ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತನ ಕೊಲೆ: ಬಿಜೆಪಿ ‍ಪ್ರತಿಭಟನೆ, ಆರೋಪಿ ಎಂ. ನಂದ ನಾಣಯ್ಯ ಬಂಧನ

ಮರಗೋಡಿನಲ್ಲಿ ತಿಲಕ್‌ ರಾಜ್‌ ಅಂತ್ಯಕ್ರಿಯೆ
Last Updated 2 ಅಕ್ಟೋಬರ್ 2018, 11:38 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದ ಬಿಜೆಪಿ ಸ್ಥಾನೀಯ ಕಾರ್ಯದರ್ಶಿ ತಿಲಕ್ ರಾಜ್‌ ಕೊಲೆ ಪ್ರಕರಣವನ್ನು ಖಂಡಿಸಿ, ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಘಟನೆಯನ್ನು ಖಂಡಿಸಿ, ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಕೊಲೆ ಆರೋಪಿ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುಂಡೋಡಿ ನಂದ ನಾಣಯ್ಯನನ್ನು ಸೋಮವಾರ ರಾತ್ರಿಯೇ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಕೃತ್ಯ ನಡೆದು 6 ಗಂಟೆಯಲ್ಲೇ ಗ್ರಾಮಾಂತರ ‍ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ರಿವಾಲ್ವರ್‌, ಸಜೀವ ಗುಂಡುಗಳು, ಡಸ್ಟರ್‌ ಕಾರು ಹಾಗೂ ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ. ನಂದ ನಾಣಯ್ಯ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ.

ಮೃತ ಕಾನಡ್ಕ ತಿಲಕ್‌ ರಾಜ್‌ (35) ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆರೋಪಿ ನಂದ ವಿರುದ್ಧ ಸ್ಪರ್ಧಿಸಿ, ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತಿದ್ದ ನಂದ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ತಿಲಕ್‌ ರಾಜ್‌ ನಡುವೆ ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲೂ ಗಲಾಟೆ ನಡೆದು, ದ್ವೇಷಕ್ಕೆ ಕಾರಣವಾಗಿತ್ತು. ಸೋಮವಾರ ರಾತ್ರಿ ಗ್ರಾಮದಲ್ಲಿ ನಡೆದ ಶೂಟೌಟ್‌ನಲ್ಲಿ ತಿಲಕ್‌ ರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಘಟನೆಯನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲೂ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ 12ರ ಸುಮಾರಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪ್ರಕ್ರಿಯೆ ಮುಕ್ತಾಯಗೊಂಡಿತು. ಬಳಿಕ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಸ್ವಗಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರತಿಭಟನೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಪಕ್ಷದ ಕಾರ್ಯಕರ್ತನನ್ನು ಅಮಾನುಷವಾಗಿ ಗುಂಡಿನ ದಾಳಿ ನಡೆಸಿ, ಕೊಲೆ ನಡೆಸಿದ್ದನ್ನು ಖಂಡಿಸುತ್ತೇನೆ. ರಾಜಕೀಯ ದ್ವೇಷಕ್ಕೆ ಕೊಲೆ ಮಾಡಿದ್ದು ಇದೊಂದು ಹೇಯ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೂಂಡಾಗಳು ಹಾಗೂ ಇಸ್ಪೀಟ್‌ ದಂಧೆಕೋರರು ರಾಜಾರೋಷವಾಗಿ ಓಡಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಂದ ಕೂಡಲೇ ರಾಜೀನಾಮೆ ಪಡೆದುಕೊಳ್ಳಬೇಕು. ಅಲ್ಲದೇ ಸಂಪುಟದಲ್ಲಿ ಸಾಕಷ್ಟು ಮಂದಿ ಕೆಲಸವನ್ನೇ ಮಾಡುತ್ತಿಲ್ಲ. ಅವರಿಂದಲೂ ರಾಜೀನಾಮೆ ಪಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಒಬ್ಬ ತಿಲಕ್‌ ರಾಜ್‌ನನ್ನು ಕೊಲೆ ಮಾಡಿರಬಹುದು. ಅಂತಹ 100 ತಿಲಕ್ ರಾಜ್ ಜಿಲ್ಲೆಯಲ್ಲಿ ಹುಟ್ಟಿ ಬರಲಿದ್ದಾರೆ. ಕೊಲೆ ಮಾಡುವ ಪ್ರವೃತ್ತಿಯುಳ್ಳ ವ್ಯಕ್ತಿಗಳನ್ನು ಪೊಲೀಸರು ಮಟ್ಟಹಾಕಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್, ರವಿ ಕಾಳಪ್ಪ, ರವಿ ಕಾಳನ, ತಳ್ಳೂರ್‌ ಕಿಶೋರ್‌ ಕುಮಾರ್‌ ಹಾಜರಿದ್ದರು.

ಪೊಲೀಸ್ ಕಾರ್ಯಾಚರಣೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುಂದರ್‌ರಾಜ್‌, ಗ್ರಾಮಾಂತರ ಸಿಪಿಐ ಎಂ.ಎಂ. ಭರತ್‌, ಗ್ರಾಮಾಂತರ ಪಿಎಸ್‌ಐ ವಿ. ಚೇತನ್‌, ಎಎಸ್ಐ ರಾಜು, ಸಿಬ್ಬಂದಿ ಕಿರಣ್‌, ಇಬ್ರಾಹಿಂ, ಸತೀಶ್‌, ಹನೀಫ್‌, ಶಿವರಾಜೇಗೌಡ ಬಂಧನ ಕಾರ್ಯಾಚರಣೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT