ಗುರುವಾರ , ಆಗಸ್ಟ್ 11, 2022
24 °C
ರಾಜಕೀಯ ಮುಖಂಡರ ಜೊತೆಗಿನ ಭಾವಚಿತ್ರ, ಕಿರುಹೊತ್ತಿಗೆ ಮುದ್ರಿಸಿ ಪ್ರಚಾರ

ಕೊಡಗು: ನೀತಿ ಸಂಹಿತೆ ಉಲ್ಲಂಘನೆ; ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.

ರಾಜಕೀಯ ಮುಖಂಡರ ಜೊತೆಗಿನ ಭಾವಚಿತ್ರ ಮತ್ತು ಕಿರುಹೊತ್ತಿಗೆ ಮುದ್ರಿಸಿ ಅದರಲ್ಲಿ ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಉಲ್ಲೇಖಿಸಿ ಪ್ರಚಾರ ಕೈಗೊಂಡ ಆರೋಪದ ಅಡಿ ಕೂಡುಮಗಳೂರು ಹುಲುಗುಂದ ಗ್ರಾಮದ ಭಾಸ್ಕರ ನಾಯಕ್ ಅವರ ವಿರುದ್ಧ ದೂರು ದಾಖಲಾಗಿದೆ.

ಹಾಗೆಯೇ ಚಿಹ್ನೆ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ವಿಡಿಯೊಗಳ ಮೂಲಕ ಪ್ರಚಾರ ನಡೆಸಿದ ಆರೋಪದ ಅಡಿ ಅಯ್ಯಂಗೇರಿಯ ಅಬ್ದುಲ್ ರಶೀದ್, ಕಾವೇರಮ್ಮ, ಮಿಶ್ರಿಯಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ, 1860ರ ಕಲಂ 188ರ ಮೇರೆಗೆ ಕುಶಾಲನಗರ ಮತ್ತು ಮಡಿಕೇರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಕಾರ್ಯಗಾರ:

ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳು (ಪಿಆರ್‍ಒ) ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ (ಎಪಿಆರ್‍ಒ) ತರಬೇತಿ ನೀಡಲಾಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಚುನಾವಣಾ ವೀಕ್ಷಕ ಎ.ದೇವರಾಜು ಅವರು ನಗರದ ಸಂತ ಜೋಸೆಫರ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಗ್ರಾ.ಪಂ ಸಾರ್ವತ್ರಿಕ ಚುನಾವಣೆಯು ಪಕ್ಷರಹಿತ ಚುನಾವಣೆ. ಅದರಂತೆ ಕರ್ತವ್ಯ ನಿರ್ವಹಿಸಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಮತದಾನದ ಮೇಲ್ವಿಚಾರಣೆ, ಮತದಾನ ಯಾವುದೇ ಅಡೆತಡೆಯಿಲ್ಲದೆ ಸುಗಮ ಹಾಗೂ ಶಾಂತ ರೀತಿಯಲ್ಲಿ ಚುನಾವಣೆ ನಡೆಸಬೇಕು ಎಂದು ಸೂಚನೆ ನೀಡಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತ್ ಚುನಾವಣೆಗೆ ನಿಯೋಜಿಸಿರುವ ಎಲ್ಲ ಹಂತದ ಅಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಚುನಾವಣೆಗೆ ನಿಯೋಜಿಸಿರುವ ಪ್ರತಿ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಚುನಾವಣಾ ಕಾರ್ಯದಲ್ಲಿ ಲೋಪ ಕಂಡುಬರದಂತೆ ಎಚ್ಚರಿಕೆ ವಹಿಸಬೇಕು. ಆ ದಿಸೆಯಲ್ಲಿ ಗ್ರಾ.ಪಂ.ಚುನಾವಣೆ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.

ತರಬೇತಿದಾರರಾದ ಕೆ.ಜೆ.ದಿವಾಕರ, ಕೆ.ಸಿ.ದಯಾನಂದ, ಪ್ರಶಾಂತ್, ವಿಲ್ಫ್ರೆಡ್ ಕ್ರಾಸ್ತಾ, ನಾರಾಯಣ ರೆಡ್ಡಿ ಇತರರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಮತಗಟ್ಟೆ ಕೇಂದ್ರದಲ್ಲಿ ಮತದಾನಕ್ಕೂ ಮೊದಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಮತ್ತಿತರ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.

ನೋಡಲ್ ಅಧಿಕಾರಿಗಳಾದ ಪಿ.ಶ್ರೀನಿವಾಸ, ವಿರುಪಾಕ್ಷ, ತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕರಾದ ವಿನು, ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿ ಪ್ರಮೋದ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು