ಮಡಿಕೇರಿಯಲ್ಲಿ ಚಳಿ ತೀವ್ರ: ಪ್ರವಾಸಿಗರ ನವೋಲ್ಲಾಸ

7

ಮಡಿಕೇರಿಯಲ್ಲಿ ಚಳಿ ತೀವ್ರ: ಪ್ರವಾಸಿಗರ ನವೋಲ್ಲಾಸ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಚಳಿ ತೀವ್ರಗೊಂಡಿದ್ದು ಜನರು ತತ್ತರಿಸಿ ಹೋಗಿದ್ದಾರೆ.

ದಿಢೀರ್ ಉಷ್ಠಾಂಶ ಕುಸಿದಿದ್ದು ಹಗಲು ವೇಳೆಯೂ ಬೆಂಕಿಗೆ ಮೈಯೊಡ್ಡುವ ಪರಿಸ್ಥಿತಿಯಿದೆ. 

ಡಿ. 20ರಿಂದ 25ರ ತನಕ ಕಾಣಿಸಿಕೊಂಡಿದ್ದ ಚಳಿ ಮಾಯವಾಗಿತ್ತು. ಇದೀಗ ಚಳಿಯೇ ದರ್ಬಾರ್‌ ನಡೆಸುತ್ತಿದೆ.

ಸ್ವೆಟರ್, ಟೋಪಿ ಹಾಕಿದರೂ ಚಳಿ ಮಾಯವಾಗುತ್ತಿಲ್ಲ. ತಣ್ಣೀರು ಐಸ್‌ನಂತೆ ಭಾಸವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಚಳಿಯ ತೀವ್ರತೆ ಜಾಸ್ತಿಯಾಗಿದೆ. ಎಲ್ಲೆಡೆಯೂ ಥಂಡಿ... ಥಂಡಿ... ವಾತಾವರಣ. ತೀವ್ರ ಚಳಿಯಿಂದ ವಯಸ್ಕರು ಆತಂಕಕ್ಕೆ ಒಳಗಾಗಿದ್ದಾರೆ.

ಬುಧವಾರ ಕನಿಷ್ಠ ಉಷ್ಠಾಂಶ 11 ಡಿಗ್ರಿ ದಾಖಲಾಗಿತ್ತು. ಸಂಜೆಯ ವೇಳೆ ಅದು ಇನ್ನೂ ಕುಸಿದಿತ್ತು. ಜಿಲ್ಲೆಯ ಬಹುತೇಕರು ಚಳಿಗೆ ಹೆದರಿ ದ್ವಿಚಕ್ರ ವಾಹನ ಓಡಿಸುವುದನ್ನೇ ನಿಲ್ಲಿಸಿದ್ದಾರೆ. ಕೆಲವರು ಕೈಗೆ ಗ್ಲೌಸ್, ತಲೆಗೆ ಟೋಪಿ, ಸ್ವೆಟರ್‌, ಬೂಟ್‌ ಹಾಕಿಕೊಂಡೇ ಬೈಕ್‌ ಏರುತ್ತಿದ್ದಾರೆ. ಆದರೂ, ಚಳಿಯಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. 

ಕಾರ್ಮಿಕರು ಹೈರಾಣ: ಕಾಫಿ ತೋಟದ ಲೈನ್‌ಮನೆಗಳಲ್ಲಿರುವ ಕಾರ್ಮಿಕರು ಮಂಜು ಹಾಗೂ ಚಳಿಯ ವಾತಾವರಣಕ್ಕೆ ಹೈರಾಣಾಗಿದ್ದಾರೆ.

ಹೊಸ ವರ್ಷದ ಹೊಸ್ತಿಲಲ್ಲಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರು ಚಳಿಯ ನರ್ತನಕ್ಕೆ ಮೈಯೊಡ್ಡುತ್ತಿದ್ದಾರೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಪ್ರವಾಸದಲ್ಲಿರುವ ನವ ಜೋಡಿಗಳು ನವೋಲ್ಲಾಸದಲ್ಲಿ ತೇಲುತ್ತಿದ್ದಾರೆ. ಚಳಿ ತೀವ್ರವಾದಂತೆ ಕೊಡಗಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಪ್ರವಾಸಿಗರು ಸ್ವೆಟರ್‌, ಟೋಪಿ ಧರಿಸಿಕೊಂಡೇ ‘ಎಂಜಾಯ್‌’ ಮಾಡುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ರೆಸಾರ್ಟ್‌, ಹೋಂಸ್ಟೇ, ಹೋಟೆಲ್‌ ಹಾಗೂ ಲಾಡ್ಜ್‌ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ, ಎಲ್ಲೆಡೆಯೂ ಕ್ಯಾಂಪ್‌ ಫೈರ್‌ ದೃಶ್ಯವೇ ಕಣ್ಣಿಗೆ ಬೀಳುತ್ತಿದೆ. ಕ್ಯಾಂಪ್‌ ಫೈರ್‌ ಹಾಗೂ ಕೊಡಗಿನ ಪಂದಿ ಕರಿಗೆ ಬೇಡಿಕೆ ಬಂದಿದೆ.

ಚಳಿ ಹೆಚ್ಚಾದಂತೆಲ್ಲಾ ಮದ್ಯಕ್ಕೂ ಬೇಡಿಕೆಯಿದೆ. ಜಿಲ್ಲೆಯ ಮದ್ಯದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ. ಮದಿರೆಯ ನಶೆ ಇಲ್ಲದಿದ್ದರೆ ಚಳಿ ಕಳೆಯಲು ಸಾಧ್ಯವಿಲ್ಲದ ಸ್ಥಿತಿಯಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !