ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ‘ತೋಟದಾನೆ’ಗಳಾಗಿ ಬದಲಾದ ಕಾಡಾನೆಗಳು

ಕಾಫಿ ತೋಟಗಳಲ್ಲೇ ಜನನ, ಅಲ್ಲೇ ವಾಸ!
Last Updated 14 ನವೆಂಬರ್ 2020, 20:36 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಫಿ ನಾಡು’ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ. ಕಾಫಿ, ಬಾಳೆ, ಏಲಕ್ಕಿ, ಅಡಿಕೆ ಬೆಳೆ ನಾಶ ಪಡಿಸಿ, ರೈತರಿಗೆ ಸಂಕಷ್ಟ ತಂದೊಡ್ಡುತ್ತಿವೆ. ಬೆಳೆ ನಾಶ ಮಾತ್ರವಲ್ಲದೆ ಜನರ ಪ್ರಾಣಕ್ಕೂ ಕಂಟಕವಾಗುತ್ತಿವೆ. ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ 75 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.

ಜಿಲ್ಲೆಯಲ್ಲಿ ನವೆಂಬರ್‌ನಿಂದ ಮೇ ಅಂತ್ಯದವರೆಗೆ ಕಾಡಾನೆಗಳ ಹಾವಳಿ ಹೆಚ್ಚು. ಬೇಸಿಗೆಯ ಅವಧಿಯಲ್ಲಿ ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಕುಡಿಯುವ ನೀರು, ಆಹಾರ ಲಭಿಸುತ್ತಿಲ್ಲ. ಆಗ ಆಹಾರ ಅರಿಸಿಕೊಂಡು ಕಾಫಿ ತೋಟಕ್ಕೆ ಬಂದ ಆನೆಗಳು ಅಲ್ಲಿಯೇ ಬೀಡುಬಿಡುತ್ತವೆ. ತೋಟಗಳಲ್ಲೇ ಹೆಣ್ಣಾನೆಗಳು ಮರಿಯಾನೆಗೆ ಜನ್ಮ ನೀಡುತ್ತಿವೆ. ಕೆಲವು ಆನೆಗಳು ಅರಣ್ಯ ಪ್ರದೇಶವನ್ನೇ ನೋಡಿಲ್ಲ. ಅವುಗಳಿಗೆ ಕಾಫಿ ತೋಟಗಳೇ ವಾಸ ಸ್ಥಳ.

‘ಕಾಡಾನೆಗಳು ತೋಟಕ್ಕೆ ಹಿಂಡುಹಿಂಡಾಗಿ ಲಗ್ಗೆಯಿಡುತ್ತವೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲು ಮಾತ್ರವಲ್ಲ, ಗಿಡಗಳನ್ನೇ ಉರುಳಿಸಿ ಹಾಳು ಮಾಡುತ್ತವೆ. ಅರಣ್ಯ ಇಲಾಖೆ, ಬಿಡಿಗಾಸಿನ ಪರಿಹಾರ ನೀಡಿ ಸುಮ್ಮನಾಗುತ್ತದೆ. ತೋಟದಲ್ಲಿರುವ ಆನೆಗಳು ಸೆರೆ ಹಿಡಿಯುವ ಕಾರ್ಯಾಚರಣೆಯೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಅರಣ್ಯಕ್ಕೆ ಅಟ್ಟುವ ಕೆಲಸವು ಆಗಿಲ್ಲ’ ಎಂದು ಬಕ್ಕ ಗ್ರಾಮದ ಕಾಫಿ ಬೆಳೆಗಾರರ ಸುಭಾಷ್‌ ನಾಣಯ್ಯ ದೂರಿದರು.

ಪ್ರಯೋಜನಕ್ಕೆ ಬಾರದ ಯೋಜನೆ:

ಆನೆ ಹಾವಳಿ ತಡೆಯಲು ನಿರ್ಮಿಸಿರುವ ‘ಸೋಲಾರ್‌ ಬೇಲಿ’, ’ಕಂದಕ’ ಸಹ ನೆರವಿಗೆ ಬರುತ್ತಿಲ್ಲ. ಆನೆಗಳು ಸೋಲಾರ್‌ ಬೇಲಿಯನ್ನೇ ಮೆಟ್ಟಿ ನಾಡಿಗೆ ಬರುತ್ತಿವೆ. ಕಂದಕಕ್ಕೆ ಆನೆಗಳೇ ಮಣ್ಣು ಜರಿಸಿ ದಾರಿ ಮಾಡಿಕೊಂಡಿವೆ. ಪೂರ್ಣ ಪ್ರಮಾಣದಲ್ಲಿ ರೈಲು ಕಂಬಿ ಅಳವಡಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ.

ಕಾಡಾನೆಯೊಂದಕ್ಕೆ ಪ್ರತಿದಿನ 90ರಿಂದ 272 ಕೆ.ಜಿ ಆಹಾರ ಹಾಗೂ 189 ಲೀಟರ್‌ ನೀರು ಬೇಕು ಎಂದು ಅಧ್ಯಯನವೊಂದು ತಿಳಿಸಿದೆ. ಆದರೆ, ಕಾಡಾನೆಗಳಿಗೆ ಬೇಕಿರುವ ಅಗತ್ಯವಾದಷ್ಟು ಆಹಾರ ಕಾಡಿನಲ್ಲಿ ಲಭ್ಯವಿಲ್ಲ. ಅದೇ ಕಾರಣಕ್ಕೆ ಆನೆಗಳು ನಾಡಿಗೆ ಲಗ್ಗೆಯಿಡುತ್ತಿವೆ. ಹಲಸಿನ ಹಣ್ಣಿನ ಕಾಲದಲ್ಲಿ ಆನೆಗಳ ಹಾವಳಿ ವಿಪರೀತ ಎನ್ನುತ್ತಾರೆ ರೈತರು.

ಭಯದ ವಾತಾವರಣ:

ಕಾಫಿ ತೋಟದ ಲೈನ್‌ಮನೆಗಳಲ್ಲಿ ಸಾವಿರಾರು ಕಾರ್ಮಿಕರು ವಾಸಿಸುತ್ತಿದ್ದು ಅವರೆಲ್ಲರೂ ಕಾಡಾನೆ ಭಯದಲ್ಲೇ ಜೀವನ ನಡೆಸುವ ಸ್ಥಿತಿಯಿದೆ. ತೋಟದಲ್ಲಿ ಕೆಲಸ ಮಾಡುವ ವೇಳೆಯೂ ಅವರಿಗೆ ಕಾಡಾನೆಯದ್ದೇ ಚಿಂತೆ.

ಸುಂಟಿಕೊಪ್ಪ, ಸಿದ್ದಾಪುರ, ತಿತಿಮತಿ, ಸಂಪಾಜೆ, ಮಾಲ್ದಾರೆ, ಚೆನ್ನಂಗಿ, ಚೆನ್ನಯ್ಯನಕೋಟೆ, ಗುಹ್ಯ, ಕಕ್ಕಟಕಾಡು, ಚೆಟ್ಟಳ್ಳಿ, ದಿಡ್ಡಳ್ಳಿ, ಆಲೂರು –ಸಿದ್ದಾಪುರ, ಮಾದಾಪುರ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT