ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆಗೆ ಬೆಳೆಗಾರರು ಕಂಗಾಲು

ಸೋಮವಾರಪೇಟೆ: ಕಾಫಿಹಣ್ಣು ಒಣಗಿಸಲು ಪರದಾಟ; ಭತ್ತ ಕೊಯ್ಲಿಗೆ ತೊಂದರೆ
Last Updated 3 ಡಿಸೆಂಬರ್ 2020, 14:34 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಳೆ ಬೀಳುವ ವಾತಾವರಣ ಇರುವುದರಿಂದ ತಾಲ್ಲೂಕಿನ ಕಾಫಿ ಮತ್ತು ಭತ್ತದ ಕೃಷಿಕರು ಕಂಗಾಲಾಗಿದ್ದಾರೆ.

ಮುಂಗಾರು ವಿಳಂಬ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ, ಕಾರ್ಮಿಕರ ಕೊರತೆ, ರೋಗಬಾಧೆ ಮತ್ತು ಫಸಲು ನಷ್ಟದ ಭೀತಿಯಲ್ಲಿದ್ದ ಭತ್ತ ಮತ್ತು ತೋಟಗಾರಿಕಾ ಬೆಳೆಗಾರರು ಅಲ್ಲಲ್ಲಿ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಬಂದ ಫಸಲನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.

ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು, ಉತ್ತಮ ಇಳುವರಿಯೂ ಸಿಗುತ್ತಿತ್ತು. ಆದರೀಗ, ಶಾಂತಳ್ಳಿ ಹೋಬಳಿ ಹೊರತುಪಡಿಸಿ, ಉಳಿದ ಮೂರು ಹೋಬಳಿಗಳಲ್ಲಿ ಹೆಚ್ಚು ಭತ್ತ ಬೆಳೆಯಲಾಗುತ್ತಿದೆ. ಕುಶಾಲನಗರ ಹೋಬಳಿ ಹೊರತು ಪಡಿಸಿದರೆ ಎಲ್ಲೆಡೆ ಕಾಫಿ, ಕಾಳು ಮೆಣಸು ಬೆಳೆಯಾಗುತ್ತಿದೆ. ಈಗ ಭತ್ತ ಕೊಯ್ಲಿಗೆ ಬಂದಿದ್ದು, ಅಲ್ಲಲ್ಲಿ ಕಟಾವು ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೇಕಾಫಿ ಹಣ್ಣಾಗಿದ್ದು, ಕೊಯ್ಲು ಮಾಡಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸುಮಾರು 9 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಕಾರ್ಯ ನಡೆದಿದೆ.

ಹರಗ, ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಹೆಗ್ಗಡ ಮನೆ, ಮಲ್ಲಳ್ಳಿ, ಕೊತ್ತನಳ್ಳಿ, ನಾಡ್ನಳ್ಳಿ ಸೇರಿದಂತೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಕಾಡಾನೆ, ಕಾಡುಕೋಣಗಳ ಕಾಟವಿದ್ದರೂ ಭತ್ತ ಬೆಳೆಯಲಾಗಿತ್ತು. ಕಾಡುಪ್ರಾಣಿಗಳು ತಿಂದು ಉಳಿಸಿದ ಭತ್ತ ಫಸಲನ್ನು ತೆಗೆದುಕೊಂಡು ಹೋಗುವ ದುಸ್ಥಿತಿಯಿದೆ. ಪ್ರತೀ ವರ್ಷ ಇದೇ ಸಮಯದಲ್ಲಿ ಮಳೆ ಬೀಳುತ್ತಿರುವುದರಿಂದ ಭತ್ತದ ಫಸಲಿಗೆ ಹೆಚ್ಚಿನ ಹಾನಿಯಾಗುತ್ತಿದೆ.

‘ಕಷ್ಟದಲ್ಲಿ ಭತ್ತ ಕೃಷಿ ಮಾಡುತ್ತಿರುವುದರಿಂದ ಅಸಲು ಪಡೆಯುವುದೇ ಕಷ್ಟವಾಗಿದೆ. ಕಾಫಿ ಮತ್ತು ಭತ್ತದ ಫಸಲು ಒಟ್ಟಿಗೆ ಬರುತ್ತಿದ್ದು, ಕಾರ್ಮಿಕರ ಕೊರತೆ ಇದೆ. ಇದರಿಂದಾಗಿ ಮಳೆಗೂ ಮುಂಚೆ ಭತ್ತದ ಫಸಲು ಮನೆ ಸೇರುವುದು ಕಷ್ಟವಾಗುತ್ತಿದ್ದು, ನಷ್ಟ ಅನುಭವಿಸಬೇಕಾಗಿದೆ‌’ ಎಂದು ಐಗೂರು ಗ್ರಾಮದ ಭತ್ತದ ಕೃಷಿಕ ಕೆ.ಪಿ. ದಿನೇಶ್ ಬೇಸರ ವ್ಯಕ್ತಪಡಿಸಿದರು.

‘ಮಳೆಯಲ್ಲಿಯೇ ಕೆಲವರು ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಿ ಒಣಗಿಸಲು ಪರದಾಡುತ್ತಿದ್ದರು. ಈಗ ಅಲ್ಲಲ್ಲಿ ಮಳೆ ಬೀಳುತ್ತಿದೆ. ಜೋರು ಮಳೆಯಾದಲ್ಲಿ ಗಿಡಗಳಲ್ಲಿಯೇ ಹಣ್ಣಾದ ಕಾಫಿ ಒಡೆದು ಕೆಳಗೆ ಬಿದ್ದು ಮಣ್ಣು ಸೇರುತ್ತದೆ. ಕಾರ್ಮಿಕರ ಕೊರತೆಯಿಂದ ಹೆಚ್ಚಿನ ತೋಟಗಳಲ್ಲಿ ಇಂದಿಗೂ ಕಳೆ ತೆಗೆದು ಗಿಡದ ಸುತ್ತ ಸ್ವಚ್ಛ ಮಾಡಿಲ್ಲ. ಇದರಿಂದಾಗಿ ಕೆಳಗೆ ಬಿದ್ದ ಕಾಫಿಯನ್ನು ಆಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಅಬ್ಬೂರುಕಟ್ಟೆ ಗ್ರಾಮದ ಯತೀಶ್ ಹೇಳಿದರು.

‘ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿ, ನಂತರ ಎರಡು ವಾರ ಸುರಿದ ಧಾರಾಕಾರ ಮಳೆ, ನಂತರದ ಬಿಸಿಲಿನಿಂದಾಗಿ ಆಗಸ್ಟ್‌ ತಿಂಗಳಲ್ಲೇ ಕೆಲ ಗಿಡಗಳಲ್ಲಿ ಕಾಫಿ ಕಾಯಿಗಳು ಹಣ್ಣಾಗಿದ್ದವು. ಹೆಚ್ಚಿನ ಕಡೆಗಳಲ್ಲಿ ಹೂ ಮಳೆ ಸರಿಯಾಗಿ ಆಗಲಿಲ್ಲ. ನಂತರ ಮುಂಗರು ಏಕಾಏಕಿ ಸುರಿದಿದ್ದರಿಂದ ಕಾಫಿಯೊಂದಿಗೆ ಮೆಣಸಿನ ಫಸಲು ನೆಲ ಸೇರಿತ್ತು. ಈಗ ಉಳಿದ ಫಸಲು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ರಮೇಶ್ ತಿಳಿಸಿದರು.

‘ಸೋನೆ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವದರಿಂದ ಹಣ್ಣು ಕಾಫಿಯನ್ನು ಕೊಯ್ಲು ಮಾಡಿ, ಒಣಗಿಸಲು ಸಾಧ್ಯವಾಗುತ್ತಿಲ್ಲ. ಪಲ್ಪರ್ ಮಾಡಿದ ಕಾಫಿಯನ್ನು ಒಣಗಿಸದೇ ಇದ್ದರೆ ಬೀಜ ಕಪ್ಪು ಬಣ್ಣಕ್ಕೆ ತಿರುಗಿ ಬೇಡಿಕೆ ಕಳೆದುಕೊಳ್ಳುತ್ತದೆ’ ಎಂದು ಬೆಳೆಗಾರರು ಅಳಲು ತೋಡಿಕೊಂಡರು.

ತಾಲ್ಲೂಕಿನಲ್ಲಿ 28,590 ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಮತ್ತು 5690 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT