ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಪುಟಕ್ಕೆ ಖಾಸಗಿ ಬಸ್‌ ನಿಲ್ದಾಣ

ಗುಡ್ಡ ಕುಸಿತಕ್ಕೂ ಜಗ್ಗದ ಕಟ್ಟಡ, ತೆರವು ಕಾರ್ಯಾಚರಣೆ ಆರಂಭ
Last Updated 26 ಅಕ್ಟೋಬರ್ 2018, 13:22 IST
ಅಕ್ಷರ ಗಾತ್ರ

ಮಡಿಕೇರಿ: ಹಳೆಯ ಖಾಸಗಿ ಬಸ್‌ ನಿಲ್ದಾಣ ಅಂದ್ರೆ ಯಾರಿಗೆ ತಿಳಿದಿಲ್ಲ ಹೇಳಿ. ಬಹುತೇಕರು ವಿಳಾಸ ಹೇಳಲು ಈ ನಿಲ್ದಾಣವನ್ನೇ ಬಳಸಿಕೊಳ್ಳುತ್ತಿದ್ದರು. ಆದರೆ, ಸ್ಥಳ ಹಾಗೂ ಕಟ್ಟಡ ಇತಿಹಾಸದ ಪುಟ ಸೇರುತ್ತಿದೆ.

ಅಲ್ಲಿ ಯಾವಾಗಲೂ ಜನದಟ್ಟಣೆ, ವಾಹನಗಳ ಭರಾಟೆ. ಹಳ್ಳಿಗಳಿಗೆ ತೆರಳುವವರೂ ಅಲ್ಲಿಂದಲೇ ಬಸ್‌ ಏರಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ, ಅಲ್ಲೀಗ ಮೌನ.

ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳು ಮಾತ್ರ ಸದ್ದು ಮಾಡುತ್ತಿವೆ. ಅದಕ್ಕೆ ಕಾರಣ ಹಳೆ ಬಸ್‌ ನಿಲ್ದಾಣ ಕಟ್ಟಡ ಹಾಗೂ ಅದರ ಹಿಂದಿನ ಗುಡ್ಡವನ್ನು ಗುರುವಾರ ರಾತ್ರಿಯಿಂದ ತೆರವು ಮಾಡಲಾಗುತ್ತಿದೆ.

ಅದು ಆಗಸ್ಟ್‌. ಮಡಿಕೇರಿಯಲ್ಲಿ ವಿಪರೀತ ಮಳೆ. ಮಳೆಯ ರೌದ್ರನರ್ತನಕ್ಕೆ ಎಲ್ಲೆಂದರಲ್ಲಿ ಭೂಕುಸಿತ. ಅದೇ ತಿಂಗಳ 16ರಂದು ಬೆಳಿಗ್ಗೆ ಮಂಜಿನ ನಗರಿಯು ‘ಮಳೆ ನಗರಿ’ ಆಗಿ ಬದಲಾಗಿತ್ತು. ಹಳೆಯ ಬಸ್‌ ನಿಲ್ದಾಣದ ಹಿಂಬದಿಯ ಗುಡ್ಡ ಕುಸಿಯಲು ಆರಂಭಿಸಿತು. ಅಪಾಯ ಅರಿತು ಅಲ್ಲಿದ್ದವರು ಸ್ಥಳಾಂತರಗೊಂಡಿದ್ದರು. ಅದೃಷ್ಟವಶಾತ್‌ ಪ್ರಾಣಾಪಾಯ ಸಂಭವಿಸಿರಲಿಲ್ಲ. ಗುಡ್ಡದ ಮಣ್ಣು ಕಟ್ಟಡದ ಮೇಲೆ ಬಿದ್ದಿದ್ದರೂ ಕಟ್ಟಡ ಮಾತ್ರ ಜಗ್ಗಿರಲಿಲ್ಲ! ಹಳೆಯ ಕಟ್ಟಡ ಅಷ್ಟರಮಟ್ಟಿಗೆ ಗಟ್ಟಿಯಾಗಿದೆ. ಗುಡ್ಡದ ಮಣ್ಣು ಪದೇ ಪದೇ ಕುಸಿಯುತ್ತಿದ್ದು ಭವಿಷ್ಯದಲ್ಲಿ ಅಪಾಯ ಆಹ್ವಾನಿಸುತ್ತಿದ್ದು, ಅದೇ ಕಾರಣಕ್ಕೆ ತೆರವು ಮಾಡಲು ನಗರಸಭೆ ಆಡಳಿತ ಮುಂದಾಗಿದೆ.

ಕಟ್ಟಡದ ಮಳಿಗೆಯಲ್ಲಿ ಹಲವರು ಬಾಡಿಗೆಗಿದ್ದರು. ಬೇಕರಿ, ಮೊಬೈಲ್‌ ಶಾಪ್‌, ದಿನಪತ್ರಿಕೆ ವ್ಯಾಪಾರ, ಆಟಿಕೆ ಸಾಮಗ್ರಿಗಳ ವ್ಯಾಪಾರ, ಸಣ್ಣ ಹೋಟೆಲ್‌ ನಡೆಸುತ್ತಿದ್ದರು. ಹಲವು ಕುಟುಂಬಗಳಿಗೆ ಈ ಕಟ್ಟಡವು ಜೀವನಕ್ಕೆ ಆಧಾರವಾಗಿತ್ತು. ಆದರೆ, ಭೂಕುಸಿತವಾದ ಬಳಿಕ ಎಲ್ಲರೂ ಅಲ್ಲಿಂದ ಸ್ಥಳಾಂತರಗೊಂಡಿದ್ದರು. ಕೆಲವರು ಊರು ಸೇರಿದ್ದರೆ, ಮತ್ತೆ ಕೆಲವರು ಪರ್ಯಾಯ ಉದ್ಯೋಗ ಆರಂಭಿಸಿದ್ದರು.

ಹಳ್ಳಿಗರ ನೆನಪು: ಕೊಡಗಿನ ‘ಜೀವನಾಡಿ’ ಖಾಸಗಿ ಬಸ್‌ಗಳು. ಹತ್ತಾರು ವರ್ಷಗಳಿಂದ ಇದೇ ನಿಲ್ದಾಣದಿಂದ ಜಿಲ್ಲೆಯ ಮೂಲೆ ಮೂಲೆಗೆ ಬಸ್‌ಗಳು ತೆರಳುತ್ತಿದ್ದವು. ಭೂಕುಸಿತವಾದ ಬಳಿಕ ಅಪಾಯ ಅರಿತು ಬಸ್‌ಗಳೂ ಹೊಸ ಬಸ್‌ ನಿಲ್ದಾಣ ಸೇರಿದ್ದವು.

ಎರಡು ತಿಂಗಳು ವಿಳಂಬ: ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಡಿಕೇರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಟ್ಟಡ ತೆರವು ಮಾಡುವಂತೆ ಸೂಚಿಸಿದ್ದರು. ಆದರೆ, ಹಣಕಾಸಿನ ಕೊರತೆಯಿದೆ ಎಂಬ ಕಾರಣಕ್ಕೆ ನಗರಸಭೆ ಎರಡು ತಿಂಗಳಿಂದ ಕಟ್ಟಡ ತೆರವು ಮಾಡಿರಲಿಲ್ಲ. ದಸರಾ ವೇಳೆ ನಗರಕ್ಕೆ ಬಂದವರು ಗುಡ್ಡ ಕುಸಿದ ದೃಶ್ಯ ಕಂಡು ಭಯಭೀತರಾಗಿದ್ದರು. ಈಗ ಆ ಭಯಕ್ಕೆ ಮುಕ್ತಿ ನೀಡುವ ಕೆಲಸ ನಡೆಯುತ್ತಿದೆ.

ಕಾಂಪ್ಲೆಕ್ಸ್‌: ಈ ಪ್ರದೇಶವು ನಗರದ ಹೃದಯ ಭಾಗದಲ್ಲಿದ್ದು, ಸಾಕಷ್ಟು ಬೆಲೆಬಾಳುವ ಜಾಗವಿದು. ಈ ಪ್ರದೇಶದಲ್ಲಿ ನಗರಸಭೆಯು ವಾಣಿಜ್ಯ ಮಳಿಗೆ ನಿರ್ಮಿಸುವ ಯೋಜನೆ ರೂಪಿಸಿದೆ. ಆದರೆ, ನಗರಸಭೆಗೆ ಅನುದಾನದ ಕೊರತೆ ಎದುರಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಿಸಿ ಆದಾಯ ಗಳಿಸುವ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ.

ಸೌಲಭ್ಯ ಇಲ್ಲ: ಎರಡು ತಿಂಗಳಿಂದ ಖಾಸಗಿ ಬಸ್‌ಗಳು ರೇಸ್‌ ಕೋರ್ಸ್‌ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಹೊಸ ಬಸ್‌ ನಿಲ್ದಾಣದಿಂದ ಕಾರ್ಯಾಚರಿಸುತ್ತಿವೆ. ಆದರೆ, ಅಲ್ಲಿಗೆ ಸಾರ್ವಜನಿಕರು, ಪ್ರಯಾಣಿಕರು ತೆರಳುತ್ತಿಲ್ಲ. ಸೌಲಭ್ಯಗಳ ಕೊರತೆಯೇ ಅದಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT