ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ನಾಶವಾದರೆ ಸಮುದಾಯ ಅವನತಿ: ಸಾಹಿತಿ ಅಪ್ಪಣ್ಣ ಎಚ್ಚರಿಕೆ

ಕೃತಿಗಳ ಲೋಕಾರ್ಪಣೆ ಸಮಾರಂಭ
Last Updated 21 ಸೆಪ್ಟೆಂಬರ್ 2019, 13:41 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡವ ಮಕ್ಕಡ ಕೂಟ’ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ವಿವಿಧ ಲೇಖಕರು ಬರೆದ ಆರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

‘ಕರಗಿದ ಬದುಕು,‘ವಿಧಿರ ಕಳಿಲ್’, ‘ಪುಣ್ಯಮಂದಿರ್’,‘ಆರೋಗ್ಯ ಮತ್ತು ಸಾಮಾನ್ಯ ರೋಗಗಳಿಗೆ ಗೃಹ ಚಿಕಿತ್ಸೆಗಳು’, ‘ಮ್ಯೂಸಿಕಲ್ ಸ್ಟಾರ್ಸ್‍ ಆಫ್ ಕೂರ್ಗ್’ ಹಾಗೂ ‘ಪೊಂಜಂಗ್’ ಕೃತಿಗಳು ಲೋಕಾರ್ಪಣೆ ಮಾಡಿದರು.

ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿರುವ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ–ಬೆಳೆಸುವ ಕಾರ್ಯದಲ್ಲಿ ವಿವಿಧ ಸಂಘಟನೆಗಳು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ ಎಂದರು.

ಕೊಡವರು ಪ್ರಕೃತಿಯನ್ನು ಆರಾಧಿಸುವವರು. ತಂದೆ– ತಾಯಿಗಳನ್ನು ದೇವರು ಎಂದು ಕಾಣುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿದ್ದು, ಇದು ಜನಾಂಗದ ನಾಶಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಒಂದು ಊರನ್ನು ತಮ್ಮ ಕುಟುಂಬ ಎಂದು ಭಾವಿಸುತ್ತಿದ್ದರು. ಆದರೆ, ಇಂದು ಇಡೀ ವಿಶ್ವವೇ ನಮ್ಮ ಕುಟುಂಬವಾಗಿದೆ ಎಂದ ಅವರು, ಒಂದು ಜನಾಂಗವನ್ನು ಗುರುತಿಸಬೇಕಾದರೆ ಮೂಲ ಜನಾಂಗದಿಂದಲೇ ಸಾಧ್ಯ ಎಂದರು.

‘ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ಭಾಷೆ. ಇದನ್ನು ಹಿರಿಯರು ನಮಗೆ ಕೊಡಗೆಯಾಗಿ ನೀಡಿದ್ದಾರೆ. ಭಾಷೆ ಯಾವಾಗ ನಾಶವಾಗುತ್ತೋ ಅಂದೇ ಜನಾಂಗವೂ ನಾಶವಾಗುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಕೋರಿದರು.

ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು, ಸಾಹಿತ್ಯವನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಕೋರಿದರು.

ಮೂಕೊಂಡ ಪುಷ್ಪಾ ಪೂಣಚ್ಚ ಮಾತನಾಡಿ, ‘ಮಾನವ ಜೀವನಕ್ಕೆ ಆರೋಗ್ಯ ಬಹಳ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹಿಂದಿನ ಕಾಲದಿಂದಲೂ ಮನೆ ಮದ್ದಿಗೆ ಆದ್ಯತೆ ನೀಡಲಾಗುತ್ತಿತ್ತು. ಕೊಡಗಿನ ಜನ ಆರಾಧಿಸುವ ಪ್ರಕೃತಿಯಲ್ಲಿ ಆರೋಗ್ಯ ಕಾಪಾಡುವ ಗಿಡಮೂಲಿಕೆಗಳಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಮ್ಮ ಸಿನಿಮಾ ಜೀವನದ ಬಗ್ಗೆ ಅನುಭವ ಹಂಚಿಕೊಂಡರು.

ಮಾದೇಟಿರ ಪ್ರಮೀಳಾ ಜೀವನ್, ಅಪ್ಪಚಟ್ಟೋಳಂಡ ಪ್ರತಿಮಾ ಹಾಗೂ ಬೊಳ್ಳಜಿರ ಯಮುನಾ ಅಯ್ಯಪ್ಪ ಅವರ ಹಾಡುಗಾರಿಕೆ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT