ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಸ್ವಾತಂತ್ರ್ಯೋತ್ಸವದ ಸಡಗರಕ್ಕೆ ರಂಗು ತುಂಬಿದ ಮಕ್ಕಳು

ಮಡಿಕೇರಿಯ ಕೋಟೆ ಆವರಣದಲ್ಲಿ ವಿವಿಧ ಶಾಲೆಗಳ ವೈವಿಧ್ಯಮಯವಾದ ನೃತ್ಯ ಪ್ರದರ್ಶನ
Published : 16 ಆಗಸ್ಟ್ 2024, 4:23 IST
Last Updated : 16 ಆಗಸ್ಟ್ 2024, 4:23 IST
ಫಾಲೋ ಮಾಡಿ
Comments

ಮಡಿಕೇರಿ: ಇಲ್ಲಿನ ಕೋಟೆ ಆವರಣದಲ್ಲಿ ಗುರುವಾರ ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುತ್ತಿದ್ದ ನೂರಾರು ಮಂದಿಯಲ್ಲಿ ರಾಷ್ಟ್ರಭಕ್ತಿ ಉಕ್ಕಿ ಹರಿಯುವಂತೆ ಮಾಡಿತು. ತದೇಕಚಿತ್ತದಿಂದ ಒಂದಿನಿತೂ ಕದಲದೇ ನಿಂತಿದ್ದ ಜನರು ತುಂತುರು ಮಳೆ ಶುರುವಾದರೂ ಜಗ್ಗದೇ ಮಕ್ಕಳ ದೇಶಪ್ರೇಮ ಕುರಿತ ಹಾಡು, ನೃತ್ಯಗಳನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮ ಮುಗಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ‌ಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಮಕ್ಕಳೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದು, ವಿಶೇಷ ಎನಿಸಿತ್ತು.

ಜಿಲ್ಲಾಡಳಿತದ ವತಿಯಿಂದ ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಜವಾಹರ ನವೋದಯ ಶಾಲೆಯ ವಿದ್ಯಾರ್ಥಿಗಳು, ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ, ಬಾಲಕರ ಬಾಲಮಂದಿರ, ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆ, ಬ್ಲಾಸಮ್ ಶಾಲೆ, ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆ, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಡಿದೆಬ್ಬಿಸುವಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಅದರಲ್ಲೂ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಪುಟ್ಟ ಬಾಲಕಿ ಎಸ್.ಆರ್ವಿ ಸೇರಿದಂತೆ ಇತರರು ಹಾಕುತ್ತಿದ್ದ ಲಾಗಾ, ರಿಂಗ್‌ನ್ನು ಹೊಟ್ಟೆಯ ಸುತ್ತ ಗಿರಗಿರನೇ ತಿರುಗಿಸುತ್ತಿದ್ದ ದೃಶ್ಯಗಳನ್ನು ಸಾರ್ವಜನಿಕರು ಕಣ್ಣೆವೆ ಬಡಿಯದೇ ನೋಡಿದರು.

ಮಕ್ಕಳ ಪ್ರತಿಭೆಯನ್ನು ವೀಕ್ಷಿಸಲೆಂದೋ ಏನೋ ಮಂಜು, ಬಿಸಿಲು, ತುಂತುರು ಮಳೆ ಒಂದರ ಹಿಂದೊಂದರಂತೆ ಸರತಿಯಂತೆ ಬಂದು ಹೋಗಿದ್ದು ವಿಶೇಷ ಎನಿಸಿತು.

ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಗ್ರರನ್ನು ಸೆದೆಬಡಿಯುವ ದೃಶ್ಯಗಳಲ್ಲಿ ಅಭಿನಯಿಸಿದರೆ, ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಒನಕೆ ಓಬವ್ವ ಸೇರಿದಂತೆ ರಾಷ್ಟ್ರನಾಯಕರನ್ನು ನೆನಪಿಗೆ ತರುವಲ್ಲಿ ಸಫಲರಾದರು. ಸಂತ ಜೋಸೆಫರ್ ಶಾಲೆಯ ವಿದ್ಯಾರ್ಥಿಗಳು ನಿರ್ಮಿಸಿದ ಮಾನವ ಗೋಪುರವು ಸೂಜಿಗಲ್ಲಿನಂತೆ ಸೆಳೆಯಿತು.

20 ತಂಡಗಳಿಂದ ಆಕರ್ಷಕ ಪಥ ಸಂಚಲನ

ಜಿಲ್ಲಾ ಸಶಸ್ತ್ರ ಪಡೆಯ ಇನ್‌ಸ್ಪೆಕ್ಟರ್ ಚೆನ್ನನಾಯಕ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಒಟ್ಟು 20 ತಂಡಗಳು ಭಾಗಿಯಾಗಿದ್ದವು.

ಡಿಎಆರ್, ಸಿವಿಲ್ ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಕೂಡಿಗೆಯ ಸೈನಿಕ ಶಾಲೆ, ಎಫ್‌ಎಂಕೆಎಂಸಿ ಕಾಲೇಜಿನ ಎನ್‌ಸಿಸಿ ತಂಡ, ಸಂತ ಜೋಸೆಫರ ಪಿಯು ಕಾಲೇಜಿನ ಎನ್‌ಸಿಸಿ ತಂಡ, ಕೊಡಗು ವಿದ್ಯಾಲಯದ ಎನ್‌ಸಿಸಿ ತಂಡ, ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯ ಎನ್‌ಸಿಸಿ ಮತ್ತು ಸೇವಾದಳದ ತಂಡ, ಜನರಲ್ ತಿಮ್ಮಯ್ಯ ಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ಪಿಎಂಶ್ರೀ ಜವಹರ ನವೋದಯ ವಿದ್ಯಾಲಯ, ರಾಜೇಶ್ವರಿ ಪ್ರೌಢಶಾಲೆಯ ಸ್ಕೌಟ್ಸ್ ತಂಡ, ಸಂತ ಮೈಕಲರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಸೇವಾದಳ, ಪಿಎಂಶ್ರೀ ಜಿಎಂಪಿ ಶಾಲೆಯ ಸೇವಾದಳ, ಸಂತ ಜೋಸೆಫರ ಆಂಗ್ಲ ಪ್ರಾಥಮಿಕ ಶಾಲೆಯ ಗೈಡ್ಸ್ ತಂಡ, ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲೆಯ ಗೈಡ್‌ ತಂಡ, ಕೇಂದ್ರೀಯ ವಿದ್ಯಾಲಯದ ಗೈಡ್ಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಎಂ.ಸಿದ್ದೇಶ್ ನೇತೃತ್ವದ ಪೊಲೀಸ್ ಬ್ಯಾಂಡ್ ತಂಡ ಪಥಸಂಚಲನಕ್ಕೆ ಮೆರುಗು ತುಂಬಿತು.

ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರೆ, ಶಾಸಕ ಡಾ.ಮಂತರ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಏರ್ ಮಾರ್ಷಲ್ (ನಿ) ಕೆ.ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಭಾಗವಹಿಸಿದ್ದರು.

ಮಡಿಕೇರಿಯ ಕೋಟೆ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್‌ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್‌ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು

20 ತಂಡಗಳಿಂದ ಆಕರ್ಷಕ ಪಥಸಂಚಲನ 7 ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೂರಾರು ಮಂದಿಯಿಂದ ಕಾರ್ಯಕ್ರಮ ವೀಕ್ಷಣೆ

ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿರ್ವಹಿಸಿದ ಜಿಲ್ಲಾಡಳಿತ; ಶ್ಲಾಘನೆ

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆಯ ಜೊತೆಗೆ ಅಧಿಕಾರಿಗಳ ಸಮರ್ಥ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದ್ದು ವಿಶೇಷ ಎನಿಸಿತು. ‘ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜೀವಹಾನಿಯಾಗದಂತೆ ಎಚ್ಚರ ವಹಿಸಿದ್ದಕ್ಕೆ ಜಿಲ್ಲಾಡಳಿತವನ್ನು ಶ್ಲಾಘಿಸಿದ ಅವರು ‘ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಲುವಾಗಿ ಪೊಲೀಸ್ ಇಲಾಖೆಯು 2024 ನೇ ಸಾಲಿನಲ್ಲಿ ಈವರೆಗೆ ಒಟ್ಟು 52 ಪ್ರಕರಣಗಳನ್ನು ದಾಖಲಿಸಿ 93 ಜನ ಆರೋಪಿಗಳನ್ನು ಬಂಧಿಸಿದೆ. 25 ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ’ ಎಂದು ಶ್ಲಾಘಿಸಿದರು. ಇದರೊಂದಿಗೆ ಸಂವಿಧಾನ ಜಾಗೃತಿ ಜಾಥಾದಲ್ಲಿ ಜಿಲ್ಲೆ 2ನೇ ಸ್ಥಾನ ಪಡೆದಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 3ನೇ ಸ್ಥಾನ ಹಾಗೂ ಗುಣಾತ್ಮಕ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿರುವುದಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದರೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಳೆಹಾನಿಗೆ ಪರಿಹಾರ ನೀಡಿರುವುದನ್ನು ಅಂಕಿಅಂಶಗಳ ಸಮೇತ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಜೊತೆಗೆ ಕೊಡಗಿನ ಸ್ವಾತಂತ್ರ್ಯ ಯೋಧರನ್ನು ಇದೇ ವೇಳೆ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT