‘ವಿದ್ಯಾರ್ಥಿಗಳಲ್ಲಿ ಶಿಸ್ತು, ಶ್ರದ್ಧೆ ಇರಲಿ’

7
ಎಫ್ಎಂಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

‘ವಿದ್ಯಾರ್ಥಿಗಳಲ್ಲಿ ಶಿಸ್ತು, ಶ್ರದ್ಧೆ ಇರಲಿ’

Published:
Updated:
Deccan Herald

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಶನಿವಾರ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮೋಹನ್ ಕೆ. ಅಪ್ಪಾಜಿ ಮಾತನಾಡಿ, ‘ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟವಾಗಿದ್ದು, ಶಿಸ್ತು, ಶ್ರದ್ಧೆ, ತಾಳ್ಮೆ, ಆಸಕ್ತಿಯನ್ನು ಮೈಗೂಡಿಸಿಕೊಂಡು ಮುಂದೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ಕೆಲವು ಪೋಷಕರು ವಿದ್ಯಾರ್ಥಿ ಸಂಘಗಳನ್ನು ವಿರೋಧಿಸುತ್ತಾರೆ. ಆದರೆ, ವಿದ್ಯಾರ್ಥಿ ಸಂಘ ರಾಷ್ಟ್ರದ ಒಂದು ಶಕ್ತಿಯಾಗಿದೆ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಂಘಟನೆಗಳಿಂದ ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಚುನಾವಣೆಗಳಲ್ಲಿ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಮತ ಚಲಾಯಿಸಬೇಕು. ಉನ್ನತ ರಾಷ್ಟ್ರ ನಾಯಕನ ಆಯ್ಕೆ ಮಾಡಿ ದೇಶದ ಭವಿಷ್ಯ ಕಾಪಾಡಬೇಕು ಎಂದು ಕರೆ ನೀಡಿದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿನೆರವಂಡ ಅಪ್ಪಯ್ಯ ಮಾತನಾಡಿ, ‘ದೇಶದಲ್ಲಿ ಕೊಡಗಿನ ಸಂಸ್ಕೃತಿಗೆ ವಿಶೇಷ ಗೌರವವಿದೆ. ಜಿಲ್ಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಸಾಕಷ್ಟು ಅಭಿಮಾನವಿದೆ. ಆದ್ದರಿಂದ, ಈ ಗೌರವವನ್ನು ವಿದ್ಯಾರ್ಥಿಗಳು ಮುಂದೆಯೂ ಉಳಿಸಿಕೊಂಡು ಹೋಗಬೇಕು. ಪೋಷಕರು ಕಷ್ಟಪಟ್ಟು ತಮ್ಮನ್ನು ಕಾಲೇಜಿಗೆ ಕಳುಹಿಸುತ್ತಾರೆ. ಅವರ ಆಸೆಗಳನ್ನು ವಿದ್ಯಾರ್ಥಿಗಳು ಈಡೇರಿಸಬೇಕು. ಜತೆಗೆ ಬೋಧಕರಿಗೆ ಗೌರವ ನೀಡಬೇಕು. ಶಿಕ್ಷಣದೊಂದಿಗೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಶಿಸ್ತಿನಿಂದ ಇರಬೇಕು, ವಿದ್ಯಾರ್ಥಿ ಸಂಘಟನೆಯು ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಪ್ರತಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ತಮ್ಮದೇ ಆದ ಸ್ಥಾನಗಳಿಸಬೇಕೆಂದು ಸಲಹೆ ಮಾಡಿದರು.

ರಾಘವ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಸಿ.ಪೊನ್ನಣ್ಣ, ಉಪಾಧ್ಯಕ್ಷೆ ಎಂ.ಎಸ್. ಗೌತಮಿ, ಕಾರ್ಯದರ್ಶಿ ಬಿ.ಎಚ್.ಸಂಪ್ರೀತ್, ಜಂಟಿ ಕಾರ್ಯದರ್ಶಿಯಾಗಿ ಸಿ.ಆರ್.ವಿನಯ್, ಎಸ್.ಬಿ.ಕಾವೇರಮ್ಮ, ಸಾಂಸ್ಕೃತಿಕ ಕಾರ್ಯದರ್ಶಿ ರಾಯ್ ಡನ್ ಪದಗ್ರಹಣ ಸ್ವೀಕರಿಸಿದರು. ವಿದ್ಯಾರ್ಥಿ ಸಂಘದ ಸಲಹೆಗಾರ ತಿಪ್ಪೇಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !