ಕಾಫಿ ಬೆಳೆಗಾರರ ಸಾಲಮನ್ನಾಕ್ಕೆ ಆಗ್ರಹ

7
ಒಂದು ಗಂಟೆ ಅಮ್ಮತ್ತಿ ಬಂದ್, ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ

ಕಾಫಿ ಬೆಳೆಗಾರರ ಸಾಲಮನ್ನಾಕ್ಕೆ ಆಗ್ರಹ

Published:
Updated:
ಕಾಫಿ ಬೆಳೆಗಾರರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಅಮ್ಮತ್ತಿಯಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು

ವಿರಾಜಪೇಟೆ: ಕಾಫಿ, ಅಡಿಕೆ ಹಾಗೂ ಕರಿಮೆಣಸು ಬೆಳೆಗಾರರ ಸಾಲಮನ್ನಾ ಮಾಡಲು ಆಗ್ರಹಿಸಿ ಬುಧವಾರ ಅಮ್ಮತ್ತಿಯಲ್ಲಿ ಒಂದು ಗಂಟೆ ಬಂದ್‌ ನಡೆಸಲಾಯಿತು. ರೈತ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಮಾತನಾಡಿ, ‘ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ರೈತರ ಸಾಲಮನ್ನಾ ವಿಷಯದಲ್ಲಿ ತಾರತಮ್ಯ ಮಾಡಬಾರದು’ ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಕರಿಮೆಣಸು, ಕಾಫಿ, ಅಡಿಕೆ ಬೆಳೆಗಳ ಸಾಲ ಸೇರ್ಪಡೆಗೊಳ್ಳಬೇಕು ಎಂದು ಆಗ್ರಹಿಸಿದರು.

‘ಅಮ್ಮತ್ತಿಯಲ್ಲಿ ಸರಣಿ ಕಳವು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸ್ಪಂದಿಸುತ್ತಿಲ್ಲ. ಎರಡು ತಿಂಗಳ ಹಿಂದೆ ಬೆಳೆಗಾರರ ಮನೆಯಲ್ಲಿ ನಗದು, ಚಿನ್ನಾಭರಣ, ಜೀವ ರಕ್ಷಣೆಗಾಗಿ ಮನೆಯಲ್ಲಿಟ್ಟಿರುವಂತಹ ಕೋವಿಯನ್ನು ಕಳವು ಮಾಡಲಾಗಿದೆ. ಈ ತನಕ ಪೊಲೀಸರು ಕಳ್ಳರನ್ನು ಪತ್ತೆ ಮಾಡದೇ ನಿಷ್ಕ್ರಿಯರಾಗಿದ್ದಾರೆ’ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಕಾಡೇಮಾಡ ಮನು ಸೋಮಯ್ಯ ಮಾತನಾಡಿ, ‘ರಾಜ್ಯದ ವಿವಿಧ ರೈತ ಸಂಘಟನೆಗಳಿಂದ ರೈತರ ಸಾಲಮನ್ನಾಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟದಲ್ಲಿ ಸಕಲೇಶಪುರ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗಿನ ರೈತ ಸಂಘಟನೆಗಳು ಪ್ರಮುಖವಾಗಿ ಭಾಗವಹಿಸಲಿದ್ದು ರಾಜ್ಯ ಸರ್ಕಾರ ಸಾಲಮನ್ನಾ ಮಾಡುವ ತನಕ ಪ್ರತಿಭಟನೆ ನಡೆಯಲಿದೆ’ ಎಂದು ಎಚ್ಚರಿಸಿದರು.

‘ಕೊಡಗಿನಲ್ಲಿ ಹುಲಿಯಿಂದ ಗೋವುಗಳ ಬಲಿ ನಿರಂತರವಾಗಿದೆ. ಕಾಡಾನೆ ಮಾನವ ಸಂಘರ್ಷ ನಿರಂತರವಾಗಿದೆ. ಮಡಿಕೇರಿಯಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಯಿಂದ ಹಿಡುವಳಿದಾರರಿಗೆ ನ್ಯಾಯ ದೊರೆಯುತ್ತಿಲ್ಲ. ಈ ಅಧಿಕಾರಿ ನಿಷ್ಪ್ರಯೋಜಕರಾಗಿದ್ದಾರೆ. ಮೂರು ತಿಂಗಳ ಹಿಂದೆ ವಿರಾಜಪೇಟೆಯ ಪಾಲಂಗಾಲದಲ್ಲಿ ನಡೆದ ಕಾಡಾನೆಯ ಹತ್ಯೆಯ ಸಂಬಂಧದಲ್ಲಿ ಪೊಲೀಸರು ನಾಲ್ಕು ಮಂದಿ ಅಮಾಯಕ ಬೆಳೆಗಾರರ ಕೋವಿಗಳನ್ನು ವಶಪಡಿಸಿಕೊಂಡು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ’ ಎಂದು ದೂರಿದರು.

ಅಮ್ಮತ್ತಿ ನಾಡು ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ, ‘ಭತ್ತದ ಸಾಲಮನ್ನಾ ಮಾಡಿದಂತೆ ಕೊಡಗಿನ ಇತರ ಬೆಳೆಗಳ ಸಾಲಮನ್ನಾ ಮಾಡಬೇಕು’ ಎಂಬ ಒತ್ತಾಯಿಸಿ, ತಹಶೀಲ್ದಾರ್ ಆರ್. ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು.

ಕಾವಾಡಿಚಂಡ ಗಣಪತಿ, ಬಿ.ಸಿ. ಸುಬ್ಬಯ್ಯ, ಮಚ್ಚಾರಂಡ ಮಣಿ ಕಾರ್ಯಪ್ಪ, ವಿರಾಜಪೇಟೆ ತಾಲ್ಲೂಕು ಆರ್‌ಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಮಾಚಿಮಂಡ ಸುರೇಶ್ ಅಯ್ಯಪ್ಪ, ಕೇಚಂಡ ಕುಶಾಲಪ್ಪ, ಕೆ. ಪ್ರಶಾಂತ್, ಮದ್ರೀರ ಗಣೇಶ್, ಮಿಕ್ಕಿ ಹಾಜರಿದ್ದರು.

ಬೆಳಿಗ್ಗೆ 10.30ರಿಂದ 11.30ರ ತನಕ ಅಮ್ಮತ್ತಿ ಪಟ್ಟಣ ಬಂದ್ ಮಾಡಲಾಗಿತ್ತು. ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !