ಮಡಿಕೇರಿ: ಜಿಲ್ಲೆಯ ಹಾಸ್ಟೆಲ್‌ವೊಂದರ 13 ವರ್ಷದ ಬಾಲಕನ ಮರ್ಮಾಂಗದಲ್ಲಿ ನೋವು ಕಾಣಿಸಿಕೊಂಡಿದ್ದು, ಆತನಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಹಪಾಠಿಗಳು ಮರ್ಮಾಂಗವನ್ನು ಹಿಡಿದು ಎಳೆದಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕವಿತಾ ಅವರನ್ನು ಸಂಪರ್ಕಿಸಿದಾಗ ಅವರು, ‘ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಆತ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ನಾನೂ ಆರೋಗ್ಯ ವಿಚಾರಿಸಿಕೊಂಡು ಬಂದೆ’ ಎಂದು ಮಾಹಿತಿ ನೀಡಿದರು.
‘ಬಾಲಕ ಕಳೆದ ಭಾನುವಾರ ಪ್ರಜಾಪ್ರಭುತ್ವ ದಿನಾಚರಣೆ ಮುಗಿಸಿ ಪೋಷಕರೊಂದಿಗೆ ಆರಾಮವಾಗಿ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹೊಸಬಟ್ಟೆ ತರಲೆಂದು ಪೋಷಕರು ಕರೆದುಕೊಂಡು ಹೋಗಿದ್ದಾರೆ. ಮನೆಗೆ ತೆರಳಿದ ನಂತರ ಆತನಿಗೆ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಂಡಿತೆಂದು ಮಂಗಳವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದಾಗ್ಯೂ ಘಟನೆ ಸಂಬಂಧ ವರದಿ ನೀಡುವಂತೆ ಸಂಬಂಧಪಟ್ಟ ಹಾಸ್ಟೆಲ್ ವಾರ್ಡನ್‌ಗೆ ಹಾಗೂ ಇಲಾಖೆಯ ತಾಲ್ಲೂಕು ಅಧಿಕಾರಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ‘ಬಾಲಕ ಸಹಪಾಠಿಯೊಬ್ಬ ಮರ್ಮಾಂಗವನ್ನು ಚಿವುಟಿದ ಎಂದು ಹೇಳಿಕೆ ನೀಡಿದ್ದು, ಸದ್ಯ, ಬಾಲಕ ಆರೋಗ್ಯವಾಗಿದ್ದಾನೆ’ ಎಂದರು. ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.