ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರ: ಸಂಕೇತ್ ಪೂವಯ್ಯ

ಡಬಲ್ ಮೋಸ, ನಾಲ್ಕೂ ಚಕ್ರ ಪಂಚರ್ ಆಗಿರುವ ಸರ್ಕಾರ; ಸಂಕೇತ್ ಪೂವಯ್ಯ
Last Updated 18 ಮಾರ್ಚ್ 2023, 4:38 IST
ಅಕ್ಷರ ಗಾತ್ರ

ಮಡಿಕೇರಿ: ‘ಇದೊಂದು ಡಬಲ್‌ ಎಂಜಿನ್ ಸರ್ಕಾರವಲ್ಲ. ನಾಲ್ಕೂ ಚಕ್ರಗಳೂ ಪಂಚರ್ ಆಗಿರುವ ಸರ್ಕಾರ. ‘ಡಬಲ್ ಮೋಸ’ದ ಸರ್ಕಾರ. ಕೊಡಗಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಸಂಸತ್ತಿನವರೆಗೆ ಬಿಜೆಪಿಯವರೇ ಇದ್ದರೂ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ’ ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ದೂರಿದರು.

‘ಕಾಫಿ ಬೆಳೆಗಾರರ ಸಮಸ್ಯೆಗಳು ಜೀವಂತವಾಗಿವೆ. ಕಾಫಿಗೆ ಸಂಬಂಧಿಸಿ ದಂತೆ ಸೂಕ್ತವಾದ ಆಮದು ನೀತಿ ರೂಪಿಸಲು ಸರ್ಕಾರ ವಿಫಲವಾಗಿದೆ. ವನ್ಯಜೀವಿ– ಮಾನವ ಸಂಘರ್ಷ ತಡೆಯುವಲ್ಲಿ ವೈಜ್ಞಾನಿಕ ವಿಧಾನವನ್ನು ಜಾರಿಗೊಳಿಸಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಹುಲಿ ದಾಳಿಯಿಂದ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಬಳಿಕ ಸೌಜನ್ಯಕ್ಕಾದರೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಉಸ್ತುವಾರಿ ಸಚಿವರು ಮಾಡಲಿಲ್ಲ. ಸರ್ಕಾರ ಕೊಡಗಿಗೆ ಸಂಬಂಧಿಸಿದಂತೆ ಸ್ವಲ್ಪವೂ ಸ್ಪಂದನೆ ಇಲ್ಲದಂತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಕ್ತಾರ ಟಾಟು ಮಣ್ಣಪ್ಪ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ಪ್ರಣಾಳಿಕೆಯಲ್ಲಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿತು. ಬಿಜೆಪಿ ತಾನು ನೀಡಿದ್ದ ಭರವಸೆಯನ್ನು ಎಷ್ಟು ಈಡೇರಿಸಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ವಿದರ್ಭ ಪ್ಯಾಕೇಜ್ ಅಡಿ ಕಾಫಿ ಬೆಳೆಗಾರರ ಸಾಲವನ್ನು ಮನಮೋಹನ ಸಿಂಗ್ ಸರ್ಕಾರ ಮನ್ನಾ ಮಾಡಿತ್ತು. ಮಾತು ಕೊಟ್ಟಂತೆ ನಡೆಯುವ ಸರ್ಕಾರ ಕಾಂಗ್ರೆಸ್’ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಬಿ.ಇ.ಜಯೇಂದ್ರ ಮಾತನಾಡಿ, ‘ಗೋಣಿಕೊಪ್ಪಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಬಿಜೆಪಿ ಅವಮಾನ ಮಾಡಿದೆ. ಈ ಕುರಿತು ಕೇವಲ ಸ್ಪಷ್ಟೀಕರಣ ನೀಡಿದೆ. ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ‘ಮಡಿಕೇರಿಯಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿದ್ದಾರೆ. ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಅದು ಗೊತ್ತಾಗಿ ಈಗ ರಸ್ತೆಗೆ ತೇಪೆ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT