ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಜ್ವರದ ಭೀತಿ: ಕೋಳಿ ಮಾಂಸ, ಮೊಟ್ಟೆ ಸೇವನೆ ಸ್ಥಗಿತಗೊಳಿಸಿದ ಜನರು!

ಗಡಿಯಲ್ಲಿ ಕಟ್ಟೆಚ್ಚರ, ಮೂರು ಕಡೆ ತಪಾಸಣಾ ಕೇಂದ್ರ
Last Updated 17 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೇರಳದ ಕೊಯಿಕೋಡ್ಹಾಗೂ ರಾಜ್ಯದ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡಿದ್ದು, ಆ ಪ್ರದೇಶಕ್ಕೆ ಹೊಂದಿಕೊಂಡಿರುವ ‘ಕಾಫಿ ನಾಡು’ ಕೊಡಗಿನಲ್ಲೂ ಆತಂಕ ಮೂಡಿಸಿದೆ.

ಪಶು ಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ, ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು ಮೂರು ಕಡೆ ತಪಾಸಣೆ ಕೇಂದ್ರವನ್ನೂ ತೆರೆಯಲಾಗಿದೆ.

ಕೊರೊನಾ ತಲ್ಲಣದ ಜೊತೆಗೆ ಹಕ್ಕಿಜ್ವರದ ಭೀತಿಯೂ ಜಿಲ್ಲೆಯ ಜನರನ್ನು ಕಾಡುತ್ತಿದೆ. ತಪಾಸಣಾ ಕೇಂದ್ರಕ್ಕೆ, ಮಂಗಳವಾರ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಭೇಟಿ ನೀಡಿ ಪರಿಶೀಲಿಸಿದರು.

ಒಂದು ವಾರದ ಹಿಂದೆಯೇ ಕೇರಳದಿಂದ ಜೀವಂತ ಕೋಳಿ ಸಾಗಣೆ ಹಾಗೂ ಕೋಳಿ ಉತ್ಪನ್ನಗಳನ್ನು ಜಿಲ್ಲೆಗೆ ತರುವುದನ್ನು ನಿಷೇಧಿಸಲಾಗಿತ್ತು. ಈಗ ಮತ್ತಷ್ಟು ಬಿಗಿಯಾದ ಕ್ರಮ ಕೈಗೊಂಡಿದ್ದು, ಕರಿಕೆ, ಕುಟ್ಟ, ಮಾಕುಟ್ಟದಲ್ಲಿ ತಪಾಸಣೆ ಕೇಂದ್ರ ಆರಂಭಿಸಲಾಗಿದೆ.

ಅಲ್ಲಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಯಾವುದೇ ಕೋಳಿ ಉತ್ಪನ್ನಗಳನ್ನು ಜಿಲ್ಲೆಯ ಒಳಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಒಳಬರುವ ವಾಹನಗಳನ್ನು ತಪಾಸಣೆ ಮಾಡಿಯೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ತಪಾಸಣೆ ತಂಡ ಅಲ್ಲೇ ಮೊಕ್ಕಾಂ ಹೂಡಿದೆ.

ಜಿಲ್ಲೆಯ ಯಾವ ಭಾಗದಲ್ಲೂ ಹಕ್ಕಿಗಳು ಸಾಮೂಹಿಕವಾಗಿ ಸಾವನ್ನಪ್ಪಿದರೆ ಪಶು ವೈದ್ಯರಿಗೆ ಅಥವಾ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪಶುಸಂಗೋಪನಾ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳೂ, ಸಾಕಿದ ಕೋಳಿಗಳ ಸ್ಯಾಂಪಲ್‌ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢ ಪಟ್ಟಿಲ್ಲ. ಆದರೂ, ಜನರಲ್ಲಿ ಆತಂಕ ಮನೆ ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತದೆ. ಹೀಗಾಗಿ, ರೈತರು ಕೋಳಿ ಸಾಕಾಣಿಕೆ ಮಾಡುವುದು ಕಡಿಮೆ. ಕೆಲವು ರೈತರು ಮಾತ್ರ ಉಪ ಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಾರೆ.

ಆದರೆ, ಕೋಳಿ ಮಾಂಸದ ಬಳಕೆ ಜಿಲ್ಲೆಯಲ್ಲಿ ಹೆಚ್ಚಿದೆ. ಟೈಸನ್‌ ಹಾಗೂ ಬ್ರಾಯ್ಲರ್‌ ಕೋಳಿಯು ತಮಿಳುನಾಡು ಹಾಗೂ ಕೇರಳದಿಂದ ಜಿಲ್ಲೆಗೆ ಪೂರೈಕೆ ಆಗುತ್ತಿತ್ತು. ನಾಲ್ಕೈದು ದಿನದಿಂದ ಅದಕ್ಕೆ ಕಡಿವಾಣ ಬಿದ್ದಿದೆ.

ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಜಿಲ್ಲೆ ಕೊಡಗು. ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಗೆ ಬರುವ ಅತಿಥಿಗಳಿಗೆ ಕೊಡಗು ಶೈಲಿಯ ಕೋಳಿ ಮಾಂಸದ ಖಾದ್ಯಗಳನ್ನು ನೀಡಲಾಗುತ್ತಿತ್ತು. ಕೊರೊನಾ ಹಾಗೂ ಹಕ್ಕಿಜ್ವರದಿಂದ ಹೋಂ ಸ್ಟೆಗಳು ಬಂದ್‌ ಆಗಿವೆ. ಯಾವ ಖಾದ್ಯವೂ ಇಲ್ಲವಾಗಿದೆ.

ವ್ಯಾಪಾರವೂ ಡಲ್

ಇನ್ನು ಮಂಗಳವಾರ ಕೆಲವು ಕೋಳಿಮಾಂಸ ಅಂಗಡಿಗಳೂ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರು ಮಾತ್ರ ಇರಲಿಲ್ಲ. ಕೆಲವು ಕಡೆ ಕೋಳಿ ಮಾಂಸ ಮಾರಾಟ ಮಳಿಗೆ ಬಂದ್‌ ಮಾಡಲಾಗಿತ್ತು. ಮಾಲೀಕರು ಅಂಗಡಿ ಸ್ವಚ್ಛ ಮಾಡುವ ಕೆಲಸದಲ್ಲಿ ನಿರತರಾಗಿದ್ದರು.

ಮಾಂಸಾಹಾರ ತ್ಯಜಿಸಿದ ಜನರು

ಜಿಲ್ಲೆಯ ಹೆಚ್ಚಿನ ಜನರು ಮಾಂಸಾಹಾರವನ್ನೇ ಇಷ್ಟ ಪಡುತ್ತಾರೆ. ಮದುವೆ ಹಾಗೂ ಪ್ರಮುಖ ಕಾರ್ಯಕ್ರಮಗಳಲ್ಲಿ ಮಾಂಸಾಹಾರವೇ ಬೇಕು. ಅದರಲ್ಲೂ ಪಂದಿಕರಿ, ಕೋಳಿ ಕರಿ ಹಾಗೂ ಮಟನ್‌ ಕರಿ ಪ್ರಿಯರೇ ಹೆಚ್ಚು. ಈಗ ಮಾಂಸಾಹಾರವೇ ಬೇಡ ಎನ್ನುತ್ತಿದ್ದಾರೆ ಜನರು.

ಒಂದು ವಾರದಿಂದ ಮಾಂಸಾಹಾರಿ ಹೋಟೆಲ್‌ಗಳು ಬಿಕೋ ಎನ್ನುತ್ತಿವೆ. ಮಾಂಸಾಹಾರಿ ಹೋಟೆಲ್‌ಗಳಿಗೆ ಗ್ರಾಹಕರು ಹೋದರೂ ಯಾರೊಬ್ಬರು ಮಾಂಸಾಹಾರಿ ಖಾದ್ಯಗಳನ್ನು ಕೇಳುತ್ತಿಲ್ಲ ಎಂದು ಹೋಟೆಲ್‌ ಸಿಬ್ಬಂದಿ ಹೇಳುತ್ತಾರೆ.

ನಷ್ಟದ ಮೇಲೆ ನಷ್ಟ

ಕೊರೊನಾ ಸೋಂಕು ದೂರವಾದರೆ ಮತ್ತೆ ವ್ಯಾಪಾರ ಚೇತರಿಸಿಕೊಳ್ಳಲಿದೆ ಎಂದೇ ನಂಬಿದ್ದ ಹೋಟೆಲ್‌ ಮಾಲೀಕರಿಗೆ ಹಕ್ಕಿಜ್ವರ ಹೊಡೆತ ನೀಡುತ್ತಿದೆ. ‘ಪರಿಸ್ಥಿತಿ ಆದಷ್ಟು ಬೇಗ ಸುಧಾರಣೆಗೆ ಆಗಲಿ’ ಎಂದು ವ್ಯಾಪಾರಸ್ಥರು ಬೇಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT