ಮಂಗಳವಾರ, ನವೆಂಬರ್ 19, 2019
23 °C
ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಬಿಎಸ್‌ವೈ ಆಡಿಯೊ ಪ್ರಕರಣ: ಕೊಡಗಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

Published:
Updated:
Prajavani

ಮಡಿಕೇರಿ: ‘ಆಪರೇಷನ್ ಕಮಲ’ದ ಬಿಜೆಪಿ ಕುತಂತ್ರ ರಾಜಕಾರಣವು ವಿಡಿಯೊ ಮೂಲಕ ಬಹಿರಂಗಗೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ರಾಷ್ಟ್ರಪತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ‘ಮೈತ್ರಿ’ ಸರ್ಕಾರವನ್ನು ವಾಮಮಾರ್ಗದ ಮೂಲಕ ಕೆಡವಿರುವುದಕ್ಕೆ ಬಲವಾದ ವಿಡಿಯೊ ಸಾಕ್ಷ್ಯ ಲಭಿಸಿದೆ. ಕಾಂಗ್ರೆಸ್‌ 14, ಜೆಡಿಎಸ್‌ 3 ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿಸಿ 17 ಶಾಸಕರು ರಾಜೀನಾಮೆ ಕೊಡಿಸಿದ್ದರು. ಅಂದು ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಗೂ ತಮಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಶಾಸಕರ ರಾಜೀನಾಮೆಗೆ ಯಾರು ಕಾರಣವೆಂಬುದು ಗೊತ್ತಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಹುಬ್ಬಳಿಯಲ್ಲಿ ನಡೆದಿದ್ದ ಬಿಜೆಪಿಯ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಅವರು 17 ಶಾಸಕರ ತ್ಯಾಗದ ಫಲವಾಗಿ ನಮ್ಮ ಸರ್ಕಾರವನ್ನು  ರಚಿಸಲು ಸಾಧ್ಯವಾಯಿತು. ಅನರ್ಹರನ್ನು ಮರೆತು ಮಾತನಾಡುವುದು ಸರಿಯಲ್ಲ. ಅವರ ಬಗ್ಗೆಯೂ ಯೋಚಿಸಬೇಕು. ಅವರಿಗೂ ಸ್ಥಾನಮಾನ ಕೊಡಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಡಿಯೂರಪ್ಪ ಅವರೂ ನನ್ನ ಧ್ವನಿಯೇ ಅದನ್ನು ನಾನೇ ಹೇಳಿದ್ದು ಎಂದು ಒಪ್ಪಿಕೊಂಡಿದ್ದಾರೆ. ಕೊನೆಗೂ ಸತ್ಯ ಸಾಬೀತಾಗಿದೆ. ಕಾನೂನು ಬಾಹಿರ, ಅಸಂವಿಧಾನಿಕ ಚಟುವಟಿಕೆ ಸಮಾಜಕ್ಕೆ ಮಾರಕ ಎಂದು ಮಂಜುನಾಥ್‌ ಅವರು ಬಿಜೆಪಿ ಮುಖಂಡರ ವಿರುದ್ಧ ಗುಡುಗಿದರು.

‘ಮೈತ್ರಿ’ ಸರ್ಕಾರವನ್ನು ದುರುದ್ದೇಶದಿಂದ ಅಸ್ಥಿರಗೊಳಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಮುಖಂಡರ ಮೇಲೆ ಕಾನೂನು ಕ್ರಮ ಆಗಬೇಕು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು. ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್‌ ಹಿರಿಯ ಮುಖಂಡ ಮಿಟ್ಟು ಚಂಗಪ್ಪ, ಟಿ.ಪಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಯೋಜಕ ತೆನ್ನೀರಾ ಮೈನಾ, ಮುಖಂಡರಾದ ಅಬ್ದುಲ್ ರಜಾಕ್, ಹೊಸೂರು ಸೂರಜ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ ಫ್ಯಾನ್ಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)