ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಮನವಿ

ಅಂಬೇಡ್ಕರ್ ನಿವಾಸ ಧ್ವಂಸಕ್ಕೆ ಖಂಡನೆ
Last Updated 10 ಜುಲೈ 2020, 11:42 IST
ಅಕ್ಷರ ಗಾತ್ರ

ಮಡಿಕೇರಿ: ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಮಹಾರಾಷ್ಟ್ರದ ಮುಂಬೈನ ದಾದರ್‌ನಲ್ಲಿರುವ ಅಂಬೇಡ್ಕರ್ ವಾಸವಿದ್ದ ರಾಜಗೃಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜನಪರವಾಗಿದ್ದ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಭೂಸುಧಾರಣೆ ಕಾಯ್ದೆಯಲ್ಲಿರುವ ರೈತರ, ಕೃಷಿ ಕಾರ್ಮಿಕರ ಮತ್ತು ಭೂರಹಿತ ಬಡಜನರ ಪರವಾದ ಆಶಯಗಳನ್ನೇ ನಾಶಮಾಡಲು ಮುಂದಾಗಿರುವುದು ಖಂಡನೀಯ ಎಂದರು.

1974ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಭೂಸುಧಾರಣೆ ಕಾಯ್ದೆಗೆ ಕೆಲವು ಮಹತ್ತರ ತಿದ್ದುಪಡಿಗಳನ್ನು ತಂದು ‘ಉಳುವವನೇ ಭೂ ಒಡೆಯ’ ಎಂದು ಘೋಷಿಸಿದ್ದರು. ಆದರೆ, ಈಗಿನ ಸರ್ಕಾರವು ತಿದ್ದುಪಡಿ ತರುತ್ತಿರುವ ಭೂಸುಧಾರಣೆ ಕಾಯ್ದೆಯಿಂದ ಜನಸಾಮಾನ್ಯರಿಗೆ ಮತ್ತು ಬಡವರಿಗೆ ಹಾಗೂ ಕೃಷಿಕರಿಗೆ ಅನ್ಯಾಯವಾಗಲಿದೆ. ಕೂಡಲೇ ಕಾಯ್ದೆಯ ತಿದ್ದುಪಡಿಯನ್ನು ಕೈ ಬಿಡುವಂತೆ ಒತ್ತಾಯಿಸಿದರು.

ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್, ಮಡಿಕೇರಿ ನಗರ ಸಂಚಾಲಕ ಟಿ.ಪಿ.ಸಿದ್ದೇಶ್ವರ, ವಿರಾಜಪೇಟೆ ತಾಲ್ಲೂಕು ಸಂಘಟನಾ ಸಂಚಾಲಕ ಎಚ್.ಎಂ.ಮಹದೇವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT