ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಬಿಜೆಪಿಯವರು ಬಿಪಿಎಲ್ ಕಾರ್ಡ್‌ದಾರರು’: ಎಚ್.ಎಂ.ರೇವಣ್ಣ ವ್ಯಂಗ್ಯ

ಐಟಿ ದಾಳಿ ರಾಜಕೀಯ ಪ್ರೇರಿತ
Last Updated 8 ಮೇ 2018, 5:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕರ್ನಾಟಕ ಚುನಾವಣೆಯಲ್ಲಿ ಗೆಲುವು ಸಿಗದೆಂಬ ಭಯದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆಸಿ ಹೆದರಿಸಿ, ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಇವತ್ತು ಕಾಂಗ್ರೆಸಿಗರಷ್ಟೇ ಶ್ರೀಮಂತರಿದ್ದಾರೆ. ಬಿಜೆಪಿಯವರು ಬಿಪಿಎಲ್ ಕಾರ್ಡ್‌ದಾರರು. ಆಸ್ತಿ ನೋಡಿದರೆ ಭಿಕ್ಷೆ ಬೇಡುವವರಷ್ಟಿವೆ. ಇವತ್ತು ಹಿಂದೆಂದೂ ನಡೆಯದೇ ಇರುವ ರೀತಿ ಮೋದಿ ಅವರು ಕೆಟ್ಟ ಸರ್ಕಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಆರ್‌ಎಸ್‌ಎಸ್‌ ಅನುಯಾಯಿ. ಅವರನ್ನು ಬಳಸಿಕೊಂಡು ಮೋದಿ, ಅಮಿತ್ ಶಾ ದಾಳಿ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ  ಈ ಹಿಂದಿನ ಯಾವ ಚುನಾವಣೆಗಳಲ್ಲಿ ಬಿಜೆಪಿ ಇಷ್ಟು ಕೆಟ್ಟ ಕೆಲಸ ಮಾಡಿರಲಿಲ್ಲ. ರಾಜ್ಯದ ಜನ ಪ್ರಜ್ಞಾವಂತರು, ಬುದ್ದಿವಂತರು. ಅವರು ವಿಚಾರ ಮಾಡುತ್ತಾರೆ. ಯೋಚನೆ ಮಾಡಿ ಬುದ್ಧಿ ಕಲಿಸುತ್ತಾರೆ’ ಎಂದು ಹೇಳಿದರು.

‘ವರ್ತೂರು ಪ್ರಕಾಶ್ ಕುರುಬ ಸಮುದಾಯದ ಸ್ವಯಂ ಘೋಷಿತ ನಾಯಕರಂತೆ ವರ್ತಿಸುವುದು ಬಿಡಲಿ. ಪ್ರಜಾಪ್ರಭುತ್ವದ ಅಡಿ ಚುನಾವಣೆ ಎದುರಿಸಲಿ. ಅದನ್ನು ಬಿಟ್ಟು ಮತ್ತೊಬ್ಬರಿಗೆ ಮತ ಹಾಕಬೇಡಿ ಎಂದು ಹೇಳುವ ಅಧಿಕಾರ ಅವರಿಗೆ ಇಲ್ಲ. ಅದೇ ಚಾಳಿ ಅವರು ಮುಂದುವರಿಸಿದರೆ ಜನರು ರಾಜ್ಯಲ್ಲಿ ಓಡಾಡಲು ಬಿಡುವುದಿಲ್ಲ’ ಎಂದರು.

ಖರ್ಚಿನ ದುಡ್ಡೂ ವಶ

ಬಾದಾಮಿ: ಕೃಷ್ಣಾ ಹೆರಿಟೇಜ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯದರ್ಶಿ ಪಾರಸಮಲ್ ಜೈನ್ ಪ್ರತಿಕ್ರಿಯಿಸಿದರು.

ಬಾದಾಮಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ಇಲಾಖೆ ಹೇಗೆ ದುರುಪಯೋಗವಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಅಧಿಕಾರಿಗಳ ತಪಾಸಣೆ ವೇಳೆ ನಾನು ರೆಸಾರ್ಟ್‌ನಲ್ಲಿಯೇ ಇದ್ದೆ. ನನ್ನ ಬಳಿ ಖರ್ಚಿಗೆ ಇಟ್ಟುಕೊಂಡಿದ್ದ ₹ 5.5ಲಕ್ಷ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT