ಮಡಿಕೇರಿ: ಇಲ್ಲಿಗ ಸಮೀಪದ ಚೇರಂಬಾಣೆಯಲ್ಲಿ ಶನಿವಾರ ಕೊಡವ ಸಾಂಸ್ಕೃತಿಕ ಕಲರವ ಕಂಡು ಬಂತು. ಒಂದೇ ವೇದಿಕೆಯಲ್ಲಿ ಬೊಳಕಾಟ್, ಕತ್ತಿಯಾಟ್, ಚೌರಿಯಾಟ್ ಸೇರಿದಂತೆ ವೈವಿಧ್ಯಮಯವಾದ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು. ನೂರಾರು ಮಂದಿ ಇದರಲ್ಲಿ ಭಾಗಿಯಾದರು.
ಈ ದೃಶ್ಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೇಂಗ್ ನಾಡು ಕೊಡವ ಸಮಾಜದ ಸಹಕಾರದಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಂಡ ಕವಿ ಅವರ 157ನೇ ಜನ್ಮದಿನದ ಪ್ರಯುಕ್ತ ಚೇರಂಬಾಣೆಯಲ್ಲಿ ಶನಿವಾರ ನಡೆದ ‘ಕೊಡವ ಸಾಹಿತ್ಯ ನಾಳ್’ ಕಾರ್ಯಕ್ರಮದಲ್ಲಿ ಕಂಡು ಬಂದವು.
ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಎ.ಎಸ್.ಪೊನ್ನಣ್ಣ, ‘ಕೊಡವ ಸಾಹಿತ್ಯದ ಬೆಳವಣಿಗೆಯಲ್ಲಿ ಇಂದಿನ ಮಕ್ಕಳು ಮನಸ್ಸು ಮಾಡಬೇಕಿದೆ. ಅಪ್ಪಚ್ಚ ಕವಿ ಅವರ ಆಶೋತ್ತರಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ’ ಎಂದು ತಿಳಿಸಿದರು.
‘ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಬೆಳವಣಿಗೆಯಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಶ್ರಮ ಮಹತ್ತರವಾಗಿದೆ’ ಎಂದು ಹೇಳಿದರು.
ಕೊಡವ ಭಾಷಿಕರೆಲ್ಲರೂ ಒಟ್ಟುಗೂಡಿದಾಗ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳು, ಸಾಹಿತ್ಯ ಉಳಿಸಿ ಬೆಳೆಸಲು ಸಾಧ್ಯ. ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿದರೆ ಮಾತ್ರ ಕೊಡವ ಭಾಷಿಕ ಜನಾಂಗ ಉಳಿಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ‘ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.
ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ.ಅಪ್ಪಣ್ಣ ಹಾಗೂ ಚೀರಮ್ಮನ ವಾಣಿ ಚಂಗುಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಬೆಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟಮಡ ಮಿಲನ್ ಮುತ್ತಣ್ಣ, ಚೇರಂಬಾಣೆ ಬೆಂಗ್ ನಾಡು ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಭಾಗವಹಿಸಿದ್ದರು.
ವ್ಯಾಲಿಡ್ಯೂ ತಂಡದವರಿಂದ ಬೊಳಕಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ರಾಜರಾಜೇಶ್ವರಿ ಶಾಲಾ ಮಕ್ಕಳಿಂದ ಕೋಲಾಟ್ ಪ್ರದರ್ಶನವು ಕಾರ್ಯಕ್ರಮಕ್ಕೆ ಮೆರುಗು ತುಂಬಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಚೇರಂಬಾಣೆ ಪಟ್ಟಣದ ಮುಖ್ಯರಸ್ತೆಯಿಂದ ಕೊಡವ ಸಮಾಜದ ಸಭಾಂಗಣದವರೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಮೆರವಣಿಗೆಯಲ್ಲಿ ಬೆಂಗ್ ನಾಡಿನ ಕೊಡವ ಭಾಷಿಕ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.