ಮಾಹಿತಿ ನೀಡಿದರು.

ಈ ಹಿಂದೆ ಶನಿವಾರಸಂತೆ ಠಾಣೆಯ 9 ಕಳವು ಪ್ರಕರಣಗಳಲ್ಲಿ ಸಣ್ಣಪ್ಪಗೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ಶಿಕ್ಷೆ ಆಗಿತ್ತು. ಇನ್ನು ಹಲವು ಕಳವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಮೇಲೆ ಸುಮಾರು 13 ದಸ್ತಗಿರಿ ವಾರೆಂಟ್ ಕೂಡ ಜಾರಿಗೊಂಡಿದ್ದವು. ಸಣ್ಣಪ್ಪ ಕಳವು ಮಾಡಿದ ಚಿನ್ನಾಭರಣಗಳನ್ನು ಕುಶಾಲ್‌ ಹಾಗೂ ಗಣೇಶ್‌ ಪ್ರಸಾದ್‌ಗೆ ಮಾರಾಟ ಮಾಡುತ್ತಿದ್ದ ಎಂದು ಎಸ್‌ಪಿ ಮಾಹಿತಿ ನೀಡಿದರು.
ಸಾರ್ವಜನಿಕರ ನಡುವೆಯೇ ಓಡಾಡಿಕೊಂಡು ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡಿ ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದ. ಬೀಗದ ಕೀಯಿಟ್ಟ ಜಾಗವನ್ನು ಗುರುತಿಸಿಕೊಂಡು ಮನೆಗಳಲ್ಲಿ ಯಾರು ಇಲ್ಲದ ಸಮಯದಲ್ಲಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಎಂದು ಮಾಹಿತಿ ನೀಡಿದರು.

ತಂತ್ರಜ್ಞಾನ ಬಳಕೆ: ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸ್ ತಂಡ ಆರೋಪಿಯ ಚಲನವಲನಗಳನ್ನು ಗಮನಿಸಿ ಆತನನ್ನು ಸೋಮವಾರಪೇಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಹೇಳಿದರು.

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಎಚ್.ಎಂ.ಶೈಲೇಂದ್ರ, ಸೋಮವಾರಪೇಟೆ ಸಿಪಿಐ ನಂಜುಂಡೇಗೌಡ, ಕುಶಾಲನಗರ ಸಿಪಿಐ ಎಂ. ಮಹೇಶ, ಶನಿವಾರಸಂತೆ ಠಾಣೆಯ ಪಿಎಸ್‌ಐ ಕೃಷ್ಣನಾಯಕ್, ಸಿಬ್ಬಂದಿಗಳಾದ ಎಂ.ಎಸ್. ಬೋಪಣ್ಣ ಎಸ್.ಸಿ.ಲೋಕೇಶ್, ಬಿ.ಡಿ.ಮುರಳಿ, ವಿನಯ್ ಕುಮಾರ್, ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಂ.ಎ.ಗೋಪಾಲ್, ಬಿ.ಎಸ್.ದಯಾನಂದ, ಟಿ.ಎಸ್.ಸಜಿ, ಸಿಪಿಐ ಕಚೇರಿಯ ಸಿಬ್ಬಂದಿ ಅನಂತಕುಮಾರ್, ಮಂಜುನಾಥ್ ಮತ್ತು ಕುಮಾರಸ್ವಾಮಿ ಹಾಗೂ ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್, ಮಡಿಕೇರಿ ಸಿ.ಡಿ.ಆರ್. ಸೆಲ್‌ನ ಸಿಬ್ಬಂದಿ ರಾಜೇಶ್, ಗಿರೀಶ್ ಅವರು ಕಾರ್ಯಾಚರಣೆ ನಡೆಸಿ ಮನೆ ಕಳವು ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಆರೋಪಿಗೆ ಪೊಲೀಸ್‌ ಸಿಬ್ಬಂದಿಯೇ ಸಾಥ್‌? 

ಮಡಿಕೇರಿ: ಈ ಪ್ರಕರಣದ ಪ್ರಮುಖ ಆರೋಪಿ ಮೂರು ವರ್ಷದಿಂದ ಕಳವು ನಡೆಸುತ್ತಿದ್ದರೂ ಪೊಲೀಸರಿಗೆ ಸೆರೆ ಸಿಕ್ಕಿರಲಿಲ್ಲ. ಆರೋಪಿ ತಲೆಮರೆಸಿಕೊಳ್ಳಲು ಪೊಲೀಸ್‌ ಸಿಬ್ಬಂದಿ ಒಬ್ಬರು ನೆರವಾಗುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ.

‘ಆರೋಪಿಗೆ ಇಲಾಖೆಯಲ್ಲೇ ಕೆಲವರು ನೆರವು ನೀಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅದಕ್ಕಾಗಿಯೇ ಪ್ರಮುಖ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಅದು ನಿಜವಾದರೆ ಅಧಿಕಾರಿಯೇ ಆಗಿರಲಿ, ಸಿಬ್ಬಂದಿಯೇ ಇರಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದು ಸುಮನ್‌ ಡಿ. ಪನ್ನೇಕರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)