ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು| ಸ್ಮಶಾನಗಳಿವೆ, ಬೇಕಿದೆ ಮೂಲಸೌಕರ್ಯ

ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳಲ್ಲೂ ಸ್ಮಶಾನಕ್ಕೆ ಜಾಗ ಗುರುತಿಸಿದ ಜಿಲ್ಲಾಡಳಿತ
Last Updated 19 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಡಿಕೇರಿ: ಇಹಲೋಕದ ಯಾತ್ರೆ ಮುಗಿಸಿದ ಬಳಿಕ ದೇಹವನ್ನು ನೆಮ್ಮದಿಯಾಗಿ ಸಂಸ್ಕಾರ ಮಾಡುವುದಕ್ಕೆ ರಾಜ್ಯದ ಹಲವು ಜಿಲ್ಲೆಗಳ ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ. ಆದರೆ, ಕೊಡಗು ಜಿಲ್ಲೆಯಲ್ಲಿ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನಕ್ಕೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿದೆ. ಹಲವೆಡೆ ಬೇಲಿ ಹಾಕಿ ನಾಮಫಲಕವನ್ನೂ ನೆಟ್ಟಿದೆ. ಇನ್ನು ಎಲ್ಲ ಸ್ಮಶಾನಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸ ಆಗಬೇಕಿದೆ.

ಸ್ಮಶಾನಗಳಿಗೆ ಜಾಗ ಗುರುತಿಸುವಿಕೆಯ ಪ್ರಕ್ರಿಯೆಯು ಕಳೆದ 3 ತಿಂಗಳುಗಳಿಂದ ಜಿಲ್ಲೆಯಲ್ಲಿ ಚುರುಕು ಪಡೆದಿದೆ. ಇದೀಗ ಒಂದೆರಡು ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಯೂ ಸ್ಮಶಾನಕ್ಕೆ ಜಾಗ ಗುರುತಿಸಿ ಅದನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 99 ಗ್ರಾಮಗಳಿದ್ದು, 98 ಗ್ರಾಮಗಳು ಸ್ಮಶಾನ ಹೊಂದಿವೆ. 1 ಗ್ರಾಮದ ಸ್ಮಶಾನವನ್ನು ಮಾತ್ರ ಇನ್ನೂ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ.

ಪೊನ್ನಂಪೇಟೆ ತಾಲ್ಲೂಕಿನಲ್ಲಿ 65 ಗ್ರಾಮಗಳಿದ್ದು, 64 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿ 62 ಗ್ರಾಮಗಳಲ್ಲಿ ಹಸ್ತಾಂತರಿಸಲಾಗಿದೆ. ಪೊನ್ನಂಪೇಟೆ ಹೋಬಳಿಯ ನೊಖ್ಯ ಗ್ರಾಮದಲ್ಲಿರುವ ಸ್ಮಶಾನವು ಪಹಣಿಯಲ್ಲಿ ಮೀಸಲು ಅರಣ್ಯವಾಗಿ ನಮೂದಾಗಿದೆ. ಈ ಪ್ರದೇಶವನ್ನು ಹಸ್ತಾಂತರಿಸುವಂಕೆ ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ವಿರಾಜಪೇಟೆ ತಾಲ್ಲೂಕಿನಲ್ಲಿ ಎಲ್ಲ 59 ಗ್ರಾಮಗಳೂ ಸ್ಮಶಾನ ಹೊಂದಿವೆ. 6 ಗ್ರಾಮಗಳಲ್ಲಿ ಮಾತ್ರ ಗುರುತಿಸಲಾಗಿರುವ ಸ್ಮಶಾನದ ಭೂಮಿಯನ್ನು ಇನ್ನೂ ಹಸ್ತಾಂತರ ಮಾಡಿಲ್ಲ.

ಕುಶಾಲನಗರ ತಾಲ್ಲೂಕಿನಲ್ಲಿರುವ ಎಲ್ಲ 29 ಗ್ರಾಮಗಳೂ ಸ್ಮಶಾನಗಳನ್ನು ಹೊಂದಿವೆ. 2 ಗ್ರಾಮಗಳಲ್ಲಿ ಗುರುತಿಸಲಾಗಿರುವ ಸ್ಮಶಾನದ ಭೂಮಿ ಮಾತ್ರ ಇನ್ನೂ ಹಸ್ತಾಂತರವಾಗಿಲ್ಲ.

7 ಎಕರೆಯಷ್ಟು ವಿಶಾಲ ಸ್ಮಶಾನ

ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಳುಗಳಲೆ ಕಾಲೊನಿಯಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ 7 ಎಕರೆಯಷ್ಟು ವಿಸ್ತಾರವಾಗಿದ್ದು, ಜಿಲ್ಲೆ ಯಲ್ಲೇ ಅತಿ ವಿಸ್ತಾರವಾದ ಸ್ಮಶಾನ ಎನಿಸಿದೆ.

ಸಾರ್ವಜನಿಕ ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಶಿವಪ್ಪ ಹಾಗೂ ಸದಸ್ಯರು ಸ್ಮಶಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 2006ರಲ್ಲಿ ಮುಕ್ತಿಧಾಮದ ಹೆಸರಿನಲ್ಲಿ ನೋಂದಣಿಯಾಗಿದೆ. ಅಂದಿನ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 1.70 ಲಕ್ಷ ಮಂಜೂರಾಗಿತ್ತು. ಪೂಜಾಕಟ್ಟೆ, ಚಿತಾಗಾರ, ನೀರಿನ ವ್ಯವಸ್ಥೆ, ತಡೆಗೋಡೆ ನಿರ್ಮಾಣ, ಕಾವಲುಗಾರರಿಗೆ ಮನೆ ನಿರ್ಮಾಣ, ವಿದ್ಯುತ್ ದೀಪದ ಸೌಕರ್ಯ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ನಡೆದವು. ಸಂಸದರ, ಶಾಸಕರ, ವಿಧಾನ ಪರಿಷತ್ ಸದಸ್ಯರ ಅನುದಾನ ಮಂಜೂ ರಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಯವರಿಂದ ₹ 1.70 ಲಕ್ಷ ಮಂಜೂರಾಗಿ ಮೆದು ಕಬ್ಬಿಣದ ಚಿತಗಾರ ನಿರ್ಮಾಣವಾಗಿತ್ತು.

ಚಿತಾಗಾರದ ಬರ್ನಿಂಗ್ ಮಿಷನ್ ಕಳವಾಗಿ ಹೋಗಿದೆ. ಜಾಗದ ಒತ್ತುವರಿ ಸಮಸ್ಯೆಯಿಂದ ಸ್ಮಶಾನದ ಅಭಿವೃದ್ಧಿ ಕುಂಠಿತವಾಗಿತ್ತು. 2016ರಿಂದ ನೂತನ ಸಮಿತಿ ರಚನೆಯಾಗಿದ್ದು ರುದ್ರಭೂಮಿಯ ಅಭಿವೃದ್ಧಿಗಾಗಿ, ಕಾಯಕಲ್ಪಕ್ಕಾಗಿ ಶ್ರಮಿಸುತ್ತಿದೆ. ಮೆದು ಕಬ್ಬಿಣದ ಚಿತಾಗಾರ ಮತ್ತೆ ನಿರ್ಮಾಣವಾಗಿದೆ.

ನಿರ್ವಹಣೆ ಕೊರತೆ

ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಹಿಂದೂ ರುದ್ರಭೂ ಮಿಯು ಸೇವೆಗೆ ಉತ್ತಮ ವಾಗಿದ್ದರೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ.

ಶವ ಸುಡುವ ಯಂತ್ರವನ್ನು ಅಳವಡಿ ಸಲಾಗಿದೆ. ಆದರೆ, ಕಬ್ಬಿಣದ ಕೆಲವು ವಸ್ತುಗಳನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿದ್ದರು. ಕಾವಲುಗಾರರ ಕೊರತೆ ಇರುವುದನ್ನು ಬಿಟ್ಟರೆ ಉಳಿದಂತೆ ಶವ ಸುಡಲು, ಹೂಳಲು ಉಚಿತ ಅವಕಾಶ ನೀಡಲಾಗಿದೆ.

ವಿರಾಜಪೇಟೆಯ ಮೀನುಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಸಾರ್ವಜನಿಕರು ಪುರಸಭೆಗೆ ಮನವಿ ಸಲ್ಲಿಸಿದ್ದರು. ಆದರೆ, ಬಹುತೇಕ ಸಮಸ್ಯೆಗಳು ಇನ್ನೂ ಜೀವಂತವಾಗಿವೆ.

ಸುಸಜ್ಜಿತ ಸ್ಮಶಾನಗಳ ಕೊರತೆ

ಕುಶಾಲನಗರ: ತಾಲ್ಲೂಕು ವ್ಯಾಪ್ತಿಯ ಅನೇಕ ಗ್ರಾಮಗಳು ಸುಸಜ್ಜಿತ ಸ್ಮಶಾನಗಳಿಂದ ವಂಚಿತವಾಗಿವೆ. ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ವ್ಯವಸ್ಥಿತ ಹಿಂದೂ ರುದ್ರಭೂಮಿ ನಿರ್ಮಿಸಲಾಗಿದೆ. ಕೆಲವು ಗ್ರಾಮಗಳ ಜನರು ನದಿದಂಡೆಯನ್ನೇ ಶವಸಂಸ್ಕಾರಕ್ಕೆ ಅವಲಂಬಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ತಮ್ಮ ಜಮೀನುಗಳಲ್ಲಿಯೇ ಅಂತ್ಯಸಂಸ್ಕಾರ ಮಾಡಿಕೊಳ್ಳುತ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ಮಾದಾಪಟ್ಟಣ ಗ್ರಾಮಸ್ಥರು ಶವಸಂಸ್ಕಾರ ಮಾಡಲು ಜಾಗವಿಲ್ಲದೆ ರಸ್ತೆ ಮಧ್ಯೆ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದ್ದರು. ಇದೀಗ ಕಂದಾಯ ಇಲಾಖೆ ಸ್ಮಶಾನಕ್ಕೆ ಜಾಗ ಗುರುತಿಸಿದೆ. ಗುಡ್ಡೆಹೊಸೂರು ಗ್ರಾಮಸ್ಥರದ್ದು ಅನೇಕ ವರ್ಷಗಳ ಬೇಡಿಕೆ ಇತ್ತು. ಇದೀಗ ಸುಣ್ಣಕೆರೆ ಗ್ರಾಮದ ಪೈಸಾರಿ ಬಳಿ ಕಂದಾಯ ಇಲಾಖೆ ಜಾಗ ಗುರುತಿಸಿ ಬೇಲಿ ಹಾಕಿದೆ. ಹೆಬ್ಬಾಲೆ ಗ್ರಾಮದ ಬಣವಾರ ರಸ್ತೆಯಲ್ಲಿ ಸ್ಮಶಾನ ಯೋಗ್ಯವಲ್ಲದ ಬೆಟ್ಟಗುಡ್ಡದ ಜಾಗವನ್ನು ಗುರುತಿಸಿ ಪಂಚಾಯತಿ ವತಿಯಿಂದ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಹುತೇಕ ಎಲ್ಲೆಡೆ ಸ್ಮಶಾನ ಇದ್ದರೂ ಅದು ಚಿರಶಾಂತಿಧಾಮವಾಗುವಂತೆ ಮಾಡಲು ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಶ್ರಮಿಸಬೇಕಿದೆ. ತಮ್ಮ ಕುಟುಂಬದವರು ಚಿರನಿದ್ರೆಗೆ ಜಾರಿದ ಸ್ಥಳದಲ್ಲಿ ಬರುವ ಜನರಿಗೆ ಒಂದಿಷ್ಟು ನೆಮ್ಮದಿ ಮೂಡುವಂತಹ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಬೆಂಚು ಕಲ್ಲು, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಉತ್ತಮ ಉದ್ಯಾನ ಹೀಗೆ ತೀರಾ ಕನಿಷ್ಠ ಸೌಲಭ್ಯಗಳಷ್ಟೇ ಬೇಕಿವೆ. ಜನಪ್ರತಿನಿಧಿಗಳೂ ಇಂತಹ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.

ಮತಾಂತರ ಆದವರಿಗೆ ಸ್ಮಶಾನ ಇಲ್ಲ!

ಗೋಣಿಕೊಪ್ಪಲು: ಇಲ್ಲಿನ ಪೊನ್ನಂಪೇಟೆ ರಸ್ತೆಯಲ್ಲಿ 50 ವರ್ಷಗಳಿಂದ ಸಾರ್ವಜನಿಕ ರುದ್ರಭೂಮಿ ಇತ್ತು. ಇದನ್ನು ಈಗ ಹಿಂದೂ ರುದ್ರಭೂಮಿಯಾಗಿ ಹೆಸರು ಬದಲಾಯಿಸಲಾಗಿದೆ. ಇಲ್ಲಿ ಇತರ ಧರ್ಮಕ್ಕೆ ಮತಾಂತರದ ಹೊಂದಿದವರಿಗೆ ಅವಕಾಶವಿಲ್ಲ.

‘ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಪ್ರತ್ಯೇಕ ಸ್ಮಶಾನ ಇಲ್ಲ. ಅವರು ಗೋಣಿಕೊಪ್ಪಲಿನಿಂದ 50 ಕಿ.ಮೀ ದೂರದ ಮಡಿಕೇರಿಗೆ ಇಲ್ಲವೇ ಹುಣಸೂರಿಗೆ ಶವ ತೆಗೆದುಕೊಂಡು ಹೋಗಬೇಕಿದೆ. ಮತಾಂತರಗೊಂಡವರೆಲ್ಲ ಬಡವರೇ ಆಗಿರುವುದರಿಂದ ಅವರ ಶವ ಸಂಸ್ಕಾರದ ಸಂದರ್ಭದಲ್ಲಿ ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಇವರಿಗೆ ಸ್ಮಶಾನ ಜಾಗ ಕೊಡಿ ಎಂದು ಒತ್ತಾಯವಿದ್ದರು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಜಾಗದ ಕೊರತೆ ಮುಂದೊಡ್ಡಿ ಮೌನವಾಗಿದೆ’ ಎನ್ನುತ್ತಾರೆ ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಆರ್.ಪರಶುರಾಮ್.

ಪೊನ್ನಂಪೇಟೆಯಲ್ಲಿಯೂ ಎಲ್ಲ ಧರ್ಮ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ಇದೆ. ಆದರೆ, ಬಾಳೆಲೆ, ಕಾನೂರು, ತಿತಿಮತಿ, ಶ್ರೀಮಂಗಲ ಮೊದಲಾದ ಕಡೆ ಈ ಕೊರತೆ ಇದೆ. ಭೂಮಿ ಇರುವವರು ಅವರವರ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಬಡವರು ಹೊಳೆ ದಡ, ಕೆರೆ ದಡ, ರಸ್ತೆ ಬದಿಯಲ್ಲಿ ಹೂಳುತ್ತಾರೆ. ಗಾಂಧಿ ಬಂದಿದ್ದ ಕೈಕೇರಿಯ ದಲಿತರಿಗೆ ಸ್ಮಶಾನ ಇಲ್ಲ. ಕಾಫಿ ತೋಟದ ರಸ್ತೆ ಬದಿಯ ಜಾಗವೇ ಗತಿ. ಅವರು ಸ್ಮಶಾನಕ್ಕೆ ಜಾಗ ಕೊಡಿ ಎಂದು ಹಾತೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿ ಜಯ ಅಕ್ಕಮ್ಮ.

ಸೌಲಭ್ಯ ಕಲ್ಪಿಸಲು ಸೂಚನೆ

‘ಜಿಲ್ಲೆಯಲ್ಲಿ ಎರಡು ಹಳ್ಳಿಗಳನ್ನು ಬಿಟ್ಟರೆ ಉಳಿದೆಲ್ಲ ಕಡೆ ಸ್ಮಶಾನದ ಸೌಲಭ್ಯ ಕಲ್ಪಿಸಲಾಗಿದೆ. ಮೂಲಸೌಕರ್ಯ ಕಲ್ಪಿಸುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ತಿಳಿಸಿದರು.

ನಿರ್ವಹಣೆ: ಕೆ.ಎಸ್. ಗಿರೀಶ್

ಪೂರಕ ಮಾಹಿತಿ: ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ಜೆ.ಸೋಮಣ್ಣ, ಹೇಮಂತ್‌ಕುಮಾರ್, ಶ.ಗ.ನಯನತಾರಾ, ಎಂ.ಎಸ್.ಸುನೀಲ್, ಸಿ.ಎಸ್‌.ಸುರೇಶ್, ರೆಜಿತ್‌ಕುಮಾರ್ ಗುಹ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT