ಸೋಮವಾರಪೇಟೆ: ‘ನಮ್ಮ ಮಣ್ಣಿನ ಸಂಸ್ಕೃತಿ, ಇಲ್ಲಿನ ಕಲೆ, ಆಚಾರ -ವಿಚಾರ, ಪದ್ದತಿ ಪರಂಪರೆ ಎಂದಿಗೂ ಬಿಡದೆ, ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗುವ ಕೆಲಸ ಸಮಾಜ ಬಾಂಧವರಿಂದ ಆಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಹೇಳಿದರು.
ಇಲ್ಲಿನ ಕೊಡವ ಸಮಾಜದ ಭಾನುವಾರ ನಡೆದ ಕೈಲು ಮುಹೂರ್ತ ಸಂತೋಷ ಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಕೊಡಗಿನಲ್ಲಿ ಸುಂದರ ಪರಿಸರ, ಹವಾಗುಣ ವಿಶ್ವದ ಯಾವುದೇ ಭಾಗದಲ್ಲಿ ಸಿಗುವುದಿಲ್ಲ. ಯಾರೂ ತಮ್ಮ ಹಿರಿಯರು ಮಾಡಿರುವ ಇಲ್ಲಿಯ ಆಸ್ತಿಯನ್ನು ಮಾರದೆ, ಅದರಲ್ಲಿ ಕೃಷಿ ಮಾಡಿಕೊಂಡು ಹೋಗಬೇಕಿದೆ. ನಮ್ಮ ಯುವಜನಾಂಗ ಉದ್ಯೋಗದ ಕಾರಣದಿಂದ ಹೊರ ರಾಜ್ಯ, ಹೊರದೇಶಕ್ಕೆ ತೆರಳಿದರೂ, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕು’ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ‘ಸರ್ಕಾರ ಕೊಡವರ ಭಾವನೆ ಅರ್ಥ ಮಾಡಿಕೊಂಡು, ನಮ್ಮ ಬೇಡಿಕೆ ಈಡೇರಿಸುವ ಮೂಲಕ ಹಾಗೂ ಕೊಡವರಿಗೆ ಬುಡಕಟ್ಟು ಜನಾಂಗದ ಪ್ರಾತಿನಿಧ್ಯ ನೀಡಿ ಸರ್ಕಾರದ ಸೌಲಭ್ಯ ನೀಡುವಂತಾಗಬೇಕು. ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಅಥವಾ ಉದ್ಯೋಗಕ್ಕೆ ತೆರಳಿದ ಯುವಜನಾಂಗ ಅಲ್ಲಿಯೇ ನೆಲೆ ನಿಲ್ಲುತ್ತಿದ್ದಾರೆ. ಇದು ಭಾಷೆ ಮತ್ತು ಸಂಸ್ಕೃತಿಯ ಅವನತಿಗೆ ಕಾರಣವಾಗುತ್ತಿದೆ’ ಎಂದರು.
ಸಮಾಜದಿಂದ ಸನ್ಮಾನಿತರಾದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ‘ಜಿಲ್ಲೆಯ ಕೊಡವ ಸಮಾಜಗಳು ಕೇವಲ ಸಭೆ, ಸಮಾರಂಭ, ಮದುವೆ ಕಾರ್ಯವನ್ನು ಮಾಡುವ ಮಂಟಪಗಳಿಗೆ ಸೀಮಿತರಾಗದೆ ಕೊಡವ ಸಂಸ್ಕೃತಿ, ಕೊಡವಾಮೆಯನ್ನು ಪೋಷಿಸುವ ಕೇಂದ್ರವಾಗಬೇಕು. ಕೊಡವರ ಎಲ್ಲಾ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಮಕ್ಕಳಿಗೆ ನಮ್ಮ ಪದ್ಧತಿ ಪಾಠ ಹೇಳಬೇಕು. ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ,‘ತಾಲ್ಲೂಕಿನಲ್ಲಿ ಕೊಡವರ ಸಂಖ್ಯೆ ಕಡಿಮೆ ಇದ್ದರೂ ಎಲ್ಲಾ ಸದಸ್ಯರ ಸಹಕಾರದಿಂದ ಸಮಾಜ ಅಭಿವೃದ್ದಿಯಾಗಿದೆ. ವಿದ್ಯಾನಿಧಿ ಮೂಲಕ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ’ ಎಂದರು.
ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಕೋಚಮಂಡ ಮನುಬಾಯಿ, ಸಮಾಜದ ಉಪಾಧ್ಯಕ್ಷರಾದ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್ ಮತ್ತು ಪದಾಧಿಕಾರಿಗಳು ಇದ್ದರು. ಸಮಾರಂಭದ ಅಂಗವಾಗಿ ವಿವಿಧ ಸಾಂಸೃತಿಕ ಕಾರ್ಯಕ್ರಮಗಳು. ಸ್ಫರ್ಧಾ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.