ಸೋಮವಾರ, ನವೆಂಬರ್ 18, 2019
25 °C

ಕಾವೇರಿ ತೀರ್ಥೋದ್ಭವ ಸಂಭ್ರಮ: ಬ್ರಹ್ಮಕುಂಡಿಕೆಯಲ್ಲಿ ಉದ್ಭವಿಸಿದ ಕೊಡಗಿನ ಕುಲದೇವಿ

Published:
Updated:

ತಲಕಾವೇರಿ (ಮಡಿಕೇರಿ ತಾಲ್ಲೂಕು): ಅರ್ಚಕರ ಮಂತ್ರ ಘೋಷ, ಭಕ್ತರ ‘ಕಾವೇರಿ ಮಾತಾಕೀ ಜೈ...’ ಎಂಬ ಜಯಘೋಷ, ಬ್ರಹ್ಮಗಿರಿಯ ತಂಪಾದ ವಾತಾವರಣ… ಇದರ ನಡುವೆ ದಕ್ಷಿಣ ಗಂಗೆ, ಜೀವನದಿ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದಳು. 

ಕರ್ಕಾಟಕ ಲಗ್ನದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಉದ್ಭವಿಸಿದಳು. ಇದನ್ನು ಭಕ್ತರು ಕಣ್ತುಂಬಿಕೊಂಡರು. ವಿಸ್ಮಯಕ್ಕೆ ಅಪಾರ ಭಕ್ತ ಸಮೂಹ ಸಾಕ್ಷಿಯಾಯಿತು.

ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಪೂಜಾ ಕಾರ್ಯಗಳು ನಡೆದವು. ಮಹಾ ಆರತಿ ಜರುಗುತ್ತಿದ್ದಂತೆಯೇ ಪವಿತ್ರ ಕುಂಡಿಕೆಯಲ್ಲಿ 12.57ಕ್ಕೆ ತೀರ್ಥೋದ್ಭವವಾಯಿತು.

ಬಳಿಕ ಅರ್ಚಕರು, ನೆರೆದಿದ್ದ ಸದ್ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥ ಕೊಂಡೊಯ್ಯಲು ಬಂದಿದ್ದವರು ಚಳಿಯ ನಡುವೆಯೂ ಸ್ನಾನಕೊಳಕ್ಕೆ ಧುಮ್ಮಿಕ್ಕಿ ತೀರ್ಥ ಕೊಂಡೊಯ್ದರು. 

ಈ ವರ್ಷ ಕಾವೇರಿ ಜಾತ್ರೆ ರಾತ್ರಿ ನಡೆದ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆಯಿತ್ತು. ತಮಿಳುನಾಡು ಹಾಗೂ ಕೇರಳದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ.  ಸ್ನಾನಕೊಳ ಹಾಗೂ ತೀರ್ಥ ಕುಂಡಿಕೆಯ ಸುತ್ತಲೂ ನಿಂತ ಭಕ್ತರು ಕಾವೇರಿ ಉಕ್ಕುವ ದೃಶ್ಯವನ್ನು ವೀಕ್ಷಿಸಿದರು. ಮಳೆ, ಚಳಿಯನ್ನೂ ಲೆಕ್ಕಿಸದೇ ಭಕ್ತರು ನೆರೆದಿದ್ದರು. 

ಭಕ್ತರ ಘೋಷಣೆ:  ಕಾವೇರಿ ಕೊಡಗಿನ ಕುಲದೇವಿ. ಹೀಗಾಗಿ, ಆಕೆಯ ತೀರ್ಥೋದ್ಭವ ಸಂಭ್ರಮಕ್ಕೆ ಸ್ಥಳೀಯ ಭಕ್ತರೂ ಸೇರಿದಂತೆ ಹೊರಗಿನವರೂ ಸಾಕ್ಷಿಯಾದರು. ‘ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ...’, ‘ಜೈಜೈ ಮಾತಾ... ಕಾವೇರಿ ಮಾತಾ…’, ಎಂಬ ಉದ್ಘೋಷಗಳೂ ರಾತ್ರಿಯಿಡೀ ಮೊಳಗುತ್ತಲೇ ಇದ್ದವು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಸಂಜೆಯಿಂದಲೇ ಭಕ್ತಿಗೀತೆ ಗಾಯನ ನಡೆಯಿತು. ಸ್ನಾನಕೊಳದ ಬಳಿ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್‌ ಕೊಡ, ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ತೀರ್ಥ ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಆದರೂ, ಭಕ್ತರು ಪ್ಲಾಸ್ಟಿಕ್‌ ಕೊಡ ಹಾಗೂ ಪ್ಲಾಸ್ಟಿಕ್‌ ಬಾಟಲ್ ತಂದಿದ್ದರು. ಆ ಭಕ್ತರಿಗೆ ಸ್ಟೀಲ್‌ ಡ್ರಂನಲ್ಲಿ ತೀರ್ಥ ಇಡಲಾಗಿತ್ತು. ಅವರು ಅಲ್ಲಿಂದ ಕೊಂಡೊಯ್ದರು.

ಎಲ್‌ಇಡಿ ಸ್ಕೀನ್ ವ್ಯವಸ್ಥೆ:  ಬ್ರಹ್ಮಕುಂಡಿಕೆಯ ಬಳಿ ನಡೆಯುವ ಪೂಜಾ ಕಾರ್ಯಕ್ರಮಗಳನ್ನು ಎಲ್‌ಇಡಿ ಪರದೆಯ ಮೂಲಕ ನೇರ ಪ್ರಸಾರ ಮಾಡಲಾಯಿತು. ಭಕ್ತರು ಕುಳಿತ ಸ್ಥಳದಲ್ಲೇ ಧಾರ್ಮಿಕ ವಿಧಿವಿಧಾನ ವೀಕ್ಷಿಸಿದರು. ಚಿನ್ನಾಭರಣ ಹಾಗೂ ಪುಷ್ಪಾಲಂಕಾರದೊಂದಿಗೆ ಕಾವೇರಿ ಮಾತೆ ಕಂಗೊಳಿಸುತ್ತಿದ್ದಳು. ಕೊಡಗು ಏಕೀಕರಣ ರಂಗದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಒಂದು ತಿಂಗಳು ಕ್ಷೇತ್ರಕ್ಕೆ ಬರುವ ಭಕ್ತರು ಅನ್ನಸಂತರ್ಪಣೆ ನಡೆಯಲಿದೆ.

ವಿಸ್ಮಯ ಕಣ್ತುಂಬಿಕೊಂಡ ಸಚಿವರು: ತೀರ್ಥೋದ್ಭವಕ್ಕೆ ಸಾಕ್ಷಿಯಾಗಲು ಸಚಿವರಾದ ಆರ್‌. ಅಶೋಕ್‌, ವಿ.ಸೋಮಣ್ಣ ಬಂದಿದ್ದರು. ಬಿಬಿಎಂಪಿ ಮೇಯರ್ ಗೌತಮ್ ಜೈನ್, ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ವಿಸ್ಮಯ ಕಣ್ತುಂಬಿಕೊಂಡರು. 

‘ಇನ್ಮುಂದೆ ನಾಡಿನಲ್ಲಿ ಯಾವುದೇ ಅನಾಹುತ ನಡೆಯದೇ ಶಾಂತಿ ನೆಮ್ಮದಿ ನೆಲೆಸಲಿ. ಉತ್ತಮ ಮಳೆಯಾಗಿ ಜಲಾಶಯಗಳು ತುಂಬಲಿ’ ಎಂದು ಪ್ರಾರ್ಥಿಸಿರುವುದಾಗಿ ಗಣ್ಯರು ಹೇಳಿದರು. ಜಾತ್ರೆ ಹಿನ್ನೆಲೆಯಲ್ಲಿ ಭಾಗಮಂಡಲ ಪೊಲೀಸ್‌ ಠಾಣೆ ವ್ಯಾಪ್ತಿಯ 20 ಕಿ.ಮೀ ಸುತ್ತಮುತ್ತ ಶನಿವಾರದ ತನಕ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಕ್ಷೇತ್ರದಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಇದೇ ವೇಳೆ ತಲಕಾವೇರಿ ಅಭಿವೃದ್ಧಿಗೆ ಬಿಬಿಎಂಪಿಯಿಂದ ₹ 1 ಕೋಟಿ ಅನುದಾನದವನ್ನು ಮೇಯರ್ ಗೌತಮ್ ಘೋಷಣೆ ಮಾಡಿದರು.

ಪ್ರತಿಕ್ರಿಯಿಸಿ (+)