ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಭಕ್ತಿಭಾವದ ಕೇಂದ್ರ ಬಸವೇಶ್ವರ ದೇಗುಲ

ಪೊನ್ನಂಪೇಟೆಯ ಮೂರು ಶತಕದ ಇತಿಹಾಸದ ದೇವಸ್ಥಾನ
Last Updated 12 ಫೆಬ್ರವರಿ 2023, 5:05 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರ ಪೊನ್ನಂಪೇಟೆ. 1821ರಲ್ಲಿ ದಿವಾನ್ ಚೆಪ್ಪುಡೀರ ಪೊನ್ನಪ್ಪ ಅವರಿಂದ ಸ್ಥಾಪನೆಗೊಂಡ ಇಲ್ಲಿಯ ಹೃದಯ ಭಾಗದಲ್ಲಿ 300ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಸ್ಥಾನವಿದೆ. ಇದು ಪೊನ್ನಂಪೇಟೆ ಪಟ್ಟಣದ ಹೆಗ್ಗುರುತು.

ಬಸ್ ನಿಲ್ದಾಣದಲ್ಲೇ ಇರುವ ಈ ದೇವಾಲಯ ಸಂಪೂರ್ಣವಾಗಿ ಬಯಲು ಸೀಮೆಯ ಕಲಾ ಮಾದರಿ ಯಲ್ಲಿದೆ. ಶಿವನ ವಾಹನ ಎಂದು ಹೇಳುವ ನಂದಿಯೇ ಇಲ್ಲಿನ ಪ್ರಧಾನ ದೇವರು. ಅರ್ಚಕರು ಕೂಡ ಲಿಂಗಾಯರು. ಬಯಲು ಸೀಮೆಯ ಇತರ ಹಳ್ಳಿಗಳಲ್ಲಿರು ವಂತೆ ಇಲ್ಲಿ ಕಲ್ಲಿನ ನಂದಿ ಇದ್ದಿತು ಎಂದು ಹೇಳಲಾಗುತ್ತದೆ. ಬಳಿಕ ಇದಕ್ಕೆ ಗುಡಿಕಟ್ಟಿ ದೇವಾಲಯದ ರೂಪ ತರಲಾಗಿದೆ ಎನ್ನುತ್ತಾರೆ ಪಟ್ಟಣದ ಹಿರಿಯರು.

ಕೇವಲ ನಂದಿ ಇದ್ದ ಈ ದೇವಸ್ಥಾನದಲ್ಲಿ 20 ವರ್ಷದ ಹಿಂದೆ ನವಗ್ರಹಗಳು ಹಾಗೂ ಗಣತಿ ವಿಗ್ರಹ ಗಳನ್ನು ಪ್ರತಿಷ್ಠಾಪಿಸಲಾಗಿದೆ. ಲಿಂಗಾಯತರು ಪೂಜಿಸುತ್ತಿದ್ದ ದೇವಾಲಯದಲ್ಲಿ ಈಗ ಬ್ರಾಹ್ಮಣ ಪುರೋಹಿತರ ಪ್ರವೇಶವಾಗಿದೆ. ಆದರೆ ನಂದಿ ವಿಗ್ರಹವನ್ನು ಲಿಂಗಾಯಿತರೇ ಪೂಜಿಸುತ್ತಿದ್ದಾರೆ. ಗಣಪತಿ ಮತ್ತು ನವಗ್ರಹಗಳನ್ನು ಬ್ರಾಹ್ಮಣ ಪುರೋಹಿತರು ಪೂಜಿಸುತ್ತಿದ್ದಾರೆ. ಹೀಗಾಗಿ ಒಂದೇ ದೇವಸ್ಥಾನದ ಕಟ್ಟಡದಲ್ಲಿ ವಿಭಿನ್ನ ದೇವರದ್ದು ಎರಡು ಸಮುದಾಯದ ಪೂಜಾರಿಗಳು ಪೂಜೆ ಸಲ್ಲಿಸುತ್ತಿದ್ದಾರೆ.

ದೇವಸ್ಥಾನ ಅಭಿವೃದ್ಧಿ ಸಮಿತಿ ಒಂದಿದ್ದು ಈ ಸಮಿತಿ ದೇವಸ್ಥಾನದ ಎಲ್ಲ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದೆ. ಪೊನ್ನಂಪೇಟೆ ಪಟ್ಟಣದಲ್ಲಿ ಯಾವುದೇ ಶುಭ ಕಾರ್ಯಗಳು ನಡೆದರೆ ಮೊದಲು ಈ ದೇವಸ್ಥಾನದ ಬಳಿಗೆ ಬಂದು ಪೂಜೆ ಸಲ್ಲಿಸಿದ ಬಳಿಕ ಕಾರ್ಯಗಳನ್ನು ಆರಂಭಿಸುವುದು ವಾಡಿಕೆ.

ಗಣಪತಿ ಉತ್ಸವ, ಹುತ್ತರಿ ಹಬ್ಬಗಳು ಇಲ್ಲಿ ವಿಜೃಂಭಣೆಯಿಂದ ಜರುಗುತ್ತವೆ. ಪೊನ್ನಂಪೇಟೆಯ ಬೇರೆ ಬೇರೆ ಬಡಾವಣೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುವ ಮುನ್ನ ಇಲ್ಲಿಗೆ ಬಂದು ಮಂಗಳಾರ್ಚನೆ ಮಾಡಿದ ಬಳಿಕ ಪ್ರತಿಷ್ಠಾಪನೆ ಮಾಡುತ್ತಾರೆ. ವಿಸರ್ಜನೆ ಸಂದರ್ಭದಲ್ಲಿಯೂ ಕೂಡಾ ಇದೇ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುವ ಪದ್ಧತಿ ಬೆಳೆದು ಬಂದಿದೆ.

ಹುತ್ತರಿ ಮೊದಲ ಪೂಜೆಯೂ ಇಲ್ಲೇ: ಹುತ್ತರಿ ಹಬ್ಬದಲ್ಲಿ ದೇವಸ್ಥಾನ ಸಮಿತಿಯವರು ಹಾಗೂ ಭಕ್ತರೆಲ್ಲ ಮಂಗಳ ವಾದ್ಯದೊಂದಿಗೆ ಗೌರಿ ಕೆರೆ ಬಳಿ ಇರುವ ದೇವಸ್ಥಾನದ ಭತ್ತದ ಗದ್ದೆಗೆ ತೆರಳಿ ಕದಿರು ತೆಗೆಯುತ್ತಾರೆ. ಬಳಿಕ ದೇವಸ್ಥಾನಕ್ಕೆ ಬಂದು ಕದಿರು ಪೂಜಿಸಿ ಆನಂತರ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಜನತೆ ಕದಿರು ಹಿಡಿದು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ.

ಪೂರ್ವ ದಿಕ್ಕಿಗೆ ಬಾಗಿಲು ತೆರೆದಿರುವ ದೇವಸ್ಥಾನದ ಸುತ್ತ ಮುಖ್ಯ ರಸ್ತೆ ಇದ್ದು ವಾಹನಗಳು ನಿರಂತರವಾಗಿ ಓಡಾಡುತ್ತವೆ. ಇದರ ಪಕ್ಕದಲ್ಲಿ ತೆರೆದ ಬಾವಿಯೂ ಇದೆ. ಇದರ ನೀರನ್ನು ಹಿಂದೆ ನಗರದ ಜನತೆ ಮತ್ತು ಹೋಟೆಲ್‌ನವರು ಕುಡಿಯುವುದಕ್ಕೆ ಬಳಸುತ್ತಿದ್ದರು. ಈಗ ಬಳಕೆ ಕಡಿಮೆಯಾಗಿದೆ.

ದೇವಸ್ಥಾನದ ಸುತ್ತ ಮುಖ್ಯ ರಸ್ತೆಯಿದ್ದು ಇದರ ಸುತ್ತ ವಾಹನಗಳು ಎಡೆಬಿಡದೆ ಓಡಾಡುತ್ತವೆ. ಅವು ಎಡ ಬಲಕ್ಕೆ ಚಲಿಸುವುದಕ್ಕೆ ಈ ದೇವಸ್ಥಾನವೇ ವೃತ್ತವಾಗಿದೆ. ಇದರ ಹಿಂಭಾಗದಲ್ಲಿ ಪೊನ್ನಂಪೇಟೆಯನ್ನು ನಿರ್ಮಿಸಿದ ದಿವಾನ್ ಚೆಪ್ಪುಡೀರ ಪೊನ್ನಪ್ಪನವರ ಸುಂದರ ಪ್ರತಿಮೆ ಸ್ಥಾಪಿಸಲಾಗಿದೆ.

ಜೀವಂತ ಬಸವನೇ ಇಲ್ಲ

‘ಹಿಂದೆ ಜಾನುವಾರು ಸಾಕುವವರು ಒಂದು ಗಂಡು ಕರುವನ್ನು ದೇವಸ್ಥಾನದ ಹೆಸರಿಗೆ ಬಸವ ಎಂದು ಹೆಸರಿಸಿ ಬಿಡುತ್ತಿದ್ದರು. ಅವು ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಿರುಗಾಡಿಕೊಂಡು ಹೊಟ್ಟೆ ತುಂಬಿಸಿಕೊಂಡ ಬಳಿಕ ದೇವಸ್ಥಾನದ ಸುತ್ತ ಮಲಗುತ್ತಿದ್ದವು. ಈಗ ಒಂದು ಬಸವನೂ ಇಲ್ಲ. ಈಗ ಜಾನುವಾರುಗಳನ್ನು ಸಾಕುವವರೇ ಇಲ್ಲವಾಗಿದ್ದಾರೆ’ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯ ಎಸ್.ಎಲ್. ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT