ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಮೇಲ್ಸೇತುವೆ ಕಾಮಗಾರಿಗೆ ಇನ್ನೆಷ್ಟು ದಿನ?

ಭಾಗಮಂಡಲ: 18 ತಿಂಗಳ ಕಾಮಗಾರಿ 43 ತಿಂಗಳು ಕಳೆದರೂ ಮುಗಿದಿಲ್ಲ
Last Updated 4 ಫೆಬ್ರುವರಿ 2023, 4:55 IST
ಅಕ್ಷರ ಗಾತ್ರ

ನಾಪೋಕ್ಲು: ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ಇನ್ನೆಷ್ಟು ದಿನ ಎಂದು ಸ್ಥಳೀಯರು ಕೇಳುತ್ತಿದ್ದಾರೆ. ಈ ಬಾರಿಯ ಮಳೆಗಾಲಕ್ಕಾದರೂ ಇದನ್ನು ಬಳಕೆಗೆ ಮುಕ್ತ ಮಾಡಿದರೆ ಜನರ ಸಂಕಷ್ಟ ತಪ್ಪಲಿದೆ.

‘ಮುಕ್ತಾಯದ ಹಂತದಲ್ಲಿದ್ದರೂ ಮಳೆಗಾಲಕ್ಕೆ ಸಾರ್ವಜನಿಕರ ಬಳಕೆಗೆ ಲಭಿಸುವುದು ಅನುಮಾನ ಎನಿಸಿದೆ. ಮೇಲ್ಸೇತುವೆಯ 3 ಭಾಗಗಳಲ್ಲಿ ಏರುವ ಮತ್ತು ಇಳಿಯುವ ಸ್ಥಳಗಳ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ಕನ್ನಿಕೆ ಮತ್ತು ಕಾವೇರಿ ನದಿಯ ಮೇಲ್ಭಾಗದಲ್ಲಿ ಅಡ್ಡಲಾಗಿ ಭೀಮ್‌ಗಳನ್ನು ಇರಿಸಲಾಗಿದ್ದು, 2
ಭಾಗಗಳಲ್ಲಿ ಕಾಂಕ್ರೀಟ್ ಹಾಕಲು ಬಾಕಿ ಉಳಿದಿದೆ. ಮೇಲ್ಸೇತುವೆಯಲ್ಲಿ ಡಾಂಬರೀಕರಣ ಹಾಗೂ ದೀಪದ ವ್ಯವಸ್ಥೆಗಳು ಆಗಬೇಕಿವೆ. ಕೆಲಸ ಕಾರ್ಯಗಳು ಇನ್ನೂ ಮಂದಗತಿಯಲ್ಲಿ ಸಾಗುತ್ತಿದ್ದು, ಈ ವರ್ಷದ ಮಳೆಗಾಲಕ್ಕೂ ಮೇಲ್ಸೇತುವೆ ಮರೀಚಿಕೆಯಾಗಲಿದೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಪ್ರತಿವರ್ಷ ಮಳೆಗಾಲದಲ್ಲಿ ಎರಡು– ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿವೆ. ಈ ಸಮಸ್ಯೆ ನೀಗಿಸಲು ₹ 26.86 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಹಸಿರು ನಿಶಾನೆ ನೀಡಲಾಯಿತು.

2018ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2019ರ ಜನವರಿಯಲ್ಲಿ ಜಿಲ್ಲೆಯ ಮೊದಲ ಮೇಲ್ಸೆತುವೆ ಕಾಮಗಾರಿ ಆರಂಭಗೊಂಡಿತು. ಕೋವಿಡ್‌ ಮತ್ತು ಮಳೆಗಾಲದಿಂದ ಕೆಲವು ತಿಂಗಳು ಕೆಲಸ ಕಾರ್ಯ ಸ್ಥಗಿತಗೊಂಡಿತ್ತು. 18 ತಿಂಗಳ ಕಾಮಗಾರಿ 43 ತಿಂಗಳ ಕಾಲ ಸಾಗಿದರೂ ಕಾಮಗಾರಿ ಮುಕ್ತಾಯಗೊಂಡಿಲ್ಲ. ಒಟ್ಟು ₹ 35.86 ಕೋಟಿ ಈ ಕಾಮಗಾರಿಗೆ ಬಳಕೆ ಆಗುತ್ತಿದ್ದು, ಮೇಲ್ಸೇತುವೆ ಕೆಳಭಾಗದ ಕಾಂಕ್ರೀಟೀಕರಣ ಬಾಕಿ ಉಳಿದಿದೆ. ‘ಮೇಲ್ಸೇತುವೆ ಡಾಂಬರೀಕರಣ ಹಾಗೂ ದೀಪದ ವ್ಯವಸ್ಥೆಗಳು ಏಪ್ರಿಲ್ ಅಂತ್ಯಕ್ಕೆ ಮುಕ್ತಾಯಗೊಳಲಿದೆ’ ಎಂದು ಕೆಲಸದ ಉಸ್ತುವಾರಿ ವಹಿಸಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಜತೆಗೆ, ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದರೆ ಕಾಮಗಾರಿ ವಿಳಂಬವಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಬಾರಿಯ ಮಳೆಗಾಲಕ್ಕೆ ಮುನ್ನ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಸುನಿಲ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT